ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-33 |
ಮನವ ಶೋಧಿಸಬೇಕು ನಿಚ್ಚ ಎಂಬುದು ಪ್ರಸಿದ್ಧ ಹರಿದಾಸರಾದ ಪುರಂದರದಾಸರು ಹೇಳಿದ ಮಾತು ನಮ್ಮ ಜೀವನದಲ್ಲಿ ಮನವನ್ನು ಶೋಧಿಸುವುದು ಬಹಳ ಮುಖ್ಯ. ಮನ ಎಂದರೆ ಬುದ್ಧಿ ಚಿಂತನೆ ಮತ್ತು ಮನಸ್ಸಿನ ಶಕ್ತಿ. ಪ್ರತಿಯೊಬ್ಬ ಮನುಷ್ಯನು ತನ್ನ ಮನಸ್ಸನ್ನು ಶುದ್ಧಿಗೊಳಿಸುವುದರಿಂದ ಅದು ನಮ್ಮ ಜೀವನದ ದಾರಿಯನ್ನು ನಿರ್ಧರಿಸುತ್ತದೆ ಮತ್ತು ನಮಗೆ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಅರ್ಹತೆಯನ್ನು ಒದಗಿಸಿಕೊಡುತ್ತದೆ.
ಮನವನ್ನು ಶುದ್ಧಿಗೊಳಿಸುವುದು ಎಂದರೆ ಕೇವಲ ಪುಸ್ತಕದ ಓದು ಅಥವಾ ಪಾಠ ಕಲಿಯುವುದು ಅಷ್ಟೇ ಅಲ್ಲ. ಆ ಮೂಲಕ ನಮ್ಮ ಬದಲಾಗುತ್ತಿರುವ ಭಾವನೆಗಳನ್ನು, ನಡವಳಿಕೆಯನ್ನೂ ಅರಿತುಕೊಳ್ಳುವುದು. ಸರಿ ತಪ್ಪುಗಳನ್ನು ಗುರುತಿಸಿ, ಜೀವನದಲ್ಲಿ ಸರಿಯಾದ ದಾರಿಯನ್ನು ಕಂಡುಕೊಳ್ಳುವಲ್ಲಿ ಅವಶ್ಯಕ ಜ್ಞಾನವನ್ನು ಪಡೆದುಕೊಳ್ಳುವುದಾಗಿದೆ. ಒಟ್ಟಾರೆಯಾಗಿ ನಮ್ಮ ಆತ್ಮಾವಲೋಕನ ಮಾಡಿಕೊಂಡು ವ್ಯಷ್ಟಿ, ಸಮಷ್ಟಿಗಳಿಗೆ ಅಹಿತವಾದುದನ್ನು ತ್ಯಜಿಸಿ, ಹಿತವಾದುದನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಂಡು, ವೃದ್ಧಿಯಾಗುವತ್ತ ಗಮನಹರಿಸುವುದೇ ಮನಸಿನ ಶುದ್ಧಿಯ ಮುಖ್ಯ ತಾತ್ಪರ್ಯವಾಗಿದೆ.
ಧ್ಯಾನ, ಚಿಂತನೆ ಮತ್ತು ಅನುಭವಗಳು ಮನವನ್ನು ಶೋಧಿಸುವ ಬಹು ಮುಖ್ಯ ಮಾರ್ಗಗಳು. ಪ್ರತಿದಿನ ಮನವನ್ನು ಶೋಧಿಸಲು ಸ್ವಲ್ಪ ಸಮಯ ಮೀಸಲಿಡುವುದರಿಂದ ನಮ್ಮನ್ನು ನಾವು ಅರಿಯಬಹುದಾಗಿದೆ. ಇದರಿಂದ ವ್ಯಕ್ತಿತ್ವ ಪಕ್ವವಾಗುತ್ತದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ. ಮನಸು ಮತ್ತು ಬುದ್ಧಿ ಶುದ್ಧಿಯಾಗುವುದರಿಂದ ಸರಿ ತಪ್ಪುಗಳ ಜ್ಞಾನ ಉಂಟಾಗಿ, ನಿರ್ಧಾರಗಳಲ್ಲಿ ನಿಖರತೆ ಬರುತ್ತದೆ.
ಮನಃಶುದ್ಧಿಯಿಂದ ಸಮಾಜವೂ ಶುದ್ಧವಾಗಿ ಮುನ್ನಡೆಗೆ ಕಾರಣವಾಗುತ್ತದೆ. ಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ಮಾತಿಗೆ ಪುಷ್ಠಿ ದೊರೆಯಬೇಕಾದರೆ, ಆ ಮಾತು ಸತ್ಯವಾಗಬೇಕಾದರೆ ಪ್ಋಇಯೊಬ್ಬರ ಆತ್ಮಾವಲೋಕನ, ತನ್ಮೂಲಕ ಮನಸಿನ ಶುದ್ಧಿ ಬಹು ಅವಶ್ಯಕವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















