ಕಲ್ಪ ಮೀಡಿಯಾ ಹೌಸ್ | ಸೊರಬ |
ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿ ಪರಿಸರದಲ್ಲಿ ರಾಜ್ಯದ ಅದಮ್ಯ ಚೇತನ ಸಂಸ್ಥೆ 500ನೇ ಹಸಿರು ಭಾನುವಾರ ಕಾರ್ಯಕ್ರಮವನ್ನು ಈಚೆಗೆ ಆಯೋಜಿಸಿತ್ತು.
ಕರ್ನಾಟಕದ ಪಶ್ಚಿಮ ಘಟ್ಟದ ಅಂಕೋಲಾದಿಂದ ಸೀತಾ ಅಶೋಕಾ ಸಸಿಗಳನ್ನು ತಂದು ವೃಕ್ಷಾರೋಪಣ ಮಾಡಿದ್ದು ಗಮನ ಸೆಳೆಯಿತು.
ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ, ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ, ರಾಷ್ಟೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಲಲಿತಾ ಕುಮಾರ ಮಂಗಲಂ ಸೇರಿದಂತೆ ಹಲವು ರಾಜ್ಯಗಳಿಂದ ಬಂದ ಸಂಸ್ಥಾ ಕಾರ್ಯಕರ್ತರು ಶ್ರೀರಾಮನ ಸರಯೂ ನದಿ ತೀರದಲ್ಲಿ ಗಿಡನೆಟ್ಟರು. ಸಸ್ಯ ಶ್ಯಾಮಲಾಂ ವಂದೇ ಮಾತರಂ ಘೋಷಿಸಿದರು.

ಅಯೋಧ್ಯಾದ ನಾಗರಿಕರು ಸಂವಾದದಲ್ಲಿ ಪಾಲ್ಗೊಂಡರು. ಸೇವಾ ಇಂಟರ್‌ನ್ಯಾಶನಲ್ ಅಧ್ಯಕ್ಷ ಶ್ಯಾಂಜಿ ಪರಾಂಡೆ ಮಾರ್ಗದರ್ಶನ ನೀಡಿದರು.
ಮರುದಿನ ಬೆಳಿಗ್ಗೆ ಅಯೋಧ್ಯಾದ ಡಾ.ರಾಮ ಮನೋಹರ ಲೋಹಿಯಾ ವಿಶ್ವವಿದ್ಯಾಲಯದ ಎಂ.ಬಿ.ಎ. ಸಭಾಭವನದಲ್ಲಿ ನಡೆದ ಅಯೋಧ್ಯಾ ಜಿಲ್ಲೆಯ ಗ್ರಾಮೀಣ ಸುಸ್ಥಿರ ಅಭಿವೃದ್ಧಿ ಹಾಗೂ ಸ್ವ ಉದ್ಯೋಗ ನಿರ‍್ಮಾಣ, ಮಹಿಳಾ ಆರ್ಥಿಕ ಸಬಲೀಕರಣ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಶ್ರೀರಾಮ ಜನ್ಮ ಭೂಮಿ ಟ್ರಸ್ಟ್ ಅಧ್ಯಕ್ಷ ಅನಿಲ ಮಿಶ್ರಾ ಉದ್ಘಾಟಿಸಿದರು.
ಸೇವಾ ಇನ್ ಆಕ್ಷನ್ ಸ್ಥಾಪಕಿ ಡಾ. ಇಂದುಮತಿ ರಾವ್ ಪ್ರಾಸ್ತಾವಿಕ ಮಾತನಾಡಿದರು.
ಪಶ್ಚಿಮ ಘಟ್ಟದ ಗ್ರಾಮೀಣ ಸಹಕಾರಿ, ಸಾವಯವ ಕೃಷಿ, ಮಹಿಳಾ ಸ್ವ ಉದ್ಯೋಗ ಮುಂತಾದ ಪ್ರಯೋಗ ಕಾರ್ಯಗಳನ್ನು ಅನಂತ ಹೆಗಡೆ ಅಶೀಸರ
ಹಂಚಿಕೊಂಡರು. ಅಯೋಧ್ಯಾದಲ್ಲಿ ವನೀಕರಣ, ಸ್ವಚ್ಚ ಪರಿಸರ, ಪ್ಲೇಟ್‌ಬ್ಯಾಂಕ್ ಕಾರ್ಯಗಳ ಕುರಿತು ತೇಜಸ್ವಿನಿ ಮಾಹಿತಿ ನೀಡಿದರು.
ಲಲಿತಾ ಕುಮಾರ ಮಂಗಲಂ ಸ್ವ ಸಹಾಯ ಸಂಘಗಳ ಜೊತೆ ಸಮಾಲೋಚನೆ ನಡೆಸಿದರು. ಸ್ಟಾರ್ಟಅಪ್ ಕುರಿತು ಡಾ. ಕಿರಣ್, ಭರತ್ ಪಾಠಕ್ ಮಾಹಿತಿ ನೀಡಿದರು. ಶ್ಯಾಂಜಿ ಪರಾಂಡೆ ಅವರು ಸಮಾರೋಪ ಭಾಷಣ ಮಾಡಿದರು.
ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post