ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಕ್ತಕೋಟಿಯ ದಿನನಿತ್ಯದ ಬದುಕಿನ ಕಷ್ಟನಷ್ಟಗಳನ್ನು ನಿವಾರಿಸಿ, ಇಷ್ಟಾರ್ಥ ಪ್ರದಾನಾದಿ ಮಾಡಿ ನಾರಾಯಣ ಸ್ಮರಣೆಯೆಂಬ ಜ್ಞಾನ ದೀವಿಗೆಯನ್ನು ದೇದೀಪ್ಯಮಾನವಾಗಿ ಪ್ರಜ್ವಲಿಸುವಂತೆ ಮಾಡಿ, ನಾಸ್ತಿಕಯುಗದ ನಿಸ್ಸತ್ವ ಜೀವಿಗಳಲ್ಲಿ ದೈವಭಕ್ತಿ, ವಿಚಾರಶ್ರದ್ಧೆಯ ಚೇತನಗಳನ್ನು ಉದ್ದೀಪಿಸಿ, ಭರತವರ್ಷದ ಸನಾತನ ಧರ್ಮ ಅಖಂಡವಾಗಿ ಬೆಳೆದು ಬೆಳಗುವಂತೆ ಮಾಡಿದ ಮಹತೋಮಹಿಮರು, ಅಗಮ್ಯ ಮಹಿಮರು ಶ್ರೀ ರಾಘವೇಂದ್ರ ಸ್ವಾಮಿಗಳು.
ಶ್ರೀ ರಾಘವೇಂದ್ರ ಸ್ವಾಮಿಗಳು ವಿಶ್ವಮೆಚ್ಚಿದ ವಿಶಿಷ್ಟ ಗುರುಗಳು. ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಜಗದ್ಗುರುಗಳು. ಅಗಮ್ಯ ಮಹಿಮರೆಂದೇ ಶತಮಾನಗಳುದ್ದಕ್ಕೂ ಪ್ರಖ್ಯಾತರಾಗಿ ಭಾರತೀಯ ಸನಾತನ ಧರ್ಮದ ಕೀರ್ತಿಕಳಸವಾದವರು.
ಭಾಗವತ ಧರ್ಮದ ಸಾರಸರ್ವಸ್ವವನ್ನು ಎತ್ತಿಹಿಡಿದ ಅನೇಕ ಭಕ್ತ ವಿರಕ್ತ ಗ್ರಂಥಕರ್ತರುಗಳ, ಪರಿವ್ರಾಜಕ ಪರಮಹಂಸರುಗಳ, ಜನಮನವನ್ನು ಧರ್ಮಸಾಗರದಲ್ಲಿ ಶಾಶ್ವತವಾಗಿ ನಿಲ್ಲಿಸಿದ ಅನೇಕ ಮಹಾಮಹಿಮ ಮಹನೀಯ ಮೂರ್ತಿಗಳ, ಪಾವನಕೀರ್ತಿಗಳ ಪುಣ್ಯ ಸಂಚಯದ ರಸಘಟ್ಟಿಯ ಅಮೃತಫಲವೇ ಇಂದು ಶ್ರೀ ರಾಘವೇಂದ್ರ ಸ್ವಾಮಿಗಳ ನಿರಂತರ ಕರುಣಾಪ್ರವಾಹವಾಗಿ ಸಾಕಾರಗೊಂಡಿದೆ. ಆಶ್ರಮ ಸ್ವೀಕಾರವಾದೊಡನೆಯೇ ಹೆಜ್ಜೆಯಿಟ್ಟಲ್ಲಿ ಹಸುರಿನ ಬೆಳೆ, ಹೊನ್ನಿನ ಮಳೆಯನ್ನು, ಜ್ಞಾನದ ಸೆಲೆಯನ್ನು, ದಿಕ್ಕು ದಿಕ್ಕಿನಲ್ಲಿ ಹರಡಿದ ಶ್ರೀ ರಾಘವೇಂದ್ರ ತೀರ್ಥರು ಬೃಂದಾವನ ಪ್ರವೇಶ ಮಾಡಿದ ಮೇಲಂತೂ ತಮ್ಮ ಕೃಪಾಶೀರ್ವಾದದ ಅಕ್ಷಯ ರಕ್ಷಣೆಯಿಂದಾಗಿ ಭಕ್ತಿಯ ಭಾಗೀರಥಿಯನ್ನೇ ನಾಡಿನ ಉದ್ದಗಲಕ್ಕೂ ಹರಿಸಿ ಬಿಟ್ಟಿದ್ದಾರೆ, ತಮ್ಮನ್ನು ನಂಬಿ ಬಂದ ಎಲ್ಲ ವರ್ಗದ ಜನತೆಗೂ, ವಿಶ್ವಾಸ, ನೆಮ್ಮದಿ, ಸಾಂತ್ವಾನ, ಸಮಾಧಾನಗಳು ಅಂತರಂಗದಲ್ಲಿ, ಶಾಶ್ವತವಾಗಿ ದೊರಕುವಂತೆ ತಮ್ಮ ತಪಸ್ಸನ್ನೇ ಧಾರೆಯೆರೆಯುತ್ತಿರುವ ತಪೋನಿಧಿ ಶ್ರೀ ಗುರುಸಾರ್ವಭೌಮರು ಕಲಿಯುಗದ ಕಲ್ಪವೃಕ್ಷ, ಕರೆದವರ ಕಾಮಧೇನು.
ಧರೆಗಿಳಿದ ಕಾಮಧೇನು
ಶ್ರೀ ರಾಘವೇಂದ್ರರ ಪೂರ್ವಾಶ್ರಮದ ಹೆಸರು ವೆಂಕಟನಾಥ. ಕದಂಬ, ರಾಷ್ಟ್ರಕೂಟ, ಚಾಲುಕ್ಯ, ದೇವಗಿರಿ, ವಿಜಯನಗರ ಸಾಮ್ರಾಜ್ಯಗಳಲ್ಲಿ ಉನ್ನತ ಪದವಿಯಲ್ಲಿದ್ದು ಖ್ಯಾತಿಯ ಉತ್ತುಂಗಕ್ಕೇರಿದ ಅರವತ್ತೊಕ್ಕಲು ಮನೆತನದ ತಿಮ್ಮಣ್ಣ ಭಟ್ಟರೇ ತಂದೆ, ತಾಯಿ ಗೋಪಿಕಾಂಬಾ. ತಿರುಪತಿಯ ವೇಂಕಟೇಶ್ವರನ ವರಪುತ್ರನಾಗಿ ಜನಿಸಿದ ವೆಂಕಟನಾಥನಿಗೆ ಗುರುರಾಜ ಎಂಬ ಸೋದರ, ವೆಂಕಟಾಂಬಾ ಎಂಬ ಸಹೋದರಿ .ವೇದಾಂತ ವಿದ್ಯೆಯಲ್ಲಿ ಪರಮಪಾಂಡಿತ್ಯವನ್ನು ಪಡೆದು ಪ್ರಸಿದ್ಧರಾಗಿದ್ದ ತಿಮ್ಮಣ್ಣ ಭಟ್ಟರ ಪವಿತ್ರ ಹೃದಯಕ್ಕೆ ಮರುಳಾದ ಕನ್ನಡ ಸಾಮ್ರಾಟ ವೆಂಕಟಪತಿರಾಯ ಅವರಿಗೆ ಹಗಲು ದೀವಟಿಗೆಯ ದಿವ್ಯ ಗೌರವನ್ನಿತ್ತು ಸತ್ಕರಿಸಿದ್ದನು.
ವಿಜಯನಗರದ ವಿಶ್ವವಿಖ್ಯಾತ ಪ್ರಭು ಶ್ರೀಕೃಷ್ಣದೇವರಾಯನಿಗೇ ವೀಣಾವಾದನ ಕಲೆಯನ್ನು ಕಲಿಸಿದವರು ತಿಮ್ಮಣ್ಣಭಟ್ಟರ ತಾತ ಕೃಷ್ಣಭಟ್ಟರು. ಕೃಷ್ಣಭಟ್ಟರ ಮಕ್ಕಳಾದ ಕನಕಾಚಲಭಟ್ಟರೂ ವೇದವೇದಾಂಗ ವೇದಾಂತವಿದ್ಯಾ ಪಾರಂಗತರೆಂದೂ, ವೈಣಿಕ ವಿದ್ಯಾವಿಶಾರದರೆಂದೂ ಖ್ಯಾತರಾಗಿದ್ದವರು. ಹೀಗೆ ಸಾಮ್ರಾಜ್ಯ, ಅಧಿಕಾರ, ವೇದವಿದ್ಯೆ, ಕಲೆ, ಸಂಪತ್ತುಗಳ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದ ಈ ವಂಶದ ತಿಮ್ಮಣ್ಣಭಟ್ಟರು ಮಾತ್ರ ರಕ್ಕಸತಂಗಡಿಯ ರಾಕ್ಷಸೀಯುದ್ಧದ ಬಿಸಿಯಿಂದಾಗಿ, ವಿಜಯನಗರ ಸಾಮ್ರಾಜ್ಯ ಪತನವಾದ ಮೇಲೆ ವಿದ್ವಾಂಸರೆಲ್ಲಾ ವಿವಿಧ ಸ್ಥಳಗಳಿಗೆ ವಲಸೆ ಹೋದಾಗ, ತಾವು ಕುಂಭಕೋಣಕ್ಕೆ ಬಂದು ಶ್ರೀ ಸುರೇಂದ್ರತೀರ್ಥರ ಹಾಗೂ ಶ್ರೀ ವಿಜಯೀಂದ್ರತೀರ್ಥರ ಆಶ್ರಯ ಪಡೆದರು. ಕುಟುಂಬ ಹಿರಿದಾದಂತೆ ಭುವನಗಿರಿಗೆ ಬಂದು ನೆಲೆಸಿ, ಖ್ಯಾತ ವಿದ್ವಾಂಸರೂ, ಸುಸಂಸ್ಕೃತರೂ ಆಗಿದ್ದ ಮಧುರೆಯ ಲಕ್ಷ್ಮೀ ನರಸಿಂಹಾಚಾರ್ಯರೆಂಬುವರಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದರು.
ವೆಂಕಟನಾಥನ ಚೌಲ ಹಾಗೂ ಅಕ್ಷರಭ್ಯಾಸ ಮಹೋತ್ಸವವನ್ನು ನಡೆಸಿದ ತಿಮ್ಮಣ್ಣಭಟ್ಟರು ಒಮ್ಮೆ ಓಂ ಎಂದು ಮರಳಿನ ಮೇಲೆ ಬರೆದು ಮಗು ಈ ಅಕ್ಷರವನ್ನು ಓದು ಎಂದಾಗ ಮಗು, ಅಪ್ಪಾ ಈ ಚಿಕ್ಕ ಅಕ್ಷರದಲ್ಲಿ ಭಗವಂತನ ಅಪಾರ ಮಹಿಮೆ ಹೇಗೆ ತಿಳಿಯುತ್ತದೆ ಎಂದು ಪ್ರಶ್ನಿಸಿತು. ಸರ್ವಜ್ಞರ ಸಂಕ್ಷಿಪ್ತ ಆವೃತ್ತಿಯಂತಿದ್ದ ಆ ಮಗುವಿನ ಚಿಂತನ ಶಕ್ತಿಗೆ, ಪ್ರತಿಭೆ ಪುಟಿಯುವ ಉಕ್ತಿಗೆ, ಬೆರಗಾದ ತಾಯ್ತಂದೆಯರು ಸಂತೋಷದಿಂದ ಪುಳಕಿತರಾದರು.
ಕೆಲವೇ ದಿನಗಳಲ್ಲಿ ತಿಮ್ಮಣ್ಣಭಟ್ಟ ಗೋಪಿಕಾಂಬೆಯರು ಸ್ವರ್ಗಸ್ಥರಾದ ಮೇಲೆ ಇಡೀ ಕುಟುಂಬದ ಸಂರಕ್ಷಣೆಯ ಸಂಪೂರ್ಣ ಜವಾಬ್ದಾರಿ ಅಳಿಯಂದಿರಾದ ಶ್ರೀ ಲಕ್ಷ್ಮೀನರಸಿಂಹಾಚಾರ್ಯರ ಮೇಲೆ ಬಿತ್ತು. ತಾಯ್ತಂದೆಯರನ್ನು ಕಳೆದುಕೊಂಡು ಅನಾಥನಾಗಿದ್ದ ವೆಂಕಟನಾಥನಿಗೆ ಲಕ್ಷ್ಮೀನರಸಿಂಹಾಚಾರ್ಯರೇ ವಿದ್ಯೆ ಹೇಳತೊಡಗಿದರು. ಭಾವನವರ ಬಾಯಿಂದ ಬರುತ್ತಿದ್ದ ಬ್ರಹ್ಮಸೂತ್ರ ಭಗವದ್ಗೀತಾ ಉಪನಿಷದ್ ಗ್ರಂಥಗಳಲ್ಲಿಯ ಜಟಿಲ ಸ್ಪಟಿಕ ವಿಷಯಗಳನ್ನೆಲ್ಲಾ ಸ್ಪುಟವಾಗಿ ವಿಶದೀಕರಿಸಿ ಕೇಳತೊಡಗಿದ ವೆಂಕಟನಾಥ ಬರುಬರುತ್ತ ವ್ಯಾಕರಣಪಾಂಡಿತ್ಯ, ಮೀಮಾಂಸಾ ಪ್ರಭುತ್ವ, ನ್ಯಾಯನೈಪುಣ್ಯ, ವೇದವೈದುಷ್ಯಗಳಲ್ಲಿ ತಾನೇತಾನಾಗಿ ವಿಜೃಂಭಿಸತೊಡಗಿದಾಗ, ಗುರುಗಳ ಅಂತಃಕರಣ ಸಾರ್ಥಕತೆಯ ಭಾವನೆಯಿಂದ ತುಂಬಿ ಬಂದಿತ್ತು. ವೆಂಕಟನಾಥ ತಮ್ಮ ವಂಶದ ವಿಶೇಷ ಕಲೆಯಾದ ವೀಣಾವಾದನದಲ್ಲಿಯೂ ಪಾರಂಗತನಾಗಿ, ಆ ಮೂಲಕ ಹರಿದುಬಿಟ್ಟ ನಾದಮಾಧುರ್ಯದ ಮೂಲಕ ಭಕ್ತಿರಸವು ಹೃದಯಗಳಲ್ಲಿ ತುಂಬಿ ತುಳುಕುವಂತಹ ಪರಿಣತಿಯನ್ನೂ ಗಳಿಸಿಕೊಂಡನು.
ತಾಪತ್ರಯ ಕಳೆವ ತಪೋನಿಧಿ
ಸುಂದರ ಕಾಂತಿಯ, ಮಂದಹಾಸ ಸೂಸುವ ಕಣ್ಣುಗಳು, ಚೈತನ್ಯದ ಜಲಪಾತದಂತಿದ್ದ ವೆಂಕಟನಾಥ ಅಪೂರ್ವ ತೇಜಸ್ವಿಯಂತೆ ಕಂಗೊಳಿಸುತ್ತಿದ್ದನು. ವೆಂಕಟನಾಥ ಸರಸ್ವತಿ ಎಂಬ ಯೋಗ್ಯ ಕನ್ಯೆಯ ಕೈಹಿಡಿದು ಹಾಲಿಗೆ ಸಕ್ಕರೆ ಬೆರೆತಂತಾಯಿತು. ಭಕ್ತಿ ಹಾಗೂ ವಿನಯಗಳ ಸಾಕ್ಷಾತ್ ಸರಸ್ವತಿಯೇ ಆಗಿದ್ದ ವೆಂಕಟನಾಥನ ಪತ್ನಿ ಸಾಮರಸ್ಯದಿಂದ ಸಂಸಾರ ನಡೆಸುವುದರಲ್ಲಿ ಅಸದೃಶ್ಯಳೆನಿಸಿಕೊಂಡಳು. ಆದರೆ ಬಡತನದ ಭಾರ ನಿಧಾನವಾಗಿ ಆವರಿಸಲಾರಂಭಿಸಿ, ದಿನದಿನಕ್ಕೆ ಅದರ ತೀವ್ರಬಾಧೆ ಹೆಚ್ಚುತ್ತಿತ್ತು. ಇಂತಹ ದಟ್ಟದಾರಿದ್ರ್ಯದ ದಿನಗಳಲ್ಲಿಯೂ ಪರೀಕ್ಷೆಯೆನ್ನುವಂತೆ ಒಂದು ರಾತ್ರಿ ಕಳ್ಳರು ನುಗ್ಗಿ ಇದ್ದಬದ್ದ ಚಿಂದಿ ಬಟ್ಟೆ, ಒಡಕಲು ಪಾತ್ರೆಗಳನ್ನು ದೋಚಿಕೊಂಡು ಹೋದರು. ವೆಂಕಟನಾಥ ಬೆಳಗಾಗೆದ್ದು ನೋಡುವಲ್ಲಿ ಮನೆ ಸ್ವಚ್ಛವಾಗಿದ್ದಿತು. ಮನಸ್ಸು ನಿರಾಳವಾಯಿತು. ಆದರೆ ಆ ವೇಳೆಗೆ ಒಂದು ಪುಟ್ಟ ಕೂಸನ್ನು ಹೆತ್ತಿದ್ದ ಸರಸ್ವತಿ ಮಾತ್ರ, ಮಗುವಿಗೆ ಕುಡಿಯಲು ಒಂದು ತೊಟ್ಟು ಹಾಲೂ ಇಲ್ಲದಂತಾಗಿದ್ದರಿಂದ ಒದ್ದಾಡತೊಡಗಿದಳು. ಕಡೆಗೆ ಇಬ್ಬರೂ ಕುಂಭಕೋಣದಲ್ಲಿರುವ ತಮ್ಮ ಗುರು ಶ್ರೀ ಸುಧೀಂದ್ರತೀರ್ಥರ ಬಳಿ ಬಂದು ನೆಲೆಸಿದರು. ವೆಂಕಟನಾಥಚಾರ್ಯರ ಸಂಸಾರ ತಾಪತ್ರಯಗಳನ್ನು ನಿವಾರಿಸಿ ಸಜ್ಜನರ, ಆಸ್ತಿಕರ ಉದ್ಧಾರಕ್ಕಾಗಿ, ಆಚಾರ್ಯರಿಗೆ ಶ್ರೀ ಸುಧೀಂದ್ರರು ತಾವೇ ಶ್ರೇಷ್ಠ ಗ್ರಂಥಗಳ ಪಾಠ ಹೇಳತೊಡಗಿ, ಪರಂಪರಾಗತ ದಿವ್ಯ ಜ್ಞಾನಾಗಂಗೆಯು ನಿರಂತರ ಪ್ರವಹಿಸುವಂತೆ ಪ್ರೇರಣೆ ನೀಡಿದರು. ಸರ್ವಜ್ಞಾಚಾರ್ಯರ ಸಮಸ್ತ ಗ್ರಂಥಗಳ ಸಂಪೂರ್ಣ ಅಧ್ಯಯನ ಮಾಡುತ್ತಲೇ ಅನೇಕ ಶಿಷ್ಯರಿಗೆ ವೇದಾಂತ, ವ್ಯಾಕರಣ, ಕಾವ್ಯ, ಸಾಹಿತ್ಯ, ಮೀಮಾಂಸ ಹಾಗೂ ತರ್ಕ ಶಾಸ್ತ್ರಗಳ ಪಾಠ ಹೇಳುತ್ತ ಗುರುಗಳ ಅತ್ಯಾದರ ಪ್ರೀತಿ ಗೌರವಗಳಿಗೆ ಪಾತ್ರರಾದರು ವೆಂಕಟನಾಥಚಾರ್ಯರು.
ವಿದ್ವತ್ ಸ್ವರೂಪಿ ವಿಶ್ವರೂಪಿ
ಶ್ರೀ ಸುಧೀಂದ್ರತೀರ್ಥರು ತಮ್ಮ ಸಂಚಾರ ಕಾಲದಲ್ಲಿ ಆಚಾರ್ಯರನ್ನೂ ಜೊತೆಗೆ ಕರೆದೊಯ್ದರು. ರಾಜಮನ್ನಾರಿನ ಶ್ರೀ ಕೃಷ್ಣನ ಗುಡಿಯಲ್ಲಿ ಆಚಾರ್ಯರು ಪ್ರತಿವಾದಿಗಳೊಡನೆ ವಾದ ಮಾಡಬೇಕಾದ ಸಂದರ್ಭ ಒದಗಿಸಿತು. ಮೊದಲ ಬಾರಿಗೇ ವಾದ ವೇದಿಕೆಗಿಳಿದ ಆಚಾರ್ಯರು ಪ್ರಮಾಣಬದ್ಧವೂ, ಶಾಸ್ತ್ರಶುದ್ಧವೂ, ಶೃತಿಸ್ಮತಿಸಿದ್ಧವೂ ಆದ ದಿವ್ಯ ವಾಗ್ವೈಖರಿಯಿಂದ ಪ್ರತಿವಾದಿಗಳ ವಾದಾಟೋಪವನ್ನು ವಿಶಿಷ್ಟವಾಗಿ ನಿಗ್ರಹಿಸಿ, ದೇಶದೇಶಗಳ ದಿಗ್ದಂತಿ ಪಂಡಿತರುಗಳಿಂದ ಪ್ರಾಂಜಲಭಾವದ ಪ್ರಶಂಸೆ ಗಳಿಸಿದರು. ಗುರುಸುಧೀಂದ್ರತೀರ್ಥರಿಗೆ ಕಂಠ ಬಿಗಿದುಬಂದು ಶಿಷ್ಯನಿಗೆ ಅನುಗ್ರಹ ಪೂರ್ವಕವಾಗಿ ಮಹಾಭಾಷ್ಯಾಚಾರ್ಯ ಪ್ರಶಸ್ತಿಯನ್ನಿತ್ತರು. ಹೋದೆಡೆಯೆಲ್ಲೆಲ್ಲಾ ಹೀಗೆ ಅಭೂತಪೂರ್ವವಾದ ಅಪರಿಮಿತ ಪಾಂಡಿತ್ಯ ಪರಾಕ್ರಮವನ್ನು ಪ್ರದರ್ಶಿಸಿ, ಪಂಡಿತ ಪುಂಡರೀಕರೆಲ್ಲರನ್ನೂ ನಿಶ್ಯಸ್ತ್ರರನ್ನಾಗಿಸಿ, ಸರ್ವಜ್ಞ ಶ್ರೇಷ್ಠವಾದ ಪ್ರಜ್ಞಾಗೌರವವನ್ನು ಅಪಾರವಾಗಿ ಎತ್ತಿ ಹಿಡಿಯುತ್ತಾ ಹೊಸ ದಿಗ್ವಿಜಯ ಪರಂಪರೆಯೊಂದನ್ನೇ ಸೃಷ್ಟಿಸುತ್ತಿದ್ದ ವೆಂಕಟನಾಥಚಾರ್ಯರೇ ತಮ್ಮ ಪೀಠಕ್ಕೆ ಸಮರ್ಥ ಉತ್ತರಾಧಿಕಾರಿಯೆಂದು ಸುಧೀಂದ್ರರು ಸಂಕಲ್ಪ ಮಾಡಿದರು.
ಏಕಾಂತದಲ್ಲಿ ಗುರುಗಳು ಈ ವಿಷಯ ಪ್ರಸ್ತಾಪಿಸಿದಾಗ ವೆಂಕಟನಾಥರು ಸಂಸಾರದ ಕಾರಣ ಮುಂದೊಡ್ಡಿ ನಿರಾಕರಿಸಿದರು. ಮಠದಿಂದ ಮನೆಗ ಬಂದ ಆಚಾರ್ಯರಿಗೆ ಸಮಾಧಾನ ದೂರವಾಯಿತು. ರಾತ್ರಿ ನಿದ್ದೆಯಲ್ಲಿ ವಿದ್ಯಾಲಕ್ಷ್ಮಿ ಕಾಣಿಸಿಕೊಂಡು ಪ್ರಿಯ ವೆಂಕಟನಾಥ, ಸುಧೀಂದ್ರರ ಆಶಯದಂತೆ ಆಶ್ರಮ ಸ್ವೀಕರಿಸು. ನಿನ್ನಿಂದ ಧರ್ಮ, ಸಂಸ್ಕೃತಿಗಳು ಬೆಳಗಬೇಕಾಗಿದೆ. ನಿನ್ನಿಂದ ಲೋಕಕಲ್ಯಾಣದ ಮಹತ್ಕಾರ್ಯವಾಗಲಿದೆ ಯೆಂದು ಹೇಳಿ ಎಚ್ಚರಸಿದಳು. ಬೆಳಗಾಗುವುದರೊಳಗೆ ದಾರಿ ಸುಷ್ಪಷ್ಟವಾಗಿತ್ತು. ವೈರಾಗ್ಯದ ಬೀಜ ಅಂಕುರಿಸಿತ್ತು. ಕೆಲವು ದಿನಗಳಲ್ಲಿಯೇ ಶ್ರೀಗಳವರು ತಂಜಾವೂರಿನ ರಘುನಾಥ ಭೂಪಾಲನ ಆಸ್ಥಾನದಲ್ಲಿ ವೆಂಕಟನಾಥಚಾರ್ಯರಿಗೆ ಶ್ರೀರಾಘವೇಂದ್ರತೀರ್ಥ ಎಂಬ ಅಭಿದಾನದಿಂದ ಆಶ್ರಯವಿತ್ತು ಸರ್ವಜ್ಞ ಸಾಮ್ರಾಜ್ಯದ ಪರಮಹಂಸರನ್ನಾಗಿ ಪ್ರತಿಷ್ಠಾಪಿಸಿದರು. ತನ್ನ ಪ್ರೀತಿಯ ಪತಿ ಸನ್ಯಾಸ ಸ್ವೀಕಾರ ಮಾಡಿದ ಸುದ್ದಿ ಕೇಳಿದ ಸರಸ್ವತಿಗೆ ದಿಕ್ಕೆಟ್ಟಂತಾಗಿ, ಸ್ಮತಿಭ್ರಮೆಯಾಗಿ, ಪತಿ ವಿರಹದ ನೋವು ತಾಳಲಾರದೆ ಬಾವಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಳು. ಅಪಮೃತ್ಯುವಿನಿಂದಾಗಿ ಪಿಶಾಚ ರೂಪದಲ್ಲಿಯೇ ದುಃಖದಿಂದ ಬಂದು ನಿಂತ ಸರಸ್ವತಿಯನ್ನೂ ನೋಡಿ ಕನಿಕರಿಸಿದ ರಾಘವೇಂದ್ರರು ಅವಳ ಮೇಲೆ ಮಂತ್ರೋದಕವನ್ನು ಪ್ರೋಕ್ಷಿಸಿ, ಅವಳಿಗೆ ಸದ್ಗತಿಯನ್ನು ಕರುಣಿಸಿದರು.
ಶ್ರೀರಾಘವೇಂದ್ರರು ಆಶ್ರಮ ಸ್ವೀಕರಿಸಿದ ಎರಡು ವರ್ಷಗಳಲ್ಲಿ ಗುರುವರೇಣ್ಯ ಸುಧೀಂದ್ರತೀರ್ಥರು ಬೃಂದಾವನಸ್ತರಾದರು. ಮೂಲರಾಮ ದೇವರ ಪೂಜೆ, ಶಿಷ್ಯರಿಗೆ ಪಾಠ ಪ್ರವಚನಗಳು, ವೇದ ವೇದಾಂತಗಳ ವ್ಯಾಖ್ಯಾನ, ಜೊತೆಜೊತೆಯಲ್ಲೇ ಅನೇಕ ಮಹತ್ವದ ಗ್ರಂಥಗಳನ್ನೂ ರಚಿಸಿದರು. ವೇದತ್ರಯ ವಿವೃತ್ತಿಗಳನ್ನು ರಚಿಸಿ ವೈದಿಕವಾಙ್ಮಯಕ್ಕೊಂದು ವಿಶಿಷ್ಟ ಹೊಳಪನ್ನೂ, ಸಮಸ್ತ ದ್ವೈತಭಾಷ್ಯ ಟೀಕೆಗಳಿಗೆ ವಿಶ್ವಮಾನ್ಯ ಟಿಪ್ಪಣಿಗಳಾನ್ನೂ ಕೊಟ್ಟು ನ್ಯಾಯ ಮುಕ್ತಾವಳಿ, ತಂತ್ರದೀಪಿಕಾ, ಮಂತ್ರಾರ್ಥಮಂಜರಿ, ಉಪನಿಷಖಂಡಾರ್ಥ, ಪಂಚಸೂಕ್ತ ವ್ಯಾಖ್ಯಾನ, ಭಾಟ್ಟ ಸಂಗ್ರಹಗಳನ್ನೂ ಪರಿಮಳದಂತಹ ಅಮೋಘ ಕೃತಿಯನ್ನು ರಚಿಸಿ ಪರಿಮಳಾಚಾರ್ಯರೆಂದೇ ಖ್ಯಾತರಾಗಿ ಸಾರಸ್ವತ ಭಂಡಾರವನ್ನು ಶ್ರೀಮಂತಗೊಳಿಸಿದರು. ತೀರ್ಥಕ್ಷೇತ್ರಯಾತ್ರೆ, ದೇಶ ಪರ್ಯಟನ, ಶಿಷ್ಯ ಭಕ್ತಜನೋದ್ಧಾರ, ವಾಕ್ಯಾರ್ಥ ವ್ಯಾಖ್ಯಾನ, ಪರವಾದಿ ದಿಗ್ವಿಜಯ, ಸಿದ್ದಾಂತ ಸ್ಥಾಪನೆ ತತ್ವಧರ್ಮೋಪದೇಶ, ದೀನದಲಿತರ ಸಂಕಷ್ಟ ನಿವಾರಣೆ, ಸುಖಶಾಂತಿ ಹಾಗೂ ಧರ್ಮಪ್ರಸಾರ ಮುಂತಾದ ಲೋಕಕಲ್ಯಾಣದ ಕಾರ್ಯಕ್ರಮಗಳನ್ನು ಯೋಜಿಸಿಕೊಂಡು ಯಶಸ್ವೀ ದಿಗ್ವಿಜಯಗಳನ್ನು ಅನುಗ್ರಹಿಸಿ, ಅವರಿಂದ ಸನ್ಮಾನಿತರಾಗಿ, ಇಡೀ ದಕ್ಷಿಣದಲ್ಲೇ ರಾಜಕೀಯ ಹಾಗೂ ಸಾಮಾಜಿಕ ಸೌಹರ್ದ ಮತ್ತು ಸ್ನೇಹ ಸಂವರ್ಧನೆಯನ್ನು ಮೂಡಿಸಿದರು.
ಗುರುರಾಜರ ಯಾತ್ರೆಗಳಲ್ಲಿ ಉಡುಪಿ ಕ್ಷೇತ್ರ ಯಾತ್ರೆಯೊಂದು ಮೈಲಿಗಲ್ಲು. ಉಡುಪಿಯಲ್ಲಿ ಹಿಂದೆ ವಾದಿರಾಜರು ವಿಜಯೀಂದ್ರರಿಗೆ ತಮ್ಮ ಗೆಳೆತನದ ನೆನಪಾಗಿ ಅರ್ಪಿಸಿದ್ದ ಸ್ವಂತ ಮಠದಲ್ಲಿಯೇ ಬಿಡಾರ ಹೂಡಿದರು. ಶ್ರೀಮದಾನಂದತೀರ್ಥ ಕರಾಚಿರ್ತನಾದ ಶ್ರೀ ಕೃಷ್ಣನ ದರ್ಶನ ಮಾಡಿ, ಆ ಸ್ವಾಮಿಯನ್ನು ತಾವೇ ಅರ್ಚಿಸಿ ಆನಂದಭರಿತರಾದರು. ಶ್ರೀ ಕೃಷ್ಣ ಸನ್ನಿಧಿಯಲ್ಲಿ ಚಂದ್ರಿಕಾ ಗ್ರಂಥವನ್ನು ಹತ್ತು ಬಾರಿ ಪಂಡಿತವೃಂದಕ್ಕೆ ಪಾಠ ಹೇಳಿ ಆ ಗ್ರಂಥಕ್ಕೆ ಪ್ರಕಾಶ ಎಂದು ದಿವ್ಯವ್ಯಾಖ್ಯಾನ ರಚಿಸಿದರು. ಜಯತೀರ್ಥರ ಶ್ರೀಮನ್ನ್ಯಾಯಸುಧಾ ಮೇರು ಗ್ರಂಥಕ್ಕೆ ಪರಿಮಳವೆಂಬ ಉತ್ತಮೋತ್ತಮ ವ್ಯಾಖ್ಯಾನ ರಚಿಸಿ ಕೃಷ್ಣನ ಚರಣಾರವಿಂದಗಳಲ್ಲಿ ಸಮರ್ಪಿಸಿದರು.
ಮಂಗಳದ ಬೆಳಕು ಮಂಚಾಲೆ ರಾಘಪ್ಪ
ಬಿಜಾಪುರದ ದಿವಾನ, ತನ್ನ ಭಕ್ತ ವೆಂಕಣ್ಣ ಹಾಗೂ ದೊರೆ ಸಿದ್ದಿ ಮಸೂದ್ ಖಾನನಿಂದ ಮಂತ್ರಾಲಯವನ್ನು ಉಡುಗೊರೆಯಾಗಿ ಪಡೆದರು ಶ್ರೀಗಳು. ವೆಂಕಣ್ಣ ಆದವಾನಿಯಂತಹ ದೊಡ್ಡ ಸಂಸ್ಥಾನದಲ್ಲಿ ಕೇವಲ ಬೆಂಗಾಡಾಗಿರುವ ಮಂತ್ರಾಲಯದಂತಹ ಸಣ್ಣ ಗ್ರಾಮವನ್ನೇಕೆ ಕೇಳಿದಿರಿ ಎಂದಾಗ ಸ್ವಾಮಿಗಳು ಮಂದಹಾಸ ಸೂಸಿದರು. ಮುಂದೆ ಶ್ರೀಗಳು ಮಂತ್ರಾಲಯಕ್ಕೆ ದಿಗ್ವಿಜಯ ಮಾಡಿಸಿದರು. ಮಂತ್ರಾಲಯದ ಊರಿನೊಳಗೆ ತಮ್ಮ ಕುಲದೇವತೆ ಶ್ರೀವೆಂಕಟೇಶ್ವರನನ್ನು ಪ್ರತಿಷ್ಠಾಪಿಸಿ, ಇರಲು ಒಂದು ಮಂದಿರವನ್ನು ನಿರ್ಮಿಸಿ ಅಲ್ಲಿ ಪೂಜಾ ಅಧ್ಯಯನಾದಿಗಳನ್ನು ಪ್ರಾರಂಭಿಸಿದರು.
ಒಮ್ಮೆ ರಾಯರು ದಿವಾನ್ ವೆಂಕಣ್ಣನನ್ನು ತುಂಗಾಭದ್ರಾ ದಡಕ್ಕೆ ಕರೆದೊಯ್ದು, ಅಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಅಗೆಯಲು ಸೂಚಿಸಿದರು. ಭೂಮಿಯನ್ನು ಅಗೆದಾಗ ಯಾಗಸ್ಮಾರಕ ಪದಾರ್ಥಗಳು ಹಾಗೂ ಯಜ್ಞಕುಂಡಗಳ ಅವಶೇಷಗಳು ಅಲ್ಲಿ ಕಂಡುಬಂದವು. ಆಶ್ಚರ್ಯ ಚಕಿತನಾದ ವೆಂಕಣ್ಣನಿಗೆ ಶ್ರೀಗಳು ಈ ಮಂಗಳಕರ ನೆಲದ ಪವಿತ್ರತೆಯನ್ನು ತಿಳಿಸಿದರು. ಕೃತಯುಗದಲ್ಲಿ ಯಜ್ಞ ನಡೆಸಿದ್ದು ತ್ರೇತೆಯಲ್ಲಿ ಶ್ರೀರಾಮಚಂದ್ರ ಲಕ್ಷ್ಮಣರು ಸೀತಾಮಾತೆಯನ್ನರಸುತ್ತಾ ಇಲ್ಲಿ ವಿಶ್ರಮಿಸಿದ್ದು ಈ ಕ್ಷೇತ್ರವನ್ನು ಪುನೀತಗೊಳಿಸಿದ್ದು. ದ್ವಾಪರದಲ್ಲಿ ಇದು ಅನುಸಾಲ್ವನ ಕಟ್ಟಿಹಾಕಿದನು. ಯುದ್ದದಲ್ಲಿ ಅರ್ಜುನ ಸೋತು, ಕೃಷ್ಣನನ್ನು ಸ್ಮರಿಸಿದಾಗ ದೇವರದೇವನು ಪ್ರತ್ಯಕ್ಷನಾಗಿ ಅರ್ಜುನನಿಗೆ ಪ್ರಹ್ಲಾದರು ಯಜ್ಞ ಮಾಡಿದ ನೆಲದ ಮೇಲೆ ಅನುಸಾಲ್ವ ನಿಂತಿರುವುದರಿಂದ ಅವನನು ಯಾರೂ ಜಯಿಸಲು ಸಾಧ್ಯವಿಲ್ಲ ಎಂದು ಹೇಳಿ ಅನುಸಾಲ್ವನನ್ನು ಯೋಗ ವಿದ್ಯೆಯಿಂದ ಸ್ಥಳಾಂತರಗೊಳಿಸಿದ ಮೇಲೆಯೆ ಅರ್ಜುನನ ಗೆಲವು ಸುಲಭವಾಯಿತು. ಹೀಗೆ ಕೃಷ್ಣಾರ್ಜುನರ ಪವಿತ್ರ ಪಾದರೇಣುವಿನಿಂದ ಪುನೀತವಾಗಿದೆ ಈ ಸ್ಥಳ.
ನಂತರ ವಿಜಯನಗರದ ಕಾಲದಲ್ಲಿ ವಿಬುಧೇಂದ್ರತೀರ್ಥರು ಈ ಸ್ಥಳದಲ್ಲಿ ತಪಸ್ಸನ್ನಾಚರಿಸಿದರು ಎಂದು ತಿಳಿಸುತ್ತಲೇ ತಾವು ಇಂತಹ ಪರಮಪಾವನ ಕ್ಷೇತ್ರದಲ್ಲಿ ಸಶರೀರವಾಗಿ ಬೃಂದಾವನ ಪ್ರವೇಶ ಮಾಡಿಲಿರುವುದನ್ನು ಪ್ರಕಟಿಸಿದರು. ತಾವು ಬೃಂದಾವನ ಪ್ರವೇಶ ಮಾಡಿದರೂ ಏಳುನೂರು ವರ್ಷ ಬೃಂದಾವನಾಂತರ್ಗತವಾಗಿದ್ದು ಭಕ್ತಜನರ ದುರಿತ ನಿವಾರಣೆ, ವೇದವಿದ್ಯಾಪ್ರಸಾರ ಹಾಗೂ ಆಗಮ್ಯ ಮಹಿಮಾದ್ವರಾ ಇಷ್ಟಾರ್ಥ ಸಿದ್ಧಿಯನ್ನು ಕರುಣಿಸುತ್ತಾ, ಜಗತ್ಕಲ್ಯಾಣ ಕಾರ್ಯಕ್ಕಾಗಿ ತಮ್ಮ ತಪಸ್ಸನ್ನು ಧಾರೆಯೆರೆಯಬೇಕಾಗಿದೆ ಎಂದು ಹೇಳಿದರು. ವೆಂಕಣ್ಣಚಾರ್ಯರಿಗೆ ಗುರೂಪದೇಶ ನೀಡಿ ಶ್ರೀ ಯೋಗೀಂದ್ರತೀರ್ಥರು ಎಂಬ ಅಭಿದಾನದಿಂದ ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿ ಅನುಗ್ರಹಿಸಿದರು. ನಂತರ ಶುಭ ಮೂಹೂರ್ತದಲ್ಲಿ ಬೃಂದಾವನ ಪ್ರವೇಶ ಮಾಡಿ, ಯೋಗಾಸೀನರಾಗಿ ಕುಳಿತು ತಪೋನಿರತರಾದರು. ನಂತರ ಶುಭ ಮೂಹೂರ್ತದಲ್ಲಿ ಬೃಂದಾವನ ಪ್ರವೇಶ ಮಾಡಿ, ಅವರ ಸುತ್ತ ಬೃಂದಾವನ ನಿರ್ಮಿಸಿ ಏಳುನೂರು ಸಾಲಿಗ್ರಾಮ ಶಿಲೆಗಳನ್ನಿಟ್ಟು ಬೃಂದಾವನ ಪ್ರತಿಷ್ಠೆ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಯತಿವರರು ಮಾನವ ಕುಲದ ಕಲ್ಯಾಣ ಕಲ್ಪತರುವಾಗಿ, ಕಲಿಯುಗದ ಗುರುಸಾರ್ವಭೌಮ ಬೃಂದಾವನ ಚಂದ್ರರಾಗಿ ರಾರಾಜಿಸುತ್ತಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post