ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದಾಸಸಾಹಿತ್ಯದ ಪ್ರಸಾರ–ಪ್ರಚಾರ ಹಾಗೂ ಸಂರಕ್ಷಣೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಕೀರ್ತಿಶೇಷ ಕೆ. ಅಪ್ಪಣ್ಣಾಚಾರ್ಯರ (Appannacharya) ಸೇವೆ ಸ್ಮರಣೀಯ ಎಂದು ದಾಸಸಾಹಿತ್ಯ ಚಿಂತಕರು ಅಭಿಪ್ರಾಯಪಟ್ಟರು.
ದೇವಗಿರಿ ಲಕ್ಷ್ಮೀಕಾಂತ ಸಂಘ ಹಾಗೂ ವಾಗ್ದೇವಿ ಭಜನಾ ಮಂಡಳಿಯ ಸಹಯೋಗದಲ್ಲಿ ನಗರದ ಬನಶಂಕರಿ 2ನೇ ಹಂತದ ದೇವಗಿರಿ ರಾಯರ ಮಠದ ಮೇಲ್ಭಾಗದಲ್ಲಿರುವ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಅಪ್ಪಣ್ಣಾಚಾರ್ಯರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಟಿಟಿಡಿ ದಾಸಸಾಹಿತ್ಯ ಪ್ರಾಜೆಕ್ಟ್‌ನ ಸ್ಥಾಪಕರು ಹಾಗೂ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಪ್ಪಣ್ಣಾಚಾರ್ಯರು, ಮಂತ್ರಾಲಯದ ಹರಿದಾಸ ಸಾಹಿತ್ಯ ವಸ್ತು ಪ್ರದರ್ಶನಾಲಯದ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ದಾಸರ ಸಾಹಿತ್ಯ, ಕೀರ್ತನೆ ಮತ್ತು ಹರಿದಾಸ ಪರಂಪರೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅವರು ನಿರಂತರವಾಗಿ ಶ್ರಮಿಸಿದ್ದರು. ಅವರ ಸೇವೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಗಣ್ಯರು ಸ್ಮರಿಸಿದರು.
Appannacharya : ಅಪ್ಪಣ್ಣಾಚಾರ್ಯರಿಗೆ ಪ್ರಿಯ ದಾಸರ ಕೀರ್ತನೆ ಗಾಯನ
ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ಮಂಡಳಿಗಳ ವತಿಯಿಂದ ಅಪ್ಪಣ್ಣಾಚಾರ್ಯರಿಗೆ ಪ್ರಿಯವಾದ ದಾಸರ ಕೀರ್ತನೆಗಳನ್ನು ಹಾಡುವ ಮೂಲಕ ಗಾಯನ ನಮನ ಸಲ್ಲಿಸಲಾಯಿತು. ಬಳಿಕ ದಾಸಸಾಹಿತ್ಯ ಚಿಂತಕರು ಹಾಗೂ ವಿದ್ವಾಂಸರು ಅವರ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಂಘಟನಾ ಸೇವೆಯ ವಿವಿಧ ಆಯಾಮಗಳನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.
Also Read>> ಬೆಂಗಳೂರಿನ ನಾಲ್ಕು ಮೆಮು, ಮೈಸೂರು-ಅರಸೀಕೆರೆ ಸೇರಿ ಹಲವು ರೈಲುಗಳು ರದ್ದು
ಖ್ಯಾತ ವಾಗ್ಮಿ ಪಂ. ಕಲ್ಲಾಪುರ ಪವಮಾನಾಚಾರ್ಯ, ಪಂ. ಕರ್ನೂಲು ಶ್ರೀನಿವಾಸ್ ಆಚಾರ್ಯ,ಹರಿದಾಸ ಮಹಾವಿದ್ಯಾಲಯದ ನಿರ್ದೇಶಕ ಡಾ. ಪರಶುರಾಮ ಬೆಟಗೇರಿ, ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷ ಡಾ. ತಾಯಲೂರು ವಾದಿರಾಜ, ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಅನಂತ ರಾವ್ ದಂಡಿನ್, ಡಾ. ಮಧುಸೂಧನ, ಡಾ ವಾರುಣಿ ಜಯತೀರ್ಥ, ಶ್ರೀಮತಿ ಶಾರದ ,ದೇವಗಿರಿ ಲಕ್ಷ್ಮೀಕಾಂತ ಸಂಘದ ಅಧ್ಯಕ್ಷೆ ಡಾ. ಜಿ.ವಿ. ಶಾಂತಾಬಾಯಿ ಹಾಗೂ ವಾಗ್ದೇವಿ ಭಜನಾ ಮಂಡಳಿಯ ಅಧ್ಯಕ್ಷೆ ಡಾ. ಕುಮುದ ಗೋವಿಂದ ರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಭಜನಾ ಮಂಡಳಿಯ ಮಾತೆಯರು ಹಳದಿ ಸೀರೆ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಪ್ಪಣ್ಣಾಚಾರ್ಯರ ದಾಸಸಾಹಿತ್ಯ ಸೇವೆಯನ್ನು ಸ್ಮರಿಸುವುದರೊಂದಿಗೆ ಅವರ ಆಶಯಗಳನ್ನು ಮುಂದುವರಿಸುವ ಸಂಕಲ್ಪವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












