ಶಿವಮೊಗ್ಗ: ಏಕ ಕಾಲಕ್ಕೆ 5 ಸಾವಿರ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ನೇರ ದೂರವಾಣಿ ಕರೆ ಮಾಡಬಹುದಾದ `ಕಾನ್ಫರೆನ್ಸ್ ಕಾಲ್’ ಸೌಲಭ್ಯಕ್ಕೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಇಂದು ಚಾಲನೆ ನೀಡಿದರು.
ಸರಳ ತಂತ್ರಜ್ಞಾನವನ್ನು ಬಳಸಿಕೊಂಡು ಮೊಬೈಲ್ ಮೂಲಕ ನಿರ್ದಿಷ್ಟ ಗ್ರೂಪ್‌ಗಳಿಗೆ ಏಕ ಕಾಲಕ್ಕೆ ಕರೆ ಮಾಡುವ ಸೌಲಭ್ಯ ಇದಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳ ಗ್ರೂಪ್‌ಗಳನ್ನು ಸಿದ್ಧಪಡಿಸಲಾಗಿದ್ದು, ಈ ಗ್ರೂಪ್‌ಗಳಿಗೆ ಏಕಕಾಲಕ್ಕೆ ಕರೆ ಮಾಡಬಹುದಾಗಿದೆ. ತತಕ್ಷಣಕ್ಕೆ ಎಲ್ಲರ ಸಂಪರ್ಕ ಸಾಧ್ಯವಾಗುವುದರಿಂದ ಆಡಳಿತಕ್ಕೆ ವೇಗ ದೊರಕಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಹಶೀಲ್ದಾರ್, ಪಿಡಿಒಗಳು, ಗ್ರಾಮ ಲೆಕ್ಕಿಗರು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳ ದೂರವಾಣಿ ಸಂಖ್ಯೆ ಗ್ರೂಪ್‌ಗಳನ್ನು ಮಾಡಲಾಗಿದೆ. ಇದರಿಂದ ಪ್ರತಿನಿತ್ಯ ರೈತರ ಸಾಲಮನ್ನಾ ಕಾರ್ಯಕ್ರಮ ಪ್ರಗತಿ, ಬೆಳೆ ಸಮೀಕ್ಷೆ, ಬೆಳೆ ಕಟಾವು ಸೇರಿದಂತೆ ವಿವಿಧ ಕಾರ್ಯಕ್ರಮಗಳ ದೈನಂದಿನ ಪ್ರಗತಿಯ ಕುರಿತು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಹಿತಿ ಪಡೆಯಲು ಹಾಗೂ ತ್ವರಿತವಾಗಿ ಮಾರ್ಗದರ್ಶನ ನೀಡಲು ಇದರಿಂದ ಸಾಧ್ಯವಾಗಲಿದೆ ಎಂದರು.
ಜಿಲ್ಲೆಯಲ್ಲಿ ಕೆಲವು ತಿಂಗಳಿನಿಂದ ಸ್ಥಗಿತವಾಗಿದ್ದ ಇ-ಆಫೀಸ್ ಸೌಲಭ್ಯವನ್ನು ಪುನರಾರಂಭಿಸಲಾಗಿದೆ. ಎಲ್ಲಾ ತಾಲೂಕು ಕಚೇರಿಗಳನ್ನು ಸಹ ಮುಂದಿನ ದಿನಗಳಲ್ಲಿ ಇ-ಆಫೀಸ್ ವ್ಯವಸ್ಥೆಗೆ ಒಳಪಡಿಸುವ ಮೂಲಕ ಆಡಳಿತಕ್ಕೆ ಚುರುಕು ಮೂಡಿಸಲಾಗುವುದು. ಇ-ಆಫೀಸ್ ಮೂಲಕ ಕಡತಗಳ ವ್ಯವಸ್ಥಿತ ವಿಲೇವಾರಿ ಸಾಧ್ಯವಾಗಲಿದೆ ಎಂದವರು ಹೇಳಿದರು.







Discussion about this post