ಕಲ್ಪ ಮೀಡಿಯಾ ಹೌಸ್ | ಆನವಟ್ಟಿ (ಶಿವಮೊಗ್ಗ) |
ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವ ಪೌರ ಕಾರ್ಮಿಕರ (Civil Labor) ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಸೊರಬ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕೆ.ಜಿ. ಹೇಳಿದರು.
ಆನವಟ್ಟಿಯಲ್ಲಿ (Anavatti) ಬುಧವಾರ ಜಿಲ್ಲಾ ಪಂಚಾಯಿತಿ ಶಿವಮೊಗ್ಗ, ಜಿಲ್ಲಾ ಆಯುಷ್ ಇಲಾಖೆ ಶಿವಮೊಗ್ಗ, ತಾಲ್ಲೂಕು ಪಂಚಾಯಿತಿ ಸೊರಬ, ಸಮುದಾಯ ಆರೋಗ್ಯ ಕೇಂದ್ರ ಆನವಟ್ಟಿ ಹಾಗೂ ಪೌರಾಡಳಿತ ಇಲಾಖೆ ಆನವಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಪೌರ ಕಾರ್ಮಿಕರು ಮತ್ತು ಅವರ ಕುಟುಂಬದವರು ಹಾಗೂ ತಾಲ್ಲೂಕಿನ ಸಂಜೀವಿನಿ ಒಕ್ಕೂಟದ ಸದಸ್ಯರಿಗಾಗಿ ಆಯೋಜಿಸಿದ್ದ ಉಚಿತ ಆಯುಷ್ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Anavatti: ಪೌರ ಕಾರ್ಮಿಕರ ಸೇವೆ ಶ್ಲಾಘನೀಯ
ಸಮಾಜದಲ್ಲಿ ಯಾರೂ ಮೇಲಲ್ಲ, ಕೀಳಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಪೌರ ಕಾರ್ಮಿಕರು ಇಡೀ ಪಟ್ಟಣದ ಪರಿಸರವನ್ನು ಸ್ವಚ್ಛವಾಗಿಡುವುದರ ಜತೆಗೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಶ್ಲಾಘನೀಯವಾಗಿದ್ದು, ಅವರ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ಶಶಿಧರ ಕೆ.ಜಿ. ಹೇಳಿದರು.
ಮುನ್ನೆಚ್ಚರಿಕೆ ಕ್ರಮವೇ ಆರೋಗ್ಯ ರಕ್ಷಣೆಗೆ ಮುಖ್ಯ
ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಆಲಹಳ್ಳಿಯ ಹಿರಿಯ ವೈದ್ಯಾಧಿಕಾರಿ ಡಾ. ಮಹೇಶ್ ಎಂ.ಕೆ. ಅವರು ಆರೋಗ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದರಿಂದ ಮನಸ್ಸು ಹಾಗೂ ದೇಹ ಲವಲವಿಕೆಯಿಂದ ಕೂಡಿರುತ್ತದೆ. ಈ ಸಮಯವನ್ನು ವಿದ್ಯಾಭ್ಯಾಸ ಹಾಗೂ ಉತ್ತಮ ಚಟುವಟಿಕೆಗಳಿಗೆ ಬಳಸುವುದರಿಂದ ಪ್ರಯೋಜನವಾಗುತ್ತದೆ. ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಅಭ್ಯಂಜನದಂತಹ ಅಭ್ಯಾಸಗಳು ಆರೋಗ್ಯಕ್ಕೆ ಪೂರಕವಾಗಿವೆ ಎಂದು ಹೇಳಿದರು.
ಆಹಾರ, ಜೀವನಶೈಲಿಯತ್ತ ಕಾಳಜಿ ಅಗತ್ಯ
ಎಲ್ಲಾ ರೋಗಗಳಿಗೂ ನಮ್ಮ ಆಹಾರ, ವಿಹಾರ ಹಾಗೂ ಜೀವನಶೈಲಿಯು ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ಆಹಾರ ಪದ್ಧತಿ ಹಾಗೂ ಜೀವನಶೈಲಿಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಉತ್ತಮ ಆಚಾರ–ವಿಚಾರಗಳು, ಧನಾತ್ಮಕ ಚಟುವಟಿಕೆಗಳು ಹಾಗೂ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಡಾ. ಮಹೇಶ್ ಎಂ.ಕೆ. ಸಲಹೆ ನೀಡಿದರು.
230ಕ್ಕೂ ಹೆಚ್ಚು ಫಲಾನುಭವಿಗಳಿಗೆ ಆರೋಗ್ಯ ಸೇವೆ
ಶಿಬಿರದ ಅನುಷ್ಠಾನಾಧಿಕಾರಿ ಡಾ. ರಮೀಜಾ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ ಪೌರ ಕಾರ್ಮಿಕರು, ಅವರ ಕುಟುಂಬದವರು ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ವಿವಿಧ ಆರೋಗ್ಯ ತಪಾಸಣೆ ಹಾಗೂ ಆಯುಷ್ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಯಿತು.
Also Read>> ಬೆಂಗಳೂರು ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ: 44 ಯೂನಿಟ್ ರಕ್ತ ಸಂಗ್ರಹ
ಕಾರ್ಯಕ್ರಮದ ಮೂಲಕ ಸುಮಾರು 230 ಮಂದಿ ಫಲಾನುಭವಿಗಳು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯ ಪ್ರಯೋಜನ ಪಡೆದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ. ಮುರಳೀಧರ ಎಸ್.ಟಿ., ಡಾ. ಅಲ್ಲಾವುದ್ದಿನ್ ನದಾಫ್, ಡಾ. ಮಾನೆ ಮಲ್ಲಿಕಾರ್ಜುನ, ಕಿರಿಯ ಅಭಿಯಂತರ ಕಿರಣ್ ಕುಮಾರ್, ಕಂದಾಯ ನಿರೀಕ್ಷಕ ಅಶೋಕ್ ಕುಮಾರ್, ಪೌರ ಕಾರ್ಮಿಕರ ಉಪಾಧ್ಯಕ್ಷ ಜಾಕಿರ್, ಆರೋಗ್ಯ ನಿರೀಕ್ಷಕ ರಾಮಕೃಷ್ಣ, ಮೊಹಮ್ಮದ್ ಗೌಸ, ಸಂಜೀವಿನಿ ಒಕ್ಕೂಟದ ವ್ಯವಸ್ಥಾಪಕ ಸಂತೋಷ ಹಾಗೂ ಆಯುಷ್ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕುಮಾರಿ ನಿಖಿತಾ ಧಾರವಾಡ ಕಲಿಕಾ ವೈದ್ಯರು ಕಾರ್ಯಕ್ರಮ ನಿರೂಪಿಸಿದರು. ಡಾ. ನದಾಫ್ ಸ್ವಾಗತಿಸಿದರು. ಡಾ. ಮಲ್ಲಿಕಾರ್ಜುನ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











