ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮ ಮನೆಯ ಅಂಗಳದಲ್ಲಿ ಮೈನಾ ಹಕ್ಕಿಯ ಮರಿ ಹುಟ್ಟಿ ಅದು 5 ದಿನವೂ ಆಗಿರಲಿಲ್ಲ! ನೆಲ್ಲಿಯ ಬುಡದಲ್ಲಿ ಅವಿತು ಕುಳಿತು ತನ್ನ ತಾಯಿ ಬರುವ ಹಾದಿ ಕಾದು ಕುಳಿತಿತ್ತು – ಗೊರವಂಕದ ಮರಿ.
ಅದೊಂದು ದಿನ ಕಚೇರಿ ಮುಗಿಸಿ ಬಂದ ನಾನು ಮನೆಯ ಮುಂಭಾಗದಲ್ಲಿರುವ ನಲ್ಲಿಯಲ್ಲಿ ಕಾಲು ತೊಳೆದು ಕೊಳ್ಳಲು ಹೋದಾಗ ಭಯದಿಂದ ನಲ್ಲಿಯ ಮುಂದೆ ಇದ್ದ ಬಕೆಟ್ ಹಿಂಭಾಗದಲ್ಲಿ ಅವಿತುಕೊಳ್ಳುವ ಪ್ರಯತ್ನ ಮಾಡಿತ್ತು.
5 ದಿನದ ತನ್ನ ಕಂದಮ್ಮನ ಬಾಯಿಗೆ ತುತ್ತು ನೀಡಲು ತಾಯಿ ನಮ್ಮ ಮನೆಯ ಮುಂದೆ ಮರದ ರಂಬೆಯಲ್ಲಿ ಕುಳಿತಿತ್ತು. ತನ್ನ ಮರಿಗೆ ಆಹಾರ ನೀಡಲು ಇತ್ತ ತನ್ನ ತಾಯಿಯ ನೋಡುತ್ತಾ ಇತ್ತು ಪುಟ್ಟ ಕಂದಮ್ಮ ಆಗಸದೆಡೆಗೆ ಬಾಯಿ ತೆರೆದು. ಕಣ್ಣ್ ರೆಪ್ಪೆ ಮುಚ್ಚಿ ಬಿಡುವುದರೊಳಗೆ ಅದರ ಬಾಯಿಗೆ ತುತ್ತು ಇಟ್ಟು ಹಾರಿ ಹೋಗಿತ್ತು.
ನಮ್ಮ ಮನೆಯ ಮುಂದೆ ಪುಟ್ಟ ಹಕ್ಕಿ ಹೆಜ್ಜೆಯ ಮೇಲೆ ಹೆಜ್ಜೆ ಹಾಕಿತ್ತು, ಹುಟ್ಟಿ 5 ದಿನಗಳು ತುಂಬಿದ್ದ ಹಸಿಕೊಸು! ನಂತರದ ದಿನ ತಾಯಿ ಮತ್ತು ತಂದೆ 3 ದಿನಗಳ ಕಾಲ ತಾಯಿ ತನ್ನ ಕಂದನಿಗೆ ತುತ್ತು ನೀಡುತ್ತಾ ಇದ್ದರೆ ಅದರ ತಂದೆ ಅದರ ಕಿವಿಯಲ್ಲಿ ಪಿಸುಗುಡುತ್ತಿತ್ತು. ಬಹುಶಃ ಹಾರಲು ಬೇಗ ಬೇಗ ಕಲಿ, ಇಲ್ಲದಿದ್ದರೆ ಇಲ್ಲಿರುವ ಮನುಷ್ಯರು ಹಾಗೂ ಕಳ್ಳ ಬೆಕ್ಕುಗಳಿಂದ ನಿನ್ನ ಜೀವಕ್ಕೆ ಅಪಾಯ ತಪ್ಪಿದ್ದಲ್ಲ ಎಂದಿರಬಹುದು!
ನಮ್ಮ ಮನೆಯ ಮುಂಭಾಗದಲ್ಲಿರುವ ಹೊಂಗೆಯ ಮರದಲ್ಲಿ ಅದರ ತಂದೆ ಕಾಯುತ್ತಾ ಕುಳಿತರೆ ಅದರ ತಾಯಿ ಅದರ ಬಾಯಿಗೆ ಆಗಾಗ ತುತ್ತು ನೀಡುತ್ತಿತ್ತು. ಒಂದೆರೆಡು ಬಾರಿ ಕೀಟ ನೀಡಿದರೆ ಹಲವು ಬಾರಿ ಯಾವುದೋ ಹಣ್ಣಿನ ಸಣ್ಣ ಸಣ್ಣ ತುಣುಕು ನೀಡುತ್ತಿತ್ತು.
ಸತತ ನಾಲ್ಕು ದಿನಗಳ ಕಾಲ ನಮ್ಮ ಮನೆಯ ಅಂಗಳದಲ್ಲಿ ಮೈನಾ ಹಕ್ಕಿಗಳು ಸಂಸಾರ ನಡೆಸಿದ್ದವು. ಅಂಗಳದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಇದ್ದ ಮೈನಾ ಮರಿಯ ಹತ್ತಿರ ಹೋಗಿ ಛಾಯ ಚಿತ್ರ ನನ್ನ ಮೊಬೈಲ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದೆ. ಆ ಮರಿ ಎಷ್ಟು ಜಾಣ್ಮೆ ಪ್ರದರ್ಶನ ಮಾಡಿತ್ತೆಂದರೆ ಹತ್ತಿರ ಹೋದಾಗ ಅದು ಉಸಿರು ಬಿಡದೆ, ಕಣ್ಣು ಮಿಟುಕಿಸದೆ ಮೌನವಾಗಿ ಕುಳಿತಿತ್ತು.
ಪ್ರಾಯಶಃ ಅದಕ್ಕೆ ಅದರ ಅಮ್ಮ ಪಾಠ ಮಾಡಿದ್ದಳು. ಹಾಗೆಯೇ ಮರದ ಮೇಲೆ ಕುಳಿತಿದ್ದ ಅದರ ತಂದೆ ತನ್ನ ಕಂದನಿಗೆ ಅದರ ಭಾಷೆಯಲ್ಲಿ ಸಂದೇಶ ರವಾನೆ ಮಾಡಿತ್ತು ಎನಿಸುತ್ತದೆ.
ಮನುಷ್ಯ ಜೀವಿ ಹತ್ತಿರ ಬರುತ್ತಿದ್ದಾನೆ ಹುಷಾರ್ ಎಂದು, ನಾನು ಚಿತ್ರ ಸೆರೆ ಹಿಡಿದು ನಮ್ಮ ಮನೆಯ ಒಳಗೆ ಬಂದು ಕಿಟಕಿಯಿಂದ ಮರಿಗೆ ಏನಾದರೂ ತೊಂದರೆ ಆಗಿದೆಯೇ ಎಂದು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. 5 ನಿಮಿಷವಾಗಿಲ್ಲ ಮತ್ತೆ ಮನೆಯ ಅಂಗಳದಲ್ಲಿ ಅದರ ತಾಯಿ ಪ್ರತ್ಯಕ್ಷ! ಮತ್ತೆ ಮತ್ತೆ ಪುಟ್ಟ ಪುಟ್ಟ ಹೆಜ್ಜೆ ಇರಿಸಿತ್ತು ಮೈನಾ ಹಕ್ಕಿಯ ಮರಿ ನಮ್ಮ ಮನೆಯ ಮುಂದೆ ಅಮ್ಮನ ಜೊತೆ ಜೊತೆಗೆ ಮೈನಾ ಹಕ್ಕಿಯ ಮಾತೃ ವಾತ್ಸಲ್ಯ ಮುಂದುವರೆದಿತ್ತು!
ಒಂದು ದಿನ ಮನೆಯ ಮುಂದೆ ಗೊರವಂಕ ಮರಿ ಕಾಣಲಿಲ್ಲ, ಗಾಬರಿಯಿಂದ ನಾನು ನನ್ನ ಪತ್ನಿಯನ್ನು ಕೇಳಿದಾಗ ಅದರ ಅಪ್ಪ ಅಮ್ಮ ಅವರ ಕೂಸಿಗೆ ಹಾರುವುದನ್ನು ಹಾಗೂ ಈ ಕ್ರೂರ ಜಗತ್ತಿನಲ್ಲಿ ಬದುಕುವ ಕಲೆ ಕರಗತ ಮಾಡಿ ಅಂತಿಮವಾಗಿ ಹಾರಿಸಿಕೊಂಡು ಹೋದವು ಎಂಬ ಉತ್ತರ ಕೇಳಿದಾಗ ಮನಸ್ಸು ಹಗುರವಾಗಿತ್ತು.
ಗೊರವಂಕ-ಮೈನಾ ಪಕ್ಷಿಯ ಬಗ್ಗೆ
ವೈಜ್ಞಾನಿಕ ಹೆಸರು: ಆಕ್ರಿಡೋಥೆರಿಸ್ ಟ್ರಿಸ್ಟಿಸ್
ಮೈನಾ ಪಕ್ಷಿಯ ದೇಹ ಕಂದು ಬಣ್ಣದ್ದಾಗಿರುತ್ತದೆ. ತಲೆಯ ಭಾಗ ಮತ್ತು ರೆಕ್ಕೆಗಳ ಕೊನೆಯ ಭಾಗ ಕಪ್ಪು ಅಥವಾ ಕಪ್ಪು ಮಿಶ್ರಿತ ಕಂದ ಬಣ್ಣವನ್ನೊಂದಿವೆ. ಹಳದಿ ಬಣ್ಣದ ಕಾಲು ಕೊಕ್ಕುಗಳಿರುತ್ತವೆ. ಮೈನಾ ಹಕ್ಕಿ ಹಾರುವಾಗ ರೆಕ್ಕೆಯ ಒಳ ಮತ್ತು ಹೊರಭಾಗದಲ್ಲಿ ಕೆಲವು ಬಿಳಿ ಪಟ್ಟಿಗಳನ್ನೂ ಕಾಣಬಹುದು. ಕಣ್ಣಿನ ಸುತ್ತ ಕೆಳ ಮತ್ತು ಹಿಂಭಾಗದಲ್ಲಿ ಹಳದಿ ಪಟ್ಟೆಯು ಎದ್ದು ಕಾಣಿಸುತ್ತದೆ.
ಗೂಡು ಕಟ್ಟುವ ಬಗೆ
ಹಳೆಯ ತೆಂಗಿನ ಮರಗಳಲ್ಲಿರುವ ಪೊಟರೆ, ಹೆಂಚು ಮತ್ತು ಗೋಡೆಯ ಕೆಳಗಿರುವ ಜಾಗ, ಚಿಮಣಿಯಲ್ಲಿನ ಸಂದುಗೊಂದಿ, ಕೊನೆಗೆ ಹೆದ್ದಾರಿಗಳಲ್ಲಿನ ಸೇತುವೆಗಳಲ್ಲಿ ನೀರು ಬಸಿದು ಹೋಗುವ ಸಲುವಾಗಿ ಅಲ್ಲಲ್ಲಿ ಹಾಕಿರುವ ಪೈಪುಗಳಲ್ಲೂ ಗೂಡು ಕಟ್ಟಿಕೊಂಡು ಸುಖ ಸಂಸಾರ ನಡೆಸುತ್ತವೆ.
ಸಂಗಾತಿ ತತ್ವ
ಜೀವನಕ್ಕೊಬ್ಬ ಸಂಗಾತಿ ಎಂಬ ತತ್ವವನ್ನು ಇವು ಪಾಲಿಸುತ್ತವೆ. ನಂಬಿದಂತಿರುವ ಮೈನಾ ಪಕ್ಷಿಗಳು ಜೋಡಿಯಾಗೇ ಇರುತ್ತವೆ. ಏಕಾಂಗಿ ಮೈನಾ ಪಕ್ಷಿ ಕಾಣಸಿಗುವುದು ಇಲ್ಲವೇ ಇಲ್ಲ ಎನ್ನಬಹುದಾದಷ್ಟು ಅಪರೂಪ.
ಎಲ್ಲಿ ಹೆಚ್ಚು ಕಾಣುತ್ತವೆ?
ಇರಾನ್, ಪಾಕಿಸ್ಥಾನ, ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ
ಎಮ್ಮೆ ಕುರುಬ
ಸಿಂಗಪುರ್ ಮತ್ತು ಮಲೇಷಿಯಾದಲ್ಲಿ ಇದನ್ನು ಸ್ಥಳೀಯವಾಗಿ ಜಿಂಬಾಲಾ ಕಬೌರ್ ಎಂದು ಕರೆಯುತ್ತಾರೆ. ಅಕ್ಷರಶಃ ’ಎಮ್ಮೆ ಕುರುಬ’ ಎಂದು!
ಆಹಾರ ಪದ್ದತಿ
ಕಾಳು, ಹುಳ ಹುಪ್ಪಟೆ, ಮನುಷ್ಯ ಬಿಸಾಕಿದ ಪದಾರ್ಥವನ್ನಿವು ತಿನ್ನುತ್ತವೆ. ಗೂಡಿನಲ್ಲಿ ಮರಿ ಇರುವ ಸಮಯದಲ್ಲಿ ಒಂದೇ ಬಾರಿಗೆ ಹತ್ತಕ್ಕೂ ಹೆಚ್ಚು ಹುಳುಗಳನ್ನು ಬಾಯಲ್ಲಿ ಕಚ್ಚಿ ಹಿಡಿದು ಕೊಂಡೊಯ್ಯುವ ಸಾಮರ್ಥ್ಯವೂ ಇವಕ್ಕುಂಟು. ಮೇಯುವ ಜಾನುವಾರುಗಳು ಮೇಲೆ ಇರುವ ಕೀಟ ಮತ್ತು ಉಣ್ಣೆಗಳನ್ನು ಹಿಡಿದು ತಿನ್ನುತ್ತವೆ.
ಉಭಯವಾಸಿ, ಸಸ್ತನಿ, ಕಾಳು, ಧಾನ್ಯ, ಕೀಟ, ಮನುಷ್ಯರು ತಿಂದು ಬಿಸಾಕಿದ ಆಹಾರ ಹೀಗೆ ಏನಾದರೂ ತಿಂದು ಅರಗಿಸಿಕೊಳ್ಳುವ ಸಾಮರ್ಥ್ಯ ಇವುಗಳ ಸಂತತಿ ಹೆಚ್ಚಲು ಕಾರಣ ಎನ್ನಲಾಗಿದೆ.
ಧ್ವನಿ ಅನುಕರಣೆ
ಗಿಳಿಗಳಂತೆ ಇವುಗಳಿಗೂ ಧ್ವನಿಗಳನ್ನು ಅನುಕರಿಸುವ ಸಾಮರ್ಥ್ಯವಿದೆ.
Get in Touch With Us info@kalpa.news Whatsapp: 9481252093
Discussion about this post