ಶ್ರೀನಗರ: ಪಾಕಿಸ್ಥಾನದ ಎಫ್ 16 ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹೊಡೆದುರುಳಿಸಿ, ಇಡಿಯ ವಿಶ್ವವನ್ನೇ ಭಾರತದತ್ತ ತಿರುಗಿ ನೋಡುವಂತೆ ಸಾಧನೆ ಮಾಡಿದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ನಿನ್ನೆ ಕರ್ತವ್ಯಕ್ಕೆ ಮರಳಿದ್ದು, ಸೇನೆ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದೆ.
ಪಾಕ್ ವಶಕ್ಕೆ ಸಿಲುಕಿ, ಸುರಕ್ಷಿತವಾಗಿ ಹಿಂತಿರುಗಿದ ಅಭಿನಂದನ್, ನಿನ್ನೆ ತಮ್ಮ ಕರ್ತವ್ಯಕ್ಕೆ ಮರಳಿದ್ದಾರೆ. ಜಮ್ಮು ಕಾಶ್ಮೀರ ವಿಭಾಗದಲ್ಲೇ ಅಭಿನಂದನ್ ಕರ್ತವ್ಯಕ್ಕೆ ಹಾಜರಾಗಿದ್ದು, ತಮ್ಮ ಸಹೋದ್ಯೋಗಿಗಳೊಂದಿಗೆ ಕುಶಲೋಪರಿ ವಿಚಾರಿಸುತ್ತಿರುವ ಅಭಿನಂದನ್ ಅವರ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಅಭಿನಂದನ್ ಅವರು ತಮ್ಮೆಲ್ಲ ಸಹೋದ್ಯೋಗಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದು, ಅವರ ಸ್ನೇಹಿತರು ಭಾರತ್ ಮಾತಾ ಕಿ ಜೈ ಎನ್ನುತ್ತಿದ್ದರೆ, ಅಭಿನಂದನ್ ಕೂಡ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ.
#WATCH Viral video from Jammu & Kashmir: Wing Commander Abhinandan Varthaman interacting with his colleagues in Jammu and Kashmir. pic.twitter.com/rLwC4d1GUA
— ANI (@ANI) May 4, 2019
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ವಾಯುದಾಳಿ ಬಳಿಕ ಭಾರತದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ಥಾನದ ಯುದ್ಧ ವಿಮಾನಗಳನ್ನು ಅಭಿನಂದನ್ ಬೆನ್ನಟ್ಟಿ ಹೋಗಿದ್ದರು.
ಅಭಿನಂದನ್ ವಿಮಾನವು ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಬಳಿಕ ತಾಂತ್ರಿಕ ಕಾರಣಗಳಿಂದಾಗಿ ಅಭಿನಂದನ್ ಯುದ್ಧ ವಿಮಾನ ಪಾಕಿಸ್ಥಾನದಲ್ಲಿ ಧರೆಗುರುಳಿತ್ತು. ಆಗ ಅಭಿನಂದನ್ ಅವರು ಪಾಕ್ ಸೇನೆ ಕೈಗೆ ಸಿಲುಕಿದ್ದರು. ಅಲ್ಲಿ ಅವರು ಯಾವುದೇ ಮಾಹಿತಿಗಳನ್ನು ಬಿಟ್ಟುಕೊಡದೆ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದರು.
ಆನಂತರ ಭಾರತದ ಸರ್ಕಾರದ ರಾಜತಾಂತ್ರಿಕ ಚಾಣಾಕ್ಷತನದಿಂದ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ಥಾನ ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿತ್ತು.
Discussion about this post