ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೋವಿಡ್ ಸೋಂಕು ಪ್ರಸರಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಹುಚರ್ಚಿತವಾಗಿರುವ ಒಂದರಿಂದ ಒಂಭತ್ತನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆಗಳ ಕುರಿತಂತೆ ಅತಿ ಶೀಘ್ರದಲ್ಲಿ ಸೂಕ್ತ ನಿರ್ಧಾರವೊಂದಕ್ಕೆ ಬರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ 1 ರಿಂದ 9ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ವೇಳಾಪಟ್ಟಿ ಹಾಗೂ ಶೈಕ್ಷಣಿಕ ಅವಧಿ ನಿಗದಿಪಡಿಸುವ ಕುರಿತು ಇಲಾಖೆಯ ಅಧಿಕಾರಿಗಳು, ಶಿಕ್ಷಣ ತಜ್ಞರು, ಖಾಸಗಿ ಶಾಲಾ ಸಂಸ್ಥೆಗಳು, ಪೋಷಕರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.
45 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, ಅದರಲ್ಲಿ ಖಾಸಗಿ ಶಾಲೆಗಳ ಪ್ರತಿನಿಧಿಗಳು, ಪೋಷಕರು, ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ಪರೀಕ್ಷೆ ನಡೆಸುವ ಕುರಿತು ಪ್ರತಿಯೊಬ್ಬರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಹುಪಾಲು ಪ್ರತಿನಿಧಿಗಳು ಯಾವುದಾದರೂ ಮಾದರಿಯ ಮೌಲ್ಯಮಾಪನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದೆಂದು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ಸಭೆಯಲ್ಲಿ ಹಾಜರಿದ್ದ ಹಿರಿಯ ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಪರೀಕ್ಷೆ ಕುರಿತಂತೆ ಇರುವ ನಿಯಮಗಳನ್ನು ವಿವರಿಸಿ, ಸದರಿ ಸಂದರ್ಭದಲ್ಲಿ ಈ ಕಾನೂನಿನಡಿ ಯಾವ ರೀತಿಯ ಉಪಕ್ರಮಗಳನ್ನು ಕೈಗೊಳ್ಳಬಹುದೆಂದು ವಿಷದವಾಗಿ ಸಾದರಪಡಿಸಿದ್ದಾರೆ. ಈ ಎಲ್ಲ ಅಭಿಪ್ರಾಯಗಳನ್ನೂ ಗಣನೆಗೆ ತೆಗೆದುಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಯಾವ ಕ್ರಮಗಳನ್ನು ಕೈಗೊಳ್ಳಬಹುದೆಂಬ ಶೀಘ್ರದಲ್ಲಿ ನಿರ್ದೇಶನಗಳನ್ನು ಹೊರಡಿಸಲಾಗುವುದು ಎಂದು ಅವರು ಹೇಳಿದರು.
ಪ್ರಸ್ತುತ ಕೋವಿಡ್ ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ 6 ರಿಂದ 9ನೇ ತರಗತಿಗಳವರೆಗೆ ಭೌತಿಕ ತರಗತಿಗಳನ್ನು ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಕುರಿತಂತೆ ವ್ಯಾಪಕ ಚರ್ಚೆ ಶುರುವಾಗಿದೆ. ಕಳೆದ ಬಾರಿ ನಾವು ಸೋಂಕಿನ ಹಿನ್ನೆಲೆಯಲ್ಲಿ ಈ ತರಗತಿಗಳಿಗೆ ಪರೀಕ್ಷೆ ನಡೆಸಿರಲಿಲ್ಲ. 10 ಮತ್ತು 12ನೇ ತರಗತಿಗಳಿಗೆ ಮಾತ್ರವೇ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೆವು. ಆ ಅನುಭವದ ಆಧಾರದಲ್ಲಿ ಈ ಬಾರಿಯೂ 10 ಮತ್ತು 12ನೇ ತರಗತಿಗಳಿಗೆ ಪರೀಕ್ಷೆ ನಡೆಸಲಿದ್ದು ಈಗಾಗಲೇ ಪರೀಕ್ಷಾ ವೇಳಾಪಟ್ಟಿ ಪ್ರಕಟಸಿಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಇಂದು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸಂಘಟನೆಗಳ ಪ್ರತಿನಿಧಿಗಳು 1 ರಿಂದ 9ನೇ ತರಗತಿಗಳಿಗೆ ಸರ್ಕಾರ ನಿಗದಿಪಡಿಸಿದ್ದ ಪಠ್ಯಭಾಗವನ್ನು ಈಗಾಗಲೇ ಮುಗಿಸಿದ್ದು, ಪುನರಾವರ್ತನೆ ಸಹ ಮಾಡಲಾಗಿದೆ. ವಿದ್ಯಾರ್ಥಿಗಳು ಈಗಾಗಲೇ ಭೌತಿಕವಾಗಿ ಇಲ್ಲವೇ ಆನ್ ಲೈನ್ ಮೂಲಕ ಪಾಠಗಳನ್ನು ಆಲಿಸಿದ್ದಾರೆ. ಯಾವುದಾದರೂ ರೀತಿಯಲ್ಲಿ ಕಲಿಕೆಯ ಮೌಲ್ಯಾಂಕನವನ್ನು ನಡೆಸುವುದು ಸೂಕ್ತ. ಪರೀಕ್ಷೆ ನಡೆಸದೇ ಹೋದರೆ ಯಾವ ವಿದ್ಯಾರ್ಥಿ ಯಾವ ವಿಷಯದಲ್ಲಿ ಹಿಂದುಳಿದಿದ್ದಾನೆ, ಅವನನ್ನು ಮುಂದಿನ ತರಗತಿಗೆ ಯಾವ ರೀತಿಯಲ್ಲಿ ಸಜ್ಜುಗೊಳಿಸಬೇಕು ಎಂದು ಮೌಲ್ಯಾಂಕನವಿಲ್ಲದೇ ಅಳೆಯಲಾಗದು. ಮೌಲ್ಯಾಂಕನ ನಡೆಸದೇ ಮುಂದಿನ ತರಗತಿಗೆ ತೇರ್ಗಡೆ ಎಂದು ಒಮ್ಮೆ ಘೋಷಿಸಿದ್ದೇ ಆದರೆ ಮಕ್ಕಳು ಓದುವುದರತ್ತ ಆಸಕ್ತಿ ಕಳೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಯಾವುದಾದರೂ ರೀತಿಯಲ್ಲಿ ನಾವು ಮೌಲ್ಯಮಾಪನ ನಿರ್ವಹಿಸಿಯೇ ಮಕ್ಕಳ ಫಲಿತಾಂಶ ನೀಡಬೇಕೆಂದು ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಶಿಕ್ಷಣ ಹಕ್ಕು ಕಾಯ್ದೆಯ ಆವಕಾಶಗಳಡಿ ಯಾವ ತರಗತಿಗಳಿಗೆ ಮೌಲ್ಯಾಂಕನ ನಡೆಸಬೇಕು ಎಂಬುದೂ ಸೇರಿದಂತೆ ಪ್ರಸ್ತುತ ಸಂದರ್ಭದಲ್ಲಿ ಯಾವ ಉಪಕ್ರಮಗಳನ್ನು ಕೈಗೊಳ್ಳಬಹುದು, ನಮ್ಮ ಭಾವನೆಗಳು ಏನೇ ಇದ್ದರೂ ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾಯ್ದೆಗಳನ್ನು ಪ್ರತಿಯೊಬ್ಬ ಶೈಕ್ಷಣಿಕ ಪಾಲುದಾರರು ಅನುಸರಿಸಲೇಬೇಕಾಗಿರುವ ಕುರಿತು ವಿ.ಪಿ. ನಿರಂಜನಾರಾಧ್ಯ ಸವಿವರವಾಗಿ ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ಸಾಲಿನ ಪ್ರಾರಂಭದಲ್ಲಿ ಸೇತುಬಂಧ ಕಾರ್ಯಕ್ರಮವನ್ನು ಇನ್ನಷ್ಟು ವೇಗವರ್ಧಕಗೊಳಿಸುವ ಮಾದರಿಯಲ್ಲಿ ನಡೆಸಲು ಸಹ ಆಲೋಚಿಸಲಾಗುತ್ತಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು.
ಯಾವುದೇ ಶಾಲೆಗಳೇ ಆಗಲಿ ಅನುತ್ತೀರ್ಣ ಮಾಡುವುದಕ್ಕೆಂದೇ ಪರೀಕ್ಷೆಗಳನ್ನು ಬಳಸಿಕೊಳ್ಳುವಂತಿಲ್ಲ. ಆದರೆ ಈ ಸಾಲಿನಲ್ಲಿ ಒಂದರಿಂದ ಐದು ಮತ್ತು ಆರರಿಂದ ಒಂಭತ್ತನೇ ತರಗತಿಗಳ ವಿದ್ಯಾರ್ಥಿಗಳ ಕಲಿಕಾನುಭವ ಸಮಾನವಾಗಿಲ್ಲವಾದ್ದರಿಂದ ಸಿಸಿಇ ಅಡಿಯಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಕಲಿಕೆಯನ್ನು ಅವಲೋಕಿಸಿ ದಾಖಲಿಸುವ ಜವಾಬ್ದಾರಿ ಹೊಂದಿದ್ದಾರೆ. ಹಾಗಾಗಿ ಯಾವುದೇ ಶಾಲೆಗಳು ಸಾರಾಂಶ ಮೌಲ್ಯಮಾಪನ (ಸಮ್ಮೇಟೀವ್ ಅಸೆಸ್ಮೆಂಟ್) ಮಾಡುವಲ್ಲಿ ಕ್ರಮ ಕೈಗೊಳ್ಳಬೇಕಿದೆ. ಮುಂದಿನ ತರಗತಿಗಳಿಗೆ ತೇರ್ಗಡೆ ಹೊಂದುವಲ್ಲಿ ರಚನಾತ್ಮಕ ಮೌಲ್ಯಮಾಪನ (ಫಾರ್ಮೇಟಿವ ಅಸೆಸ್ಮೆಂಟ್) ಪರಿಗಣಿಸಿಯೂ ತೀರ್ಮಾನ ಕೈಗೊಳ್ಳಬಹುದು ಎಂಬ ಅಭಿಪ್ರಾಯಗಳೂ ಇವೆ. ಈ ಎಲ್ಲ ಅವಕಾಶಗಳನ್ನು ಅವಲೋಕಿಸಿ ಸೂಕ್ತ ನಿರ್ಧಾರವೊಂದನ್ನು ಅತಿ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈಗಾಗಲೇ ಪಾಠ ಪ್ರವಚನ ನಡೆದಿರುವುದರಿಂದ ಮಕ್ಕಳಿಗೆ ಪರೀಕ್ಷೆ ನಡೆಸಬೇಕು, ಪರೀಕ್ಷೆ ನಡೆಸದೇ ಹೋದರೆ ಓದದಿದ್ದರೂ ಪಾಸಾಗಬಹುದೆಂಬ ಭಾವನೆ ಮೂಡುತ್ತದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿಯವರು ಸಹ ತಮಗೆ ಪತ್ರ ಬರೆದಿದ್ದಾರೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಖಾಸಗಿ ಶಾಲಾ ಸಂಸ್ಥೆಗಳಾದ ರೂಪ್ಸಾ, ಕ್ಯಾಮ್ಸ್, ಪೋಷಕರ ಸಂಘಟನೆಗಳು, ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯ್ಕ, ಸಾಶಿಇ ಆಯಕ್ತ ವಿ. ಅನ್ಬು ಕುಮಾರ್, ಹಿರಿಯ ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post