ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸಮಸಮಾಜ ನಿರ್ಮಾಣದ ಆಶಯ ಬಿತ್ತಿದ ಕನಕದಾಸರು ಆದರ್ಶವಾದರೆ, ಚಿತ್ರದುರ್ಗದ ಕೋಟೆಯ ರಕ್ಷಣೆಗಾಗಿ ಹೋರಾಡಿದ ವೀರ ವನಿತೆ ಓಬವ್ವನವರು ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಶಿಕಾರಿಪುರ ತಾಲೂಕು ಆಡಳಿತ, ಪುರಸಭೆ ವತಿಯಿಂದ ನಗರದ ಕನಕ ಪಾರ್ಕ್’ನಲ್ಲಿ ನಡೆದ ಕನಕದಾಸರ ಹಾಗೂ ವೀರ ವನಿತೆ ಒನಕೆ ಓಬವ್ವರ ಜನ್ಮ ಜಯಂತಿಯ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಕನಕದಾಸರು ನಮಗೆಲ್ಲರಿಗೂ ಆದರ್ಶವಾಗಬೇಕು. ಅವರ ಜೀವನ ಸಂದೇಶ ನಮಗೆಲ್ಲರಿಗೂ ಪ್ರೇರಣೆಯಾಗಬೇಕು. ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಕನಕದಾಸರ ಚಿಂತನೆಗಳು ಒಂದು ಮೈಲಿಗಲ್ಲು. ಅವರ ವೈಚಾರಿಕ ಚಿಂತನೆ, ಸಾಮಾಜಿಕ ಕಾಳಜಿ, ಭಕ್ತಿ, ಸಮಸಮಾಜ ನಿರ್ಮಾಣದ ಆಶಯ, ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ತೋರಿದ ಮಾರ್ಗಗಳು ಸದಾ ಪ್ರಸ್ತುತವಾಗಿದೆ ಎಂದರು.
ಇದರೊಂದಿಗೆ ಚಿತ್ರದುರ್ಗದ ಕೋಟೆಯ ರಕ್ಷಣೆಗಾಗಿ ಹೋರಾಡಿದ ವೀರ ವನಿತೆ ಓಬವ್ವನವರು ತೋರಿದ ಧೈರ್ಯ ಈ ನೆಲದ ನಾರಿ ಶಕ್ತಿಗೆ ಸಾಕ್ಷಿಯಾಗಿ ನಿರಂತರ ಪ್ರೇರಣೆ ನೀಡುತ್ತಿವೆ ಎಂದರು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ, 354 ಕೋಟಿ ರೂ. ವೆಚ್ಚದಲ್ಲಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ, ಕನಕದಾಸರ ಹೆಸರಲ್ಲಿ 50 ಹೊಸ ವಿದ್ಯಾರ್ಥಿನಿಲಯಗಳ ನಿರ್ಮಾಣ ನಮ್ಮ ಬಿಜೆಪಿ ಸರ್ಕಾರವು ಮಾಡಿದೆ ಎಂದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷರಾದ ಕಬ್ಬಡಿ ರಾಜಣ್ಣ, ಪುರಸಭೆ ಅಧ್ಯಕ್ಷರಾದ ರೇಖಾಬಾಯಿ ಮಂಜುನಾಥ್, ಪುರಸಭೆಯ ಸದಸ್ಯರು, ಭದ್ರಾಪುರ ಹಾಲಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚೆನ್ನವೀರಪ್ಪ, ವಸಂತ ಗೌಡ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post