ವೈಶಾಖ ಶುಕ್ಲ ತೃತೀಯವು ರೋಹಿಣಿ ನಕ್ಷತ್ರ ಯುಕ್ತವಾಗಿ, ಬುಧವಾರವೂ ಆಗಿ ಬಂದರೆ ಇದಕ್ಕಿಂತ ಪುಣ್ಯ ಕಾಲ ಬೇರಾವುದೂ ಇಲ್ಲ ಎಂದು ಧರ್ಮಶಾಸ್ತ್ರ ವಚನ. ಇದರ ಮಹತ್ವವೇ ಸಪಾತ್ರರಿಗೆ ದಾನ ಮಾಡುವುದು, ಪಿತೃಗಳಿಗೆ ಪಿತೃ ಕಾರ್ಯ ಮಾಡುವಂತದ್ದಾಗಿರುತ್ತದೆ. ನಿರ್ಣಯ ಸಿಂಧು ಮುಂತಾದ ಧರ್ಮಗ್ರಂಥಗಳಲ್ಲಿ ತಿಳಿಸಿದ ಪ್ರಕಾರ ವ್ರತಾಚರಣೆ ಮಾಡಲು ಈ ಕಲಿಯುಗದಲ್ಲಿ ಅಸಾಧ್ಯವಾದರೂ, ಈ ಅಕ್ಷಯ ತೃತೀಯದ ಮಹತ್ವವನ್ನಾದರೂ ತಿಳಿದುಕೊಂಡಾಗಲೂ ಧರ್ಮ ಕಾರ್ಯ ಮಾಡಿದ ತೃಪ್ತಿ ಸಿಗಬಹುದು.
ಅಕ್ಷಯ ಎಂಬುದೇ ಒಂದು ಮಹಾ ತಿಳುವಳಿಕೆ ಕೊಡುತ್ತದೆ. ಕ್ಷಯ ಇಲ್ಲದ್ದೇ ಅಕ್ಷಯವಲ್ಲವೇ? ವೈಶಾಖ ಶುದ್ಧ ತೃತೀಯವು ಸೋಮವಾರ ರೋಹಿಣಿ ಸಹಿತ, ಬುಧವಾರ ರೋಹಿಣಿ ಸಹಿತ ಬಂದದ್ದೇ ಆದರೆ ಅಂತಹ ದಿವಸದಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡಿದರೆ ಅಥವಾ ಪಿಂಡ ರಹಿತ ಶ್ರಾದ್ಧವಾದರೂ ಮಾಡಿದರೆ ಅಥವಾ ಪಿತೃಗಳಿಗೆ ತಿಲ ತರ್ಪಣವನ್ನಾದರೂ ಕೊಟ್ಟರೆ, ಅದೂ ಅಸಾಧ್ಯವಾದರೆ ಪಿತೃಗಳಿಗೆ ಜಲ ತರ್ಪಣ ನೀಡಿದರೂ ಅವರಿಗೆ ಅಕ್ಷಯ ಪುಣ್ಯಲೋಕ ಪ್ರಾಪ್ತಿಯಾಗುತ್ತದೆ ಮತ್ತು ಈ ಕಾರ್ಯ ಮಾಡಿದವರ ಮಡಿಲಿಗೆ ಮತ್ತೆ ಆ ಪಿತೃಗಳು ಉತ್ತಮ ಸಂತತಿಯನ್ನೂ ನೀಡುತ್ತಾರೆ.
ದೇವರಿಗೆ, ಪಿತೃ ದೇವತೆಗಳಿಗೆ, ಫಲ ಬರುವ ವೃಕ್ಷಗಳಿಗೆ ಸೇವೆ ನೀಡಿದರೆ ಅವರೆಂದೂ ಋಣ ಇಟ್ಟುಕೊಳ್ಳುವವರಲ್ಲ. ಅದರ ಫಲವನ್ನು ಕೊಟ್ಟೇ ಕೊಡುತ್ತಾರೆ. ಯಾರಲ್ಲಿ ನಿಸ್ವಾರ್ಥತೆ ಇರುವುದೋ ಅವರು ಯಾವ ಪೂಜನೆಯನ್ನೂ ಬಯಸುವುದಿಲ್ಲ ಮತ್ತು ಪೂಜಿಸಿದವರಿಗೆ ಫಲ ಕೊಡದೆ ಇರುವುದೂ ಇಲ್ಲ. ಉದಾಹರಣೆಗೆ ಭೂಮಿಯನ್ನು ಸ್ವಚ್ಛ ಮಾಡಿದರೆ ಅದರ ಫಲ, ಅದು ನೀಡುವ ಶುದ್ಧ ವಾತಾವರಣಗಳು ನಮಗಲ್ಲದೆ ಇನ್ಯಾರಿಗೆ? ಒಬ್ಬ ಮಾಡಿದರೂ ಹಲವರಿಗೆ ಇದರ ಫಲ ಸಿಗುವಂತೆ ಈ ಅಕ್ಷಯ ತೃತೀಯ ಪರ್ವ ಕಾಲದಲ್ಲಿ ದೇವತಾ ಕಾರ್ಯ, ಪಿತೃ ಕಾರ್ಯ, ದಾನ ಧರ್ಮ ಮಾಡಿದರೆ ಅದರ ಸತ್ಪಲವು ಹಲವರಿಗಿರುತ್ತದೆ.
ದೇವೀ ಪುರಾಣದಲ್ಲಿ ಈ ಅಕ್ಷಯ ತೃತೀಯದ ಆಚರಣೆಯನ್ನು ಹೇಳಿದೆ. ಇದು ತ್ರೇತಾಯುಗಾರಂಭದ ದಿನವಾಗಿದ್ದು ಆ ದಿವಸ ತೃತೀಯಾಯಾಂ ತು ರೋಹಿಣ್ಯೃಕ್ಷೇಃ ಪ್ರಪೂಜ್ಯತು॥ ಉದಕುಂಭ ಪ್ರಧಾನೇನ ಶಿವಲೋಕೇ ಮಹೀಯತೇ ಏಷ ಧರ್ಮ ಘಟೋ ದತ್ತೋ ಬ್ರಹ್ಮ ವಿಷ್ಣು ಶಿವಾತ್ಮಕಃ ಅಸ್ಯ ಪ್ರಧಾನಾತ್ತೃಪ್ಯಂತು ಪಿತರೋಪಿ ಪಿತಾಮಹಾಃ॥ ಅಂದರೆ ಪಿತೃ ಕಾರ್ಯವನ್ನೂ ಮಾಡಿ ಉದಕುಂಭ(ಕಲಶ) ದಾನ ಮಾಡಿದರೆ ಆಕಡೆ ಪಿತೃಗಳಿಗೂ ಅಕ್ಷಯ ಪುಣ್ಯ ಲೋಕ, ಈ ಕಡೆ ಮಾಡಿದವರಿಗೂ ಅಕ್ಷಯ ಸಂಪತ್ತು ಬರುತ್ತದೆ.
ಬ್ರಹ್ಮ ವಿಷ್ಣು ಮಹೇಶ್ವರರನ್ನು ಉದಕ ಕುಂಭದಲ್ಲಿ ಆವಾಹಿಸಿ ದಾನ ಮಾಡು. ಇದು ಅತ್ಯಂತ ಪುಣ್ಯ ಪರ್ವಕಾಲ ಎಂದು ತಿಳಿಸಿದೆ. ವ್ಯಾವಹಾರಿಕವಾಗಿ ನೋಡಿದರೆ ಈ ಮೇ ತಿಂಗಳು ಯಾವಾಗಲೂ ಸುಡು ಬೇಸಿಗೆ. ನೀರಿಗೆ ಹಾಹಾಕಾರ. ಈ ಸಮಯದಲ್ಲಿ ಯಾರಿಗಾದರೂ, ಯಾವ ಪ್ರಾಣಿ ಪಕ್ಷಿಗಳಿಗೆ ನೀರನ್ನು ಕೊಟ್ಟರೆ ಅದಕ್ಕಿಂತ ಪುಣ್ಯ ಬೇರೆ ಇಲ್ಲ. Save water, donate water ಎಂದು ವ್ಯಾಖ್ಯಾನಿಸಬಹುದು.
ನಮ್ಮ ಪುರಾತನರು ಪ್ರತೀ ದಿನದ ಮಹತ್ವವನ್ನರಿತೇ ವ್ರತಗಳ ಆಚರಣೆ, ದಾನ ಧರ್ಮಗಳನ್ನು ಮಾಡಲು ಹೇಳಿದ್ದಾರೆ.
ಈಗ ಒಂದು fashion ಇದೆ. ಅಕ್ಷಯ ತೃತೀಯದ ದಿನ ಮನೆಗೆ ಸುವರ್ಣ ತಂದರೆ ಸಂಪತ್ತು ಅಕ್ಷಯ ಆಗುತ್ತದೆ ಎಂದು ಆ ದಿನ ಚಿನ್ನವನ್ನು ವಿಕ್ರಯಿಸಲು ಓಡುತ್ತಾರೆ. ಆ ದಿನ ಚಿನ್ನ ತರಲಿ, ಬೇಡ ಅನ್ನಲ್ಲ. ಆದರೆ ಅದರ ಜತೆ ನೀರು ದಾನ ಮಾಡಿ. ಅಕ್ಷಯವಾದ ಪುಣ್ಯ ಸಿಗುತ್ತದೆ. ಅಕ್ಷಯ ತೃತೀಯವು ಬಹಳ ಶುಭ ಮುಹೂರ್ತ, ಆ ದಿನ ಗೃಹ ಪ್ರವೇಶ, ಮದುವೆ ಮುಂಜಿ ಮಾಡಿದರೆ ಉತ್ತಮ ಎಂಬ ಒಂದು ಚಿಂತನೆ ಜನರಲ್ಲಿದೆ. ಇದು ತಪ್ಪು ಕಲ್ಪನೆ. ಯಾವುದಕ್ಕೆ ಯಾವ ಕಾಲ ಸೂಕ್ತ ಎಂದು ಮುಹೂರ್ತ ಚಿಂತಾಮಣಿಯಲ್ಲಿ ತಿಳಿಸಿದಂತೆ, ಅಕ್ಷಯ ತೃತೀಯಕ್ಕೆ ಅದರದ್ದೇ ಆದಂತಹ ಫಲಗಳಿದ್ದು, ದಾನ ಧರ್ಮಾದಿಗಳಿಗೇ ಇದು ಅಕ್ಷಯ ಪುಣ್ಯಕಾಲವೇ ಹೊರತು ವಿವಾಹಾದಿ ಮಂಗಲಕ್ಕೆ ಹೇಳಿದ ದಿವಸವಲ್ಲ. ಆದರೆ ಕೆಲವೊಮ್ಮೆ, ಕೆಲವು ವರ್ಷಗಳಲ್ಲಿ ಈ ದಿನವೂ ಮುಹೂರ್ತ ಪ್ರಕಾರ ಇತರ ಕಾರ್ಯಗಳಿಗೂ ಉತ್ತಮ ಆಗುವುದಿದೆ. ಅಂತಹದ್ದೇನಾದರೂ ಬಂದರೆ ಅದಕ್ಕಿಂತ ಪುಣ್ಯ ಪರ್ವಕಾಲ ಇನ್ನೊಂದಿಲ್ಲ. ಯಾರಿಗೆ ಅಕ್ಷಯ ಪುಣ್ಯ ಪ್ರಾಪ್ತಿಗೆ ನಮ್ಮ ಉದ್ದೇಶ ಇರುತ್ತದೋ ಆಗ ಅದರ ಫಲದಲ್ಲಿ ನಮಗೂ ಅಕ್ಷಯ ಪುಣ್ಯ ಫಲ ಬಂದೇ ಬರುತ್ತದೆ. ಇದುವೇ ಈ ಮಹಾ ಪರ್ವಕಾಲವಾದ ಅಕ್ಷಯ ತೃತೀಯದ ಫಲ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post