ಬೆಂಗಳೂರು: ಅನಾರೋಗ್ಯದಿಂದ ಇಂದು ಇಹಲೋಕ ತ್ಯಜಿಸಿರುವ ನಟ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಾಳೆ ಬೆಳಗ್ಗೆ 8 ಗಂಟೆಯಿಂದ ಅವಕಾಶ ಕಲ್ಪಿಸಲಾಗುತ್ತದೆ.
ಈ ಕುರಿತಂತೆ ಸ್ವತಃ ಮಾಹಿತಿ ನೀಡಿರುವ ಸಿಎಂ ಕುಮಾರಸ್ವಾಮಿ, ಚಿತ್ರರಂಗ ಮಾತ್ರವಲ್ಲ ರಾಜ್ಯಕ್ಕೂ ಸಹ ಅಂಬರೀಶ್ ಅವರ ಕೊಡುಗೆ ಅಪಾರವಾಗಿದೆ. ಇಂತಹ ವ್ಯಕ್ತಿಯ ಅಂತಿಮ ವಿಧಿವಿಧಾನಗಳನ್ನು ನಾವೆಲ್ಲಾ ಅತ್ಯಂತ ಗೌರವದಿಂದ ನಡೆಸಬೇಕು. ಹೀಗಾಗಿ, ಅಭಿಮಾನಿಗಳು ಶಾಂತ ರೀತಿಯಿಂದ ಅಂತಿಮ ದರ್ಶನ ಪಡೆದು, ಗೌರವಯುತವಾಗಿ ಅಂತಿ ಸಂಸ್ಕಾರ ನಡೆಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಾಳೆ ಬೆಳಗ್ಗೆ 8 ಗಂಟೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಯಾವುದೇ ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳದೇ ಅಂತಿಮ ದರ್ಶನ ಪಡೆಯಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಅಂಬರೀಶ್ ಕುಟುಂಬಸ್ತರ ಇಚ್ಛೆಯಂತೆ ಬೆಂಗಳೂರಿನಲ್ಲೇ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ. ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ದು ಮತ್ತೆ ಬೆಂಗಳೂರು ತಂದು ಸಂಸ್ಕಾರ ನೆರವೇರಿಸುವುದು ಕಷ್ಟಸಾಧ್ಯ. ಹೀಗಾಗಿ, ಬೆಂಗಳೂರಿನಲ್ಲೇ ಅಂತಿಮ ಸಂಸ್ಕಾರ ನಡೆಯಲಿದೆ. ಆದರೆ, ತಾವು ಅವಿನಾಭವ ಸಂಬಂಧ ಹೊಂದಿದ್ದ ಮಂಡ್ಯದ ಜನರಿಗೆ ಅಂತಿಮ ದರ್ಶನ ಪಡೆಯಲು ಅನುಕೂಲವಾಗುವಂತೆ ಮಂಡ್ಯದಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಸೂಚನೆ ನೀಡಲಾಗಿದೆ. ಮಂಡ್ಯದ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿ ದರ್ಶನ ಪಡೆಯಬೇಕು ಎಂದು ಮನವಿ ಮಾಡಿದರು.
Discussion about this post