ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಗು ಜನಿಸಿದ ಅರ್ಧ ತಾಸಿನ ಒಳಗೆ ತಾಯಿ ಹಾಲನ್ನು ಕೊಡಬೇಕು. ತಾಯಿಯ ಮೊದಲ ಹಾಲು ಹಳದಿ ಬಣ್ಣದ್ದಾಗಿದ್ದು, ಅತಿ ವಿಶಿಷ್ಠ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ತದನಂತರ ಪ್ರತಿ 2 ರಿಂದ 3 ಗಂಟೆಗಳಿಗೆ ಒಮ್ಮೆ ಹಾಲನ್ನು ಉಣಿಸಬೇಕು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂದು ಶ್ರೇಷ್ಠ ಚಿಂತಕ ಕನ್‌ಪ್ಯೂಶಿಯಸ್ ಹೇಳುತ್ತಾರೆ- ಒಂದು ದೇಶ ತನ್ನ ಭವಿಷ್ಯಕ್ಕಾಗಿ ಮಾಡಬೇಕಾದ ಮೊಟ್ಟ ಮೊದಲ ಹೂಡಿಕೆಯನ್ನು ಮಕ್ಕಳ ಅಭ್ಯುದಯಕ್ಕಾಗಿ ಮಾಡುವುದು ಉತ್ತಮ. ಹೀಗಾಗಿ ಮಕ್ಕಳಿಗೆ ತಾಯಿಯೊಬ್ಬಳು ನೀಡಬಹುದಾದ ಅತ್ಯಮೂಲ್ಯ ಉಡುಗೊರೆಯಾದ ಸ್ತನ್ಯಪಾನದ ಬಗ್ಗೆ ಒಂದು ಪಕ್ಷಿನೋಟಕ್ಕೆ ಇದು ಅತ್ಯಂತ ಪ್ರಶಸ್ತ ಸಮಯವೆಂಬುದು ನನ್ನ ಅನಿಸಿಕೆ.
ನವಜಾತ ಶಿಶುಗಳಲ್ಲಿ ರೋಗ ನಿರೋಧಕ ಶಕ್ತಿಯು ಕನಿಷ್ಠವಾಗಿದ್ದು, ಬೇಗನೇ ಸೋಂಕು ತಗಲುವ ಸಂಭವ ಹೆಚ್ಚು. ಹೀಗಾಗಿ ತಾಯಿ ಹಾಲಿನ ಮಹತ್ವ ಅಪರಿಮಿತ.
ಮಗು ಜನಿಸಿದ ಅರ್ಥಗಂಟೆಯೊಳಗೆ ಹಾಲನ್ನುಕೊಡಲು ಪ್ರಾರಂಭಿಸಬೇಕು. ಮೊದಲ ಹಾಲು ಹಳದಿ ಬಣ್ಣದ್ದಾಗಿದ್ದು, ಅತಿ ವಿಶಿಷ್ಠ ಪೋಷಕಾಂಶಗಳಿಂದ ಕೂಡಿರುತ್ತದೆ. ತದನಂತರದಲ್ಲಿ ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಹಾಲನ್ನು ಉಣಿಸಬೇಕು.
ಮೊದಲೆರಡು ದಿನಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗಿದ್ದು ಗರ್ಭಸ್ಥ ಮಗುವಿನ ಶರೀರದಿಂದ ಹೆಚ್ಚಿನ ದ್ರವಾಂಶ ಕಡಿಮೆಯಾಗಲು ಸಹಕಾರಿ. ಹೀಗಾಗಿ ಮೊದಲ ವಾರದಲ್ಲಿ ಎಲ್ಲ ಮಕ್ಕಳು ಸಹಜವಾಗಿಯೇ ಸಮಾರು ಶೇ.10 ರಷ್ಟು ತೂಕವನ್ನು ಕಳೆದುಕೊಳ್ಳುತ್ತಾರೆ. ನಂತರ ಮತ್ತೆ ಹಾಲಿನ ಹರಿವು ಹೆಚ್ಚಾದಂತೆ ಶಿಶುವಿನ ತೂಕದಲ್ಲಿ ವೃದ್ಧಿಯಾಗುತ್ತದೆ. ಎರಡು ಕೆಜಿಗಿಂತ ಕಡಿಮೆ ತೂಕದ ಹಾಗೂ ಅವಧಿ ಪೂರ್ವ ಜನಿಸಿದ ಶಿಶುಗಳಿಗೆ ತಾಯಿ ಹಾಲು ಕುಡಿಯಲು ಸಾಧ್ಯವಿಲ್ಲದಿರುವ ಸಂದರ್ಭಗಳಲ್ಲಿ ಕೆಲವೊಮ್ಮೆ ತಜ್ಞ ವೈದ್ಯರ ಸಲಹೆಯ ಮೇರೆಗೆ ಮಾತ್ರ ಪೌಡರ್ ಹಾಲಿನ ಅಗತ್ಯ ಕಂಡುಬರುತ್ತದೆ. ಇದಲ್ಲದೆ ಇನ್ಯಾವ ಸಂದರ್ಭದಲ್ಲೂ ತಾಯಿ ಹಾಲಿನ ಹೊರತಾಗಿ ಮಗುವಿಗೆ 6 ತಿಂಗಳಿನವರೆಗೆ ಬೇರೇನೂ ಕೊಡಬಾರದು.
ಇಂತಹ ಆಹಾರಗಳನ್ನು ಕೊಡುವುದರಿಂದ ಸೂಕ್ಷ್ಮವಾದ ಮಗುವಿನ ಆರೋಗ್ಯಕ್ಕಾಗಿ ಹಾನಿಯಾಗುವ ಸಂದರ್ಭವೇ ಹೆಚ್ಚು. ಇಂದು ಪ್ರಪಂಚದ ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ನಮ್ಮಲ್ಲಿ ಸ್ತನಪಾನದ ಪ್ರಮಾಣ ಅಧಿಕವಾಗಿ ಕಂಡು ಬರುತ್ತದೆ. ಆದರೆ, ಇತ್ತೀಚಿನ ನಗರೀಕರಣ ದಿನಗಳಲ್ಲಿ ಆಧುನಿಕ ಯಾಂತ್ರಿಕ ಜೀವನಶೈಲಿ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯ ಪರಿಣಾಮ ನಮ್ಮ ದೇಶದ ತಾಯಂದಿರನ್ನೂ ಈ ಸಹಜಕ್ರಿಯೆಯಿಂದ ವಿಮುಖರನ್ನಾಗಿಸುತ್ತದೆ. ಪೌಡರ್ ಹಾಲಿನ ಅತಿರುಚಿತ ಜಾಹೀರಾತುಗಳು ಸೆಳೆತಕ್ಕೆ ಮರುಳಾಗಿ ತಾಯಂದಿರು ತಮ್ಮ ಮಕ್ಕಳನ್ನು ಬಾಟಲಿ ಹಾಲಿನ ದಾಸರನ್ನಾಗಿಸುತ್ತಿದ್ದಾರೆ. ಇದು ಮಕ್ಕಳ ಭವಿಷ್ಯದ ಆರೋಗ್ಯದ ದೃಷ್ಠಿಯಿಂದ ಅತ್ಯಂತ ಅಪಾಯಕಾರಿ.
ತಾಯಿ ಹಾಲಿನಿಂದ ಮಕ್ಕಳು ಬೆಳೆಯುವ ವೇಗ ಮತ್ತು ಪ್ರಮಾಣ ಕೆಲವೊಮ್ಮೆ ಕಡಿಮೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಇದು ಭವಿಷ್ಯದ ಆರೋಗ್ಯಕ್ಕೆ ಭದ್ರ ಬುನಾದಿ ಕಟ್ಟಿ ಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಇಂದು ಸ್ತನಪಾನದ ಮಹತ್ವ ತಿಳಿಹೇಳುವ ಅಗತ್ಯ ಎಂದಿಗಿಂತಲೂ ಹೆಚ್ಚಿದೆ ಎಂಬುದು ನನ್ನ ಅಂಬೋಣ. ಒಳ್ಳೆಯ ಕಾರ್ಯಕ್ಕೆ ನೂರಾರು ಅಡ್ಡಿ ಆತಂಕಗಳು ಇರುವುದು ಸಾಮಾನ್ಯ. ಹಾಲು ಕುಡಿಸುವುದಕ್ಕೆ ಒಂದು ಪ್ರಶಸ್ತವಾದ ಮಾನಸಿಕ ಸಿದ್ದತೆಯನ್ನು ಗರ್ಭಿಣಿಯಾದ್ದಾಗಲೇ ಪ್ರಾರಂಭಿಸುವುದು ಉತ್ತಮ.
ಸ್ತನಗಳ ಆರೋಗ್ಯ ಮತ್ತು ಮೊಲೆ ತೊಟ್ಟುಗಳಲ್ಲಿ ಕಂಡುಬರುವ ಸಾಮಾನ್ಯ ತೊಂದರೆಗಳನ್ನು ಮೊದಲೇ ಮನಗಂಡು ಪರಿಹಾರ ಕಂಡುಕೊಂಡಲ್ಲಿ ಮಗುವು ಜನಿಸಿದ ನಂತರ ತಾಯಿಗೆ ಹಾಲುಣಿಸುವುದು ಹೊಸ ಅನುಭವವಾಗಿದ್ದು ಮೊದಮೊದಲು ಸ್ವಲ್ಪ ಆತಂಕ, ಭಯ, ಗಾಬರಿ ಮತ್ತು ಆತ್ಮವಿಶ್ವಾಸ ಕೊರತೆಯು ಕಂಡು ಬರಬಹುದು. ಸೂಕ್ತ ಸಲಹೆ ಸಹಾಯ ಮತ್ತು ತರಬೇತಿಗಳಿಂದ ಇದಕ್ಕೆ ಪರಿಹಾರ ಸಾಧ್ಯ. ತಾಯಿಯು ಮಗುವನ್ನು ಹಿಡಿದುಕೊಳ್ಳುವ ಸರಿಯಾದ ವಿಧಾನ ಸ್ತನಕ್ಕೆ ಮಗುವು ಕಚ್ಚಿಕೊಳ್ಳುವ ರೀತಿ ಏಕಾಂತ ಮತ್ತು ಸೂಕ್ತ ವಾತಾವರಣವನ್ನು ಒದಗಿಸಿದಲ್ಲಿ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ತಜ್ಞ ವೈದ್ಯರ ಸಲಹೆಯನ್ನು ಸಕಾಲದಲ್ಲಿ ಪಡೆದುಕೊಳ್ಳುವ ಮೊದಲ 2-3 ದಿನಗಳ ನಮ್ಮ ಪ್ರಯತ್ನವು ಸ್ತನಪಾನದ ಯಶಸ್ಸನ್ನು ನಿರ್ಧರಿಸುತ್ತದೆ. ಇದು ಹಾಲಿನ ಅಗತ್ಯವನ್ನು ಅವಲಂಬಿಸಿದೆ ಹೀಗಾಗಿ ನಿರಂತರ ಪ್ರಯತ್ನವೇ ಯಶಸ್ಸಿಗೆ ಸೋಪಾನ.
ಹಾಲು ಕುಡಿಸಿದ ನಂತರ ಸಾಮಾನ್ಯವಾಗಿ ಮಕ್ಕಳು 2 ರಿಂದ 4ಗಂಟೆಗಳ ವರೆಗೂ ನಿದ್ರೆಗೆ ಜಾರುತ್ತದೆ. ಆದರೆ, ಪ್ರತಿ ಬಾರಿಗೂ 10-11 ನಿಮಿಷಗಳವರೆಗೆ ತೇಗು ಬರುವುದು ಸೂಕ್ತ ಇಲ್ಲವಾದಲ್ಲಿ ಅಡ್ಡವಾಗಿ ಮಲಗಿಸಿದ ನಂತರ ವಾಂತಿಯಾಗಬಹುದು. ಹಾಲು ಕುಡಿದ ತಕ್ಷಣ ಮಲ ಮತ್ತು ಮೂತ್ರ ಮಾಡುವುದು ಸಹಜ ಪ್ರಕ್ರಿಯೆ. ಇದರಿಂದ ಗಾಬರಿಯಾಗುವ ಅಗತ್ಯವಿಲ್ಲ. ಪ್ರತಿ ಬಾರಿಗೂ ಒಂದು ಮೊಲೆಯ ಹಾಲು ಮುಗಿದ ನಂತರವೇ ಮತ್ತೊಂದು ಕಡೆ ಕುಡಿಸುವುದು ಸೂಕ್ತ.
ಕೊನೆಗೆ ಬರುವ ಹಾಲಿನಲ್ಲಿ ಕೊಬ್ಬಿನ ಅಂಶ ಹೆಚ್ಚಿದ್ದು ತೂಕ ವೃದ್ದಿಯಾಗುವುದರಲ್ಲಿ ಇದರ ಪಾತ್ರ ಹಿರಿದು. ಸಾಮಾನ್ಯವಾಗಿ 15-30 ನಿಮಿಷದ ವರೆಗೂ ಮಕ್ಕಳ ಹಾಲು ಕುಡಿದು ಹೊಟ್ಟೆ ತುಂಬಿದಾಗ ತಾವೇತಾವಾಗಿ ಮೊಲೆಯನ್ನು ಬಿಟ್ಟು ಬಿಡುತ್ತವೆ. ಸಾಕಷ್ಟು ಪ್ರಮಾಣದಲ್ಲಿ ಹಾಲು ಇದ್ದಲ್ಲಿ ಮಕ್ಕಳು ದಿನ 5-6 ಬಾರಿ ಮಾತ್ರ ಚಿನ್ನದ ಬಣ್ಣದ ತೆಳ್ಳನೆ ಬೇಧಿ ಮಾಡುತ್ತಾರೆ. ದಿನವೂ ಶೇ.1 ರಿಂದ 2 ರಷ್ಟು ತೂಕದಲ್ಲಿ ವೃದ್ಧಿಯಾಗುತ್ತದೆ. ಇವುಗಳು ಯಶಸ್ವಿ ಸ್ತನಪಾನದ ನಿಖರವಾದ ಲಕ್ಷಣಗಳು ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ತಾಯಿ ಹಾಲಿನ ಮಹತ್ವವನ್ನು ಮತ್ತೊಮ್ಮೆ ಒತ್ತಿ ಹೇಳುವ ಅವಶ್ಯಕತೆ ಇದೆ.
ನವಜಾತ ಶಿಶುಗಳ ಪ್ರಾಣವನ್ನು ಉಳಿಸಬಲ್ಲ ಪ್ರಮುಖ ರಕ್ಷಾ ಕವಚವೇ ತಾಯಿಯ ಎದೆ ಹಾಲು. ಇಂತಹಾ ಅಮೃತವನ್ನು ಕುಡಿದ ಮಕ್ಕಳೇ ಧನ್ಯರು. ಭವಿಷ್ಯದ ಸದೃಢ ಆರೋಗ್ಯದ ದೃಷ್ಠಿಯಿಂದ ಇದು ಭವ್ಯ ಬುನಾದಿಯಿದ್ದಂತೆ. ಮಕ್ಕಳಿಗೆ ತಾಯಿಯ ಮಮತೆಯ ಭಾಗ್ಯವನ್ನು ತಪ್ಪದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ.
ಪೌಡರ್ ಹಾಲಿನ ಜಾಹೀರಾತುಗಳು ಸೆಳೆತಕ್ಕೆ ಮರುಳಾಗಿ ತಾಯಂದಿರು ತಮ್ಮ ಮಕ್ಕಳನ್ನು ಬಾಟಲಿ ಹಾಲಿನ ದಾಸರನ್ನಾಗಿಸುತ್ತಿದ್ದಾರೆ. ಇದು ಮಕ್ಕಳ ಭವಿಷ್ಯದ ಆರೋಗ್ಯದ ದೃಷ್ಠಿಯಿಂದ ಅತ್ಯಂತ ಅಪಾಯಕಾರಿ. ತಾಯಿ ಹಾಲಿನಿಂದ ಮಕ್ಕಳು ಬೆಳೆಯುವ ವೇಗ ಮತ್ತು ಪ್ರಮಾಣ ಕೆಲವೊಮ್ಮೆ ಕಡಿಮೆ ಎಂದು ಮೇಲ್ನೋಟಕ್ಕೆ ಕಂಡು ಬಂದರು ಇದು ಭವಿಷ್ಯದ ಆರೋಗ್ಯಕ್ಕೆ ಭದ್ರ ಬುನಾದಿಯನ್ನು ಕಟ್ಟಿಕೊಡುವುರಲ್ಲಿ ಯಾವುದೇ ಸಂಶಯವಿಲ್ಲ.
ತಾಯಿ ಹಾಲಿನ ವಿಶೇಷ ಪ್ರಯೋಜನಗಳು
- ಸಂಪೂರ್ಣ ಸಂತುಲಿತ ಪೋಷಕಾಂಶ
- ಸ್ವಚ್ಛ ಹಾಗೂ ಸುರಕ್ಷಿತ ಆಹಾರ
- ರೋಗ ನಿರೋಧಕ ಗುಣ
- ಸದಾಕಾಲವು ಲಭ್ಯತೆ
- ಮೆದುಳಿನ ವಿಕಾಸಕ್ಕೆ ವಿಶೇಷ ಪೋಷಕಾಂಶ
- ಭವಿಷ್ಯದಲ್ಲಿ ಬಿಪಿ, ಡಯಾಬಿಟಿಸ್, ಅಲರ್ಜಿ, ಕೊಬ್ಬು, ಅಸ್ತಮಾ ಇತ್ಯಾದಿಗಳಿಂದ ರಕ್ಷಣೆ.
- ಸದಾ ಕಾಲವು ಬೆಚ್ಚಗಿರುವುಗುಣ
- ಸುಲಭವಾಗಿ ಜೀರ್ಣವಾಗುವ ಆಹಾರ
- ತಾಯಿಯ ಮಮತೆ ಮತ್ತು ವಾತ್ಸಲ್ಯದ ಪ್ರತೀಕ
- ಸೋಂಕುಗಳಿಂದ ರಕ್ಷಣೆ
ಸ್ತನ್ಯಪಾನ ನೀಡುವುದರಿಂದ ತಾಯಂದಿರಿಗೆ ಸಿಗುವ ಪ್ರಯೋಜನಗಳು
- ಗರ್ಭ ಕೋಶವು ಬೇಗನೆ ಸಂಕುಚಿತವಾಗಲು ಸಹಕಾರಿ
- ಹೆರಿಗೆಯ ನಂತರದಲ್ಲಿ ರಕ್ತಸ್ರಾವದ ಸಾಧ್ಯತೆ ಕಡಿಮೆ
- ಗರ್ಭಿಣಿಯಾಗಿದ್ದಾಗ ಕೂಡಿಕೊಂಡ ಕೊಬ್ಬಿನ ಪ್ರಮಾಣ ಕರಗಲು ಉಪಕಾರಿ
- ತಾಯಿಯ ಶರೀರದ ಆಕಾರವು ಮೊದಲಿಗಿಂತಲು ಸಹಕಾರಿ
- ಪ್ರಸವ ನಂತರದಲ್ಲಿ ಖಿನ್ನತೆಯ ಸಾಧ್ಯತೆಯು ಕಡಿಮೆ
- ನೈಸರ್ಗಿಕ ಗರ್ಭ ನಿರೋಧಕದತೆ ಕೆಲಸ ಮಾಡುತ್ತದೆ
- ಗರ್ಭಕೋಶದ ಮತ್ತು ಸ್ತನದ ಕ್ಯಾನ್ಸರ್’ನಿಂದ ರಕ್ಷಣೆ
ಲೇಖನ: ಡಾ. ಸಿ.ಜಿ. ರಾಘವೇಂದ್ರ ವೈಲಾಯ
ನವಜಾತ ಶಿಶು ಮತ್ತು ಮಕ್ಕಳ ತಜ್ಞರು
ಮ್ಯಾಕ್ಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ
ಶಿವಮೊಗ್ಗ
Get in Touch With Us info@kalpa.news Whatsapp: 9481252093
Discussion about this post