ಕನ್ನಡ ಚಿತ್ರರಂಗ ಕಂಡ ಮಹೋನ್ನತ ನಟ ರೆಬಲ್ ಸ್ಟಾರ್ ಅಂಬರೀಶ್ ಇಂದು ವಿಧಿವಶರಾಗಿದ್ದು, ಇಡಿಯ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ.
66 ವರ್ಷದ ಅಂಬರೀಶ್ ಅವರ ಚಿತ್ರರಂಗದ ಪಯಣವೇ ಒಂದು ರೋಚಕ ಹಾದಿ.
1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಐತಿಹಾಸಿಕ ನಾಗರಹಾವು ಚಿತ್ರದಲ್ಲಿ ಜಲೀಲನ ಪಾತ್ರದಿಂದ ಇಡಿಯ ಚಿತ್ರರಸಿಕರನ್ನು ಸೆಳೆದಿದ್ದ ಅಂಬರೀಶ್ ಅವರ ಚಿತ್ರರಂಗದ ಹಾದಿಯ ಪಯಣನ ಅಂಬಿ ನಿಂಗ್ ವಯಸ್ಸಾಯ್ತೋವರೆಗೂ ಯಶಸ್ಸಿನ ಮಾಲೆಯೇ ಸರಿ.
ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಎಚ್.ಕೆ.ಅನಂತರಾವ್ ಅವರ ಕಾದಂಬರಿ ಆಧಾರಿತ ಅಂತ ಚಿತ್ರದ ನಾಯಕನಾಗಿ ಅಭಿನಯಿಸಿದ್ದು ಇವರ ವೃತ್ತಿ ಜೀವನಕ್ಕೆ ಒಂದು ಹೊಸ ಆಯಾಮ ನೀಡಿತ್ತು.
ಈ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಸಿಡಿದೇಳುವ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಪಾತ್ರ ಇವರಿಗೆ ರೆಬೆಲ್ ಸ್ಟಾರ್ ಎಂಬ ಇಮೇಜು ನೀಡಿತು. ಅನಂತರ ಇವರು ನಾಯಕ, ಖಳನಾಯಕಪಾತ್ರಗಳಲ್ಲಿ ನಟಿಸಿದರು. ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಸಣದ ಹೂವು, ಚಕ್ರವ್ಯೂಹ, ಏಳುಸುತ್ತಿನ ಕೋಟೆ, ಹೃದಯಹಾಡಿತು, ಸ್ನೇಹಸಂಬಂಧ, ಬ್ರಹ್ಮಾಸ್ತ್ರ, ಅಮರಜ್ಯೋತಿ ಮೊದಲಾದ ಅನೇಕ ಚಿತ್ರಗಳಲ್ಲಿ ಇವರ ನಟನೆಗೆ ಮನಸೋಲದವರು ಯಾರೂ ಇಲ್ಲ.
1995ರಲ್ಲಿ ತೆರೆಕಂಡ ಆಪರೇಶನ್ ಅಂತ ಚಿತ್ರದ ಕನ್ವರ್ ಲಾಲ್ ಪಾತ್ರವನ್ನು ಇಡಿಯ ಚಿತ್ರರಂಗ ಇನ್ನು ನೂರು ವರ್ಷ ಕಳೆದರೂ ಸಹ ಮರೆಯಲು ಸಾಧ್ಯವಿಲ್ಲದಂತಹ ಅಭಿನಯ ನೀಡಿದ್ದ ಅಂಬಿ, ಮಂಡ್ಯದ ಗಂಡು ಚಿತ್ರದ ಮೂಲಕ ರಾಜ್ಯದಲ್ಲಿ ಮಂಡ್ಯದ ಗಂಡು ಎಂದೇ ಖ್ಯಾತರಾದವರು.
ಮಸಣದಹೂವು ಚಿತ್ರದಲ್ಲಿನ ಇವರ ಪಾತ್ರದ ಅಭಿನಯ ಅವಿಸ್ಮರಣೀಯವಾದದ್ದು. ಹೃದಯ ಹಾಡಿತು ಚಿತ್ರ ಇವರ ಚಿತ್ರರಂಗದ ಇಮೇಜನ್ನು ಬದಲಾಯಿಸಿತು.
ಚಕ್ರವ್ಯೂಹ ಹಾಗೂ ಮೌನರಾಗ ಚಿತ್ರಗಳು ಇವರಿಗೆ ಜನಪ್ರಿಯತೆ ತಂದುಕೊಟ್ಟವು.
ಜೋ ಸೈಮನ್ ನಿರ್ದೇಶನದಲ್ಲಿ, 1989ರಲ್ಲಿ ಬಿಡುಗಡೆಯಾದ ಹಾಂಕಾಂಗ್ ನಲ್ಲಿ ಏಜೆಂಟ್ ಅಮರ್ ಇವರ ನೂರನೇ ಚಿತ್ರ. ಇವರು ಇಲ್ಲಿಯವರೆಗೆ ಸುಮಾರು 205ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.
Discussion about this post