ಶಿವಮೊಗ್ಗ: ಜಿಲ್ಲೆಯಲ್ಲಿ ಗುರುತಿಸಲಾಗಿರುವ 28 ಮರಳು ಬ್ಲಾಕ್‌ಗಳಲ್ಲಿ ಮರಳುಗಾರಿಕೆ ಆರಂಭಿಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚನೆ ನೀಡಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮರಳು ಸಮಿತಿ ಸಭೆ ನಡೆಸಿದರು.
ನದಿಯಲ್ಲಿ ಕೆಲವು ಕಡೆಗಳಲ್ಲಿ ಇನ್ನೂ ನೀರು ಇಳಿಯದಿರುವ ಕಾರಣ ಮರಳುಗಾರಿಕೆ ಪ್ರಾರಂಭವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 28 ಬ್ಲಾಕ್’ಗಳ ಪೈಕಿ 8ರಲ್ಲಿ ಮರಳುಗಾರಿಕೆ ಪ್ರಾರಂಭಿಸಲಾಗಿದೆ. ತೀರ್ಥಹಳ್ಳಿಯಲ್ಲಿ ಇರುವ 13 ಮರಳು ಬ್ಲಾಕ್’ಗಳ ಪೈಕಿ ಎರಡು ಬ್ಲಾಕ್’ಗಳಲ್ಲಿ ಮರಳುಗಾರಿಕೆ ಪ್ರಾರಂಭವಾಗಿದೆ. ಇನ್ನುಳಿದ ಬ್ಲಾಕ್‌ಗಳಲ್ಲಿ ಮರಳುಗಾರಿಕೆಯನ್ನು ಒಂದು ವಾರದ ಒಳಗಾಗಿ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.
ಚೆಕ್ ಪೋಸ್ಟ್
ಅಕ್ರಮ ಮರಳುಗಾರಿಕೆ ಕುರಿತು ದೂರುಗಳು ಬರುತ್ತಿದ್ದು, ಅದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪೊಲೀಸ್, ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ಕೋಟೆಗಂಗೂರಿನಲ್ಲಿ ಅಕ್ರಮ ಗಣಿಗಾರಿಕೆ ಮೇಲೆ ನಿಗಾ ಇರಿಸಲು ಮೂರು ಇಲಾಖೆಗಳು ಜಂಟಿಯಾಗಿ ಚೆಕ್ ಪೋಸ್ಟ್ ಆರಂಭಿಸಬೇಕು. ಜಿಲ್ಲೆಯಲ್ಲಿರುವ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ಹೋಂಗಾರ್ಡ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕಲ್ಲು ಗಣಿಗಾರಿಕೆ ಮೇಲೆ ನಿಗಾ
ಅನಧಿಕೃತ ಕಲ್ಲು ಗಣಿಗಾರಿಕೆ ಮೇಲೆ ನಿಗಾ ಇರಿಸಿ, ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು. ಕ್ವಾರಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಮಾರ್ಗಸೂಚಿಯನ್ನು ಅನುಸರಿಸಬೇಕು. ಗ್ರಾಮಠಾಣಾದಿಂದ 500 ಮೀಟರ್ ವ್ಯಾಪ್ತಿಯ ಒಳಗೆ, ರಾಷ್ಟ್ರೀಯ ಹೆದ್ದಾರಿಯಿಂದ 200 ಮೀಟರ್ ಒಳಗೆ, 50ಕ್ಕೂ ಹೆಚ್ಚಿನ ಜನವಸತಿ ಇರುವ ಪ್ರದೇಶ ಸೇರಿದಂತೆ ಹಲವು ನಿಬಂಧನೆಗಳನ್ನು ವಿಧಿಸಲಾಗಿದ್ದು, ಯಾವುದೇ ಕಾರಣಕ್ಕೂ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದವರು ಹೇಳಿದರು.
ಅಕ್ರಮ ಕಲ್ಲು ಕ್ವಾರಿ ಮೇಲೆ ದಾಳಿ
ಅಕ್ರಮವಾಗಿ ಕಲ್ಲು ಕ್ವಾರಿ ನಡೆಸುತ್ತಿದ್ದ ಘಟಕಗಳ ಮೇಲೆ ದಾಳಿ ನಡೆಸಿ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋಟೆಗಂಗೂರಿನಲ್ಲಿ ಅರಣ್ಯ ಪ್ರದೇಶದಲ್ಲಿ ಕ್ವಾರಿ ನಡೆಸುತ್ತಿದ್ದ ಸ್ಥಳದಲ್ಲಿ 17 ವಾಹನ, ದೇವಾತಿಕೊಪ್ಪ ಅರಣ್ಯ ಪ್ರದೇಶದ ಕ್ವಾರಿ ಪ್ರದೇಶದಲ್ಲಿ ಒಂದು ಕಂಪ್ರೆಸ್ಸರ್ ಮತ್ತು ಸ್ಪೋಟಕ ಸಾಮಾಗ್ರಿಗಳು, ಗೆಜ್ಜೆನಹಳ್ಳಿ ಎರಡು ಪ್ರತ್ಯೇಕ ಸರ್ವೆ ನಂಬರ್‌ಗಳಲ್ಲಿ ಎರಡು ಕಂಪ್ರೆಸ್ಸರ್ ಹಾಗೂ ಕ್ವಾರಿಗೆ ಸಂಬಂಧಿಸಿದ ಯಂತ್ರೋಪಕರಣ ವಶಪಡಿಸಿಕೊಳ್ಳಲಾಗಿದೆ. ಕ್ವಾರಿಗೆ ಸಂಬಂಧಿಸಿದಂತೆ ಸಿಆರ್‌ಪಿಸಿ 200 ಕಲಂ ಅಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ರಶ್ಮಿ ಅವರು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ. ಅನುರಾಧ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Discussion about this post