ಉಡುಪಿ: ದೇಶದಲ್ಲೇ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಜಯ ದಾಖಲಿಸಿದ್ದು, ಜಿಲ್ಲೆಯ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ.
ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರ ವಿರೋಧದ ನಡುವೆಯೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಏಕಾಏಕಿ ತಮ್ಮ ಪುತ್ರ ನಿಖಿಲ್’ರನ್ನು ಮಂಡ್ಯದಿಂದ ಕಣಕ್ಕಿಳಿಸಿದ್ದರು. ಇಬ್ಬರ ನಡುವಿನ ಹಣಾಹಣಿ ಎಷ್ಟಿತ್ತು ಎಂದರೆ ಇಡಿಯ ದೇಶವೇ ಮಂಡ್ಯ ಕ್ಷೇತ್ರವನ್ನು ಗಮನಿಸುತ್ತಿತ್ತು.
ಸಿಎಂ ಕುಮಾರಸ್ವಾಮಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಳ್ಳಲೇಬೇಕು ಎಂಬ ಉದ್ದೇಶದಿಂದ ಅಧಿಕಾರ ಬಳಸಿ ಏನೆಲ್ಲಾ ಪ್ರಯತ್ನಗಳನ್ನು ಮಾಡಿದರೂ, ಅಂತಿಮವಾಗಿ ಸುಮಲತಾ ಅಂಬರೀಶ್ ಭರ್ಜರಿ ಜಯ ದಾಖಲಿಸಿದ್ದಾರೆ.
ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಭಾರೀ ಚರ್ಚೆ ನಡೆದಿತ್ತು. ಹಲವು ಜ್ಯೋತಿಷಿಗಳು ನಿಖಿಲ್ ಗೆಲುವು ನಿಶ್ಚಿತ ಎಂದು ನುಡಿದಿದ್ದ ಭವಿಷ್ಯ ಸುಳ್ಳಾಯಿತು. ಆದರೆ, ನಿಖರವಾಗಿ ಭವಿಷ್ಯವನ್ನು ನುಡಿಯುವಲ್ಲಿ ನಿಪುಣರಾಗಿರುವ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರು ಮಾತ್ರ ಯಾರ ಹೆಸರಲ್ಲೂ ಉಲ್ಲೇಖಿಸದೇ ಸುಮಲತಾ ಅಂಬರೀಶ್ ಗೆಲುವು ನಿಶ್ಚಿತ ಎಂದು ಒಂದು ತಿಂಗಳ ಹಿಂದೆಯೇ ನುಡಿದಿದ್ದರು.
ಎಪ್ರಿಲ್ 17ರಂದು ತಮ್ಮ ಫೇಸ್’ಬುಕ್ ವಾಲ್’ನಲ್ಲಿ ಬರೆದಿದ್ದ ಅಮ್ಮಣ್ಣಾಯ ‘ಒಂದೆಡೆ ರೇಸಿನಲ್ಲಿ ಜಾಗ್ವಾರ್. ಇನ್ನೊಂದೆಡೆ ಹಳೆಯ ಅಂಬಾಸಿಡರ್. ಓಟ ಆರಂಭವಾಗಿದೆ. ಫಲಿತಾಂಶ? ಕೊನೆಯ ಹಂತದವರೆಗೆ ಜಾಗ್ವಾರ್ ಬಹಳ ಮುಂದೆ ಇದ್ದರೂ ಕೊನೆಗೆ ಹಳೆಯ ಅಂಬಾಸಿಡರ್ ನಿಧಾನವಾಗಿ ಪ್ರಥಮ ಸ್ಥಾನಕ್ಕೆ ಬರುತ್ತದೆ’ ಎಂದಿದ್ದರು.
ಜಾಗ್ವಾರ್ ಅಂದರೆ ನಿಖಿಲ್ ಕುಮಾರಸ್ವಾಮಿ, ಹಳೆಯ ಅಂಬಾಸಿಡರ್ ಎಂದರೆ ಸುಮಲತಾ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಅಮ್ಮಣ್ಣಾಯ ಅವರು ಅಂದೇ ಹೇಳಿದಂತೆ ಕೊನೆಯ ಹಂತದವರೆಗೂ ಇಬ್ಬರೂ ಅಭ್ಯರ್ಥಿಗಳ ನಡುವೆ ಭಾರೀ ಹಣಾಹಣ ನಡೆದು, ಒಂದು ಹಂತದಲ್ಲಿ ನಿಖಿಲ್ ಗೆಲ್ಲಬಹುದು ಎನ್ನಲಾಗಿತ್ತು. ಇಬ್ಬರ ನಡುವಿನ ಮತಗಳ ಅಂತರವೂ ಸಹ ಒಂದೆರಡು ಸಾವಿರದಲ್ಲೇ ಹಲವು ಸುತ್ತಿನವರೆಗೂ ಸಾಗಿತ್ತು. ಆದರೆ, ಆನಂತರ ನಿಧಾನವಾಗಿ ಅಂತರ ಹೆಚ್ಚಿಸಿಕೊಳ್ಳುತ್ತಾ ಬಂದ ಸುಮಲತಾ 12,000, 20,000 ಹೀಗೆ ಏರಿಕೆಯಾಗುತ್ತಾ ಅಂತಿಮವಾಗ 1,15,000 ಮತಗಳ ಅಂತರದಲ್ಲಿ ಸಿಎಂ ಪುತ್ರ ನಿಖಲ್ ಕುಮಾರಸ್ವಾಮಿ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲಿಗೆ ಅಮ್ಮಣ್ಣಾಯ ಅವರು ಒಂದು ತಿಂಗಳ ಹಿಂದೆಯೇ ನುಡಿದಿದ್ದ ಭವಿಷ್ಯ ನಿಜವಾಗಿದ್ದು, ಇವರ ಈ ಪೋಸ್ಟ್ ಭಾರೀ ವೈರಲ್ ಆಗಿದೆ.
2018ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೂ ಒಂದು ದಿನ ಮುನ್ನವೇ ಅಮ್ಮಣ್ಣಾಯ ಅವರು ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಮಾತ್ರವಲ್ಲ ಅವರು ಭವಿಷ್ಯ ಹೇಳಿದ್ದ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿ, ಲಕ್ಷಾಂತರ ಶೇರ್ ಆಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
Discussion about this post