ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ಅಗ್ರಹಾರದಲ್ಲಿರುವ ‘ಅಭಿನವ ಶಂಕರಾಲಯ’ದ #AbhinavaShankaralaya ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಸರಣಿಯು ಶನಿವಾರ ಬೆಳಗ್ಗೆ ಸಹಸ್ರ ಮೋದಕ ಗಣಪತಿ ಹೋಮದೊಂದಿಗೆ ವಿಧ್ಯುಕ್ತ ಚಾಲನೆ ಪಡೆಯಿತು.
ಶ್ರೀ ಶೃಂಗೇರಿ ಶಂಕರ ಮಠ #ShankarMutt ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳಗ್ಗೆಯೇ ಶಾರದಾ ಮಾತೆಗೆ ವಿಶೇಷ ಅಭಿಷೇಕ, ಪೂಜೆ, ಕುಂಕುಮಾರ್ಚನೆ ಅಲಂಕಾರ ನೆರವೇರಿತು.

ಶತಮಾನೋತ್ಸವದ ಸವಿ ನೆನಪಿಗಾಗಿ ನೂತನವಾಗಿ ನಿರ್ಮಿಸಿರುವ ‘ಶ್ರೀ ಸಚ್ಚಿದಾನಂದ ವಿಲಾಸ’ ಗುರುಭವನದಲ್ಲಿ ಶೃಂಗೇರಿಯಿಂದ #Sringeri ಆಗಮಿಸಿದ್ದ ವೇದ ವಿದ್ವಾಂಸರು ಬೆಳಗಿನ ಶುಭ ಮುಹೂರ್ತದಲ್ಲಿ ಶ್ರೀ ಸಹಸ್ರ ಮೋದಕ ಗಣಪತಿ ಹೋಮದೊಂದಿಗೆ ಒಂದು ವಾರಗಳ ಸಮಾರಂಭಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
3 ತಾಸುಗಳ ಹೋಮದ ಅಂತ್ಯದಲ್ಲಿ ನೂರಾರು ಋತ್ವಿಜರು, ಪಂಡಿತರು, ಅದ್ವೈತ ವಿದ್ವಾಂಸರು, ವನಿತೆಯರು ಮತ್ತು ಭಕ್ತರ ಸಮ್ಮುಖ ಪೂರ್ಣಾಹುತಿ ಸಮರ್ಪಣೆ ನೆರವೇರಿತು. ಮುಖ್ಯ ಋತ್ವಿಜರಾದ ಶೃಂಗೇರಿ ವಿದ್ವಾನ್ ಶ್ರೀರಾಮ ಭಟ್, ಕೌಸ್ತುಭ, ಮಹೇಶ ಹೆಗಡೆ ಮತ್ತು ಮಂಜುನಾಥ ಭಟ್ ಹೋಮ ಕುಂಡಕ್ಕೆ ಮಹಾ ಮಂಗಳಾರತಿ ಸಮರ್ಪಿಸಿದರು.

ಮಠದ ಧರ್ಮಾಧಿಕಾರಿ ರಾಮಚಂದ್ರನ್ ಅವರು ಈ ಸಂದರ್ಭ ಮಾತನಾಡಿ, ಅಭಿನವ ಶಂಕರಾಲಯದ ಶತಮಾನೋತ್ಸವವು ಶ್ರೀ ಶಕ್ತಿ ಶಾರದೆಯ ಅನುಗ್ರಹ ಮತ್ತು ಜಗದ್ಗುರುಗಳ ಆಶೀರ್ವಾದಿಂದ ನಡೆಯುತ್ತಿದೆ. ಹತ್ತಾರು ಧಾರ್ಮಿಕ ವಿಧಿಗಳು ಸಂಪನ್ನಗೊಳ್ಳುತ್ತಿವೆ. ಇದಕ್ಕೆ ಭಕ್ತವಲಯದ ಸಹಕಾರವೂ ಇದೆ ಎಂದರು. ಈ ಧಾರ್ಮಿಕ ಕ್ಷೇತ್ರ ಶತಮಾನೋತ್ಸವ ಪೂರ್ಣಗೊಳಿಸಿರುವುದು ನಾಡಿಗೆ ದೊಡ್ಡ ಹೆಮ್ಮೆ. ಮುಂಬರುವ ಶತಮಾನಗಳಲ್ಲೂ ಈ ಸನ್ನಿಧಿ ಇನ್ನಷ್ಟು ಸೇವೆ ಸಲ್ಲಿಸಲಿದೆ ಎಂದರು.

ಒಂದು ವಾರಗಳ ಕಾರ್ಯಕ್ರಮಕ್ಕೆ ನಾಡಿನ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸಂಸ್ಥಾನ ಪೂಜಾದಿಗಳನ್ನು ನೆರವೇರಿಸಿ, ಭಕ್ತರನ್ನು ಅನುಗ್ರಹಿಸಲಿರುವುದು ವಿಶೇಷ ಎಂದರು.
ಸಪ್ತ ಮಾತೃಕೆ ದೇವಾಲಯದ ಪ್ರಧಾನ ಅರ್ಚಕ ಮತ್ತು ವಿದ್ವಾಂಸ ಭಾಸ್ಕರ ಭಟ್, ಮಠದ ವ್ಯವಸ್ಥಾಪಕ ಶೇಷಾದ್ರಿ ಭಟ್ ಸೇರಿದಂತೆ ನೂರಾರು ಸ್ವಯಂಸೇವಕರು, ಭಕ್ತರು ಮತ್ತು ಮಾತೆಯರು ಹಾಜರಿದ್ದರು.
ಸಂಜೆ ವಿದ್ವಾನ್ ಆರ್.ಕೆ. ಪದ್ಮನಾಭ ಅವರ ವೀಣಾ ವಾದನ ಕಛೇರಿ ರಂಜಿಸಿತು. ವಿದ್ವಾನ್ ಶ್ರೀಧರ ಮೃದಂಗ ಮತ್ತು ವಿದ್ವಾನ್ ರಮೇಶ್ (ಘಟ) ಪಕ್ಕವಾದ್ಯ ಸಹಕಾರ ನೀಡಿ ಶ್ರೋತೃಗಳ ಮನಗೆದ್ದರು.

ಭಾನುವಾರ (ಮಾ. 31) ಮಠದ ಆವರಣದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಶ್ರೀ ಮಹಾರುದ್ರ ಜಪ ಮತ್ತು ಶತಚಂಡಿ ಪಾರಾಯಣ ನೆರವೇರಲಿ. ಈ ಸಂದರ್ಭ ಶೃಂಗೇರಿ #Sringeri ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಶ್ರೀ #VidhushekharaBharatiSwamiji ಸಾರ್ವಜನಿಕ ದರ್ಶನ ನೀಡಲಿದ್ದಾರೆ. ಪಾದಪೂಜೆ ಮತ್ತು ಭಿಕ್ಷಾವಂದನೆ ನಡೆಯಲಿದೆ.
ಸಂಜೆ 4.30 ರಿಂದ 7ರವರೆಗೆ ನಗರದ ವಿವಿಧ ದೇವಾಲಯ ಹಾಗೂ ಸಂಘ-ಸಂಸ್ಥೆಗಳಿಗೆ ಶ್ರೀಗಳು ಭೇಟಿ ನೀಡಲಿದ್ದಾರೆ. ಸಂಜೆ ಖ್ಯಾತ ಕಲಾವಿದ ವಿದ್ವಾನ್ ಶಿವಶಂಕರ ಸ್ವಾಮಿ ತಂಡದಿಂದ (ಲಯ ಶಂಕರ- ವಾದ್ಯ ವೈಭವ) ನೆರವೇರಲಿದೆ. ರಾತ್ರಿ 8.30ಕ್ಕೆ ಶ್ರೀಗಳಿಂದ ಶ್ರೀ ಚಂದ್ರಮೌಳೇಶ್ವರ ಪೂಜೆ ನೆರವೇರಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post