ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನಮನ್ನಣೆ ಗಳಿಸಿದ್ದು, ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ನಮ್ಮೆಲ್ಲರ ಕೈ ಬಲಪಡಿಸಬೇಕಾಗಿದೆ ಎಂದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ನಂದಿ ಎಂ. ಅಂಜಿನಪ್ಪ ಕರೆ ನೀಡಿದರು.
ತಾಲೂಕಿನ ಬಾಲರೆಡ್ಡಿಹಳ್ಳಿಯಲ್ಲಿನ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಕಾರ್ಯಕರ್ತರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಉಪಚುನಾವಣೆಯ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ 7 ದಶಕಗಳಿಂದ ರಾಷ್ಟ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನಡೆಸಿರುವ ಆಡಳಿತದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಪ್ರತಿಯೊಬ್ಬ ಪ್ರಜೆಯನ್ನೂ ಮುಟ್ಟಿದೆ. ಕ್ಷೇತ್ರದಲ್ಲಿ ಈ ಹಿಂದೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸುಮಾರು 8 ತಿಂಗಳ ಕಾಲ ಪ್ರತೀ ಮನೆಗೆ ನ್ಯಾಯಬೆಲೆ ಅಂಗಡಿಯ ಮೂಲಕ ಆಹಾರ ಧಾನ್ಯಗಳನ್ನು ಉಚಿತವಾಗಿ ಪೂರೈಸಿ ಬಡ ಕುಟುಂಬಗಳ ಹಸಿವನ್ನು ನೀಗಿಸಲಾಗಿದೆ. ಮಹತ್ತರವಾದ ಅಭಿವೃದ್ಧಿಯ ಕನಸುಗಳನ್ನು ಹೊತ್ತು ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಾಗಿದೆ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಅಮೂಲ್ಯವಾದ ಮತದಿಂದ ಈ ಬಾರಿ ಹೆಚ್ಚಿನ ಬಹುಮತ ಪಡೆದು ನಿಮ್ಮ ಸೇವೆ ಮಾಡಲು ಸಿದ್ಧನಿದ್ದೇನೆ ಎಂದರು.
ಮಾಜಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಮಾತನಾಡಿ, ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕೆರೆ ಕಟ್ಟೆ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ, ವಸತಿ ಯೋಜನೆಯಡಿಯಲ್ಲಿ ಬಡವರಿಗೆ ಸೂರು, ಅನ್ನಭಾಗ್ಯ, ಪಿಂಚಣಿ ಯೋಜನೆಗಳು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಾಂಗ್ರೆಸ್ ಆಡಳಿತದಲ್ಲಿ ಕಲ್ಪಿಸಲಾಗಿದೆ. ಜನಪರವಾದ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಸರೆಯಾಗಿವೆ ಎಂದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅವನತಿಗೆ ಕಾರಣರಾದ, ಪಕ್ಷಾಂತರ ಅಭ್ಯರ್ಥಿ ಡಾ.ಕೆ.ಸುಧಾಕರ್ ಒಬ್ಬ ಅನರ್ಹ ವ್ಯಕ್ತಿಯಾಗಿದ್ದು, ಅಂತಹವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಡಿ, ಸ್ವಾಭಿಮಾನವನ್ನು ಕಳೆದುಕೊಳ್ಳಬೇಡಿ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್’ನ ಅಧಿಕೃತ ಅಭ್ಯರ್ಥಿ ಎಂ. ಅಂಜಿನಪ್ಪರವರ ಕೈ ಬಲಪಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕಿ ಕೆ.ವಿ. ಅನಸೂಯಮ್ಮ, ಜಿಪಂ ಸದಸ್ಯರಾದ ಪಿ.ಎನ್. ಪ್ರಕಾಶ್, ಎ. ಅರುಂಧತಿ, ತಾಪಂ ಸದಸ್ಯರಾದ ಜೆ. ಮೋಹನ್ ಕುಮಾರ್, ಆಶಾರಾಣಿ, ರಾಂಬಾಬು, ನಗರಸಭೆ ಮಾಜಿ ಅಧ್ಯಕ್ಷ ಎಸ್.ವಿ. ಲೋಕೇಶ್ ಕುಮಾರ್, ಮುಖಂಡರಾದ ಕೆ.ಎನ್. ಕೇಶವ ರೆಡ್ಡಿ, ಎಚ್.ಎನ್. ಪ್ರಕಾಶ್ ರೆಡ್ಡಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post