ಕಲ್ಪ ಮೀಡಿಯಾ ಹೌಸ್ | ಸೊರಬ |
ಮಳೆ, ಹವಾಮಾನ ವೈಪರಿತ್ಯದಿಂದಾಗಿ ಗುಡವಿ ಪಕ್ಷಿಧಾಮಕ್ಕೂ ಬಿಸಿ ತಟ್ಟಿದ್ದು ಪ್ರಸಕ್ತ ಮಳೆಯ ರಭಸಕ್ಕೆ ಅಲ್ಲಲ್ಲಿ ಹಾನಿಯುಂಟಾಗಿತ್ತು. ಶೀಘ್ರ ದುರಸ್ತಿಗೆ ಇಲಾಖೆ ಮುಂದಾಗಿದ್ದು ಕಾಮಗಾರಿ ನಡೆಯುತ್ತಿದೆ ಎಂದು ಕಾರ್ಗಲ್ ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ಸಂಧ್ಯಾ ತಿಳಿಸಿದರು.
ಚಂದ್ರಗುತ್ತಿ ಹೋಬಳಿ ಗುಡವಿ ಪಕ್ಷಿಧಾಮದ ಕಾರ್ಯಪ್ರಗತಿ ಪರಿಶೀಲನೆಗಾಗಿ ಭೇಟಿ ನೀಡಿ ಮಾತನಾಡಿದರು.
ಆದಾಯ ಕಡಿಮೆ ಇರುವ ಇಲ್ಲಿಗೆ ಅನುದಾನದ ಕೊರತೆ ಇದ್ದು, ಇರುವ ಅನುದಾನದಲ್ಲೇ ನಿರ್ವಹಣೆ ಮಾಡಲಾಗುತ್ತಿದೆ. ಆಗಾಗ್ಗೆ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಸ್ಥಳೀಯವಾಗಿ ಆಡಳಿತ ಮತ್ತು ಜನತೆ ಸಹಕರಿಸಿದರೆ ಈ ಧಾಮವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯ. ಜೀವವೈವಿಧ್ಯ ಸಮಿತಿ ಮುಂದಾದರೆ ಇಲ್ಲಿ ಪರಿಸರ ಜಾಗೃತಿ, ಪಕ್ಷಿಗಳ ಯೋಗಕ್ಷೇಮದ ಕುರಿತು ಕಾರ್ಯಕ್ರಮ ನಡೆಸಲು ಅವಕಾಶವಿದೆ ಎಂದರು.
ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ದೇಶದ ಹವಮಾನ ಬದಲಾವಣೆ ಹಾಗೂ ಕೃಷಿಯಲ್ಲಿ ರಾಸಾಯನಿಕ ಬಳಕೆ ಇತ್ಯಾದಿ ಕಾರಣಗಳಿಂದ ಪಕ್ಷಿ ವಲಸೆಯಲ್ಲಿನ ಕ್ಷೀಣತೆ ಕುರಿತು ಆತಂಕ ವ್ಯಕ್ತಪಡಿಸಿದರು.
ಮುಖ್ಯವಾಗಿ ಜನತೆಯಲ್ಲಿ ಪಕ್ಷಿಗಳ ಬಗ್ಗೆ ಕಾಳಜಿ ಉಂಟಾಗಬೇಕು. ಅವುಗಳ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧದ ಅರಿವು ಮೂಡಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಜೀವವೈವಿಧ್ಯ ಸಮಿತಿಯು ಸೇರಿದಂತೆ ಪರಿಸರಾಸಕ್ತರು, ಪಕ್ಷಿಪ್ರೇಮಿಗಳು ಕೈಜೋಡಿಸುತ್ತಾರೆ ಎಂದರು.
ಗುಡವಿ ಪಕ್ಷಿಧಾಮದಲ್ಲಿ ವಿನಾಶದ ಅಂಚಿನಲ್ಲಿರುವ ಆರ್ಕಿಡ್ ವನ ನಿರ್ಮಾಣಕ್ಕೆ ಮುಂದಾಗುವುದು, ಸಿಬ್ಬಂದಿ ಹೆಚ್ಚಳ, ಸ್ವಚ್ಚತೆಯ ಬಗ್ಗೆ ಗಮನಹರಿಸುವ ಕುರಿತು ಚರ್ಚೆಯಾಯಿತು.
ವನ್ಯಜೀವಿ ವಿಭಾಗದ ಫಾರೆಸ್ಟರ್ ಮಂಜುನಾಥ್, ಪರಮೇಶ್ವರ, ವಾಚರ್ ರಾಮಣ್ಣ, ಅಕ್ಕಮ್ಮ ಮತ್ತಿತರರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post