ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೇ ಅಧಿಕಾರಕ್ಕೇರುವ ಸಿದ್ದತೆ ನಡೆಸಿರುವ ಬಿಜೆಪಿಗೆ ವಿಶ್ವಾಸಮತ ಸಾಬೀತು ಮಾಡಲು ಕಾನೂನುತೊಡಕು ಒಡ್ಡಲು ಕಾಂಗ್ರೆಸ್ ನಾಯಕರು ತಂತ್ರಗಾರಿಕೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಸಿದ್ದು, ಈ ಕುರಿತಂತೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಇನ್ನೂ ಅಂಗೀಕಾರವಾಗದೇ ಇರುವುದರಿಂದ ವಿಧಾನಸಭೆಯ ಒಟ್ಟು ಸದಸ್ಯ ಬಲ 224 ಇದೆ. ಈ ವೇಳೆ ಕೇವಲ 105 ಮತಗಳನ್ನು ಬಹುಮತ ಎಂದು ಪರಿಗಣಿಸಲು ಆಗುವುದಿಲ್ಲ. ಬಹುಮತ ಸಾಬೀತಿಗೆ ಬಿಜೆಪಿಗೆ 113 ಸಂಖ್ಯಾ ಬಲ ಇರಬೇಕಾಗುತ್ತದೆ. ಆದರೆ ಬಿಜೆಪಿ ಪಾಳಯದಲ್ಲಿ ಕೇವಲ 105 ಸದಸ್ಯರನ್ನು ಇಟ್ಟುಕೊಂಡು ಬಹುಮತ ಎಂದು ಹೇಳಲಾಗುವುದಿಲ್ಲ. ಈ ತಾಂತ್ರಿಕ ವಿಷಯವನ್ನು ಮುಂದಿಟ್ಟು ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಜಿ.ಪರಮೇಶ್ವರ್, ಡಿ.ಕೆ. ಶಿವಕುಮಾರ್, ಕೃಷ್ಣಬೈರೇಗೌಡ, ಈಶ್ವರ್ ಖಂಡ್ರೆ, ಎಚ್.ಕೆ. ಪಾಟೀಲ್, ಎಸ್.ಆರ್. ಪಾಟೀಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Discussion about this post