ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದು ಮನೋರಂಜನಾತ್ಮಕ ಮಾಧ್ಯಮದ ವೇದಿಕೆ ಮಾನವೀಯತೆ ಮೆರೆದು, ಒಂದು ಬಡ ಕುಟುಂಬಕ್ಕೆ ಹೇಗೆ ನೈತಿಕ ಬೆಂಬಲವಾಗಿ ನಿಲ್ಲಬಹುದು ಎಂಬುದಕ್ಕೆ ಝೀ ಕನ್ನಡದ ಸರಿಗಮಪ ಸೀಸನ್ 1ರ ಆಡಿಷನ್ ನಿನ್ನೆ ಸಾಕ್ಷಿಯಾಯಿತು. ಅದೇ ವೇದಿಕೆಯಲ್ಲಿ ಸಂಗೀತ ಕಲಾವಿದರ ಲೋಕಕ್ಕೇ ಮಾದರಿಯಾಗಬಲ್ಲಂತಹ ಪುಣ್ಯ ಕಾರ್ಯವೊಂದೂ ಸಹ ನಡೆದಿದೆ.
ಹೌದು… ಝೀ ಕನ್ನಡ ವಾಹಿನಿ ಆರಂಭಿಸಿರುವ ಸರಿಗಮಪ ಸೀಸರ್ 17 ಆಡಿಷನ್ ಇತ್ತೀಚೆಗೆ ನಡೆದಿದ್ದು, ಇದರ ಕಂತು ನಿನ್ನೆ ಪ್ರಸಾರವಾಯಿತು. ನಾಡಿನ ಮೂಲೆ ಮೂಲೆಗಳಲ್ಲಿ ನಡೆದ ಆಡಿಷನ್’ನಲ್ಲಿ ಆಯ್ಕೆಯಾಗಿ ಬಂದ ಸಂಗೀತ ಪ್ರತಿಭೆಗಳನ್ನು ಅಂತಿಮವಾಗಿ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ಇಂತಹ ಒಂದು ವೇದಿಕೆಗೆ ಆಯ್ಕೆಯಾದ ಇಬ್ಬರು ಹುಟ್ಟು ಅಂಧ ಅಕ್ಕ-ತಂಗಿಯರೇ ರತ್ಮಮ್ಮ ಹಾಗೂ ಮಂಜಮ್ಮ…
ತುಮಕೂರು ಜಿಲ್ಲೆಯ ಮಧುಗಿರಿಯ ಈ ಸಹೋದರಿಯರು ಹುಟ್ಟು ಅಂಧರು. ಬಡತನವೇ ಹಾಸುಹೊದ್ದುಕೊಂಡಿರುವ ಇವರ ಕುಟುಂಬ ಇದರೊಂದಿಗೆ ಅನಾರೋಗ್ಯದಿಂದಲೂ ಸಹ ಪೀಡಿತವಾಗಿದೆ ಎಂಬುದು ದುಃಖಕರ ಸಂಗತಿ.
ಚಿಕ್ಕ ವಯಸ್ಸಿನಲ್ಲೇ ತಾಯಿ ಹಾಗೂ ಸಹೋದರನನ್ನು ಕಳೆದುಕೊಂಡು, ತಂದೆಯೂ ಸಹ ಕಿಡ್ನಿ ಅನಾರೋಗ್ಯ ಪೀಡಿತರಾಗಿದ್ದು, ಜೀವನ ನಿರ್ವಹಣೆಯೇ ಇವರಿಗೆ ಕಷ್ಟವಾಗಿದೆ. ತಮ್ಮ ಕುಟುಂಬ ನಿರ್ವಹಣೆಗಾಗಿ ಬೇರೆ ದಾರಿಯಿಲ್ಲದೇ ಬಸ್ ನಿಲ್ದಾಣದ ಬಳಿ ಈ ಸಹೋದರಿಯರು ಹಾಡು ಹೇಳಿ, ಜನ ನೀಡುವ ಹಣದಿಂದ ಕುಟುಂಬ ನಿರ್ವಹಿಸುತ್ತಿದ್ದಾರೆ. ಆನಂತರ ಇಲ್ಲಿನ ಪ್ರಸಿದ್ಧ ದಂಡಿ ಮಾರಮ್ಮನ ದೇವಾಲಯದ ಬಳಿ ಪ್ರತಿನಿತ್ಯ ಬಂದು ಹಾಡು ಹೇಳಿ ಹಣ ಸಂಪಾದಿಸಿ, ಇಡಿಯ ಕುಟುಂಬವನ್ನು ಕೈಲಾದಷ್ಟು ಮಟ್ಟಿಗೆ ಪೋಷಣೆ ಮಾಡುತ್ತಿದ್ದಾರೆ ಈ ಸಹೋದರಿಯರು.
ಯಾರೋ ಓರ್ವ ವ್ಯಕ್ತಿ ಈ ಸಹೋದರಿಯರು ಹಾಡು ಹೇಳುವುದನ್ನು ವೀಡಿಯೋ ಮಾಡಿ, ಝೀ ಕನ್ನಡದ ಆಡಿಷನ್’ಗೆ ಕಳುಹಿಸುತ್ತಾರೆ. ಇದನ್ನು ಗಮನಿಸಿದ ವಾಹಿನಿ, ತಮ್ಮ ತಂಡವನ್ನು ಮಧುಗಿರಿಗೆ ಕಳುಹಿಸಿ, ಈ ಸಹೋದರಿಯರನ್ನು ಹುಡುಕಿ, ವೇದಿಕೆಗೆ ಕರೆ ತಂದಿದ್ದಾರೆ.
ತಮ್ಮ ಪರಿಸ್ಥಿತಿಯನ್ನು ಪ್ರತಿಬಿಂಬಿಸುವ ’ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ…’ ಹಾಡನ್ನು ಆಡಿಷನ್ ವೇಳೆ ಇವರು ಹಾಡಿದ್ದು, ಈ ಸಹೋದರಿಯರು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವೇದಿಕೆಯ ಮೇಲೆ ತಮ್ಮ ಕುಟುಂಬದ ಕಷ್ಟವನ್ನು, ಊಟಕ್ಕೂ ಸಹ ಇಲ್ಲದ ಪರಿಸ್ಥಿತಿಯನ್ನು ಕಣ್ಣೀರು ಹಾಕುತ್ತಲೇ ತೋಡಿಕೊಂಡ ಈ ಸಹೋದರಿಯರು, ಇವೆಲ್ಲವನ್ನೂ ಮೆಟ್ಟಿ ನಿಲ್ಲಬೇಕು ಎಂಬ ಛಲವನ್ನೂ ಸಹ ತೋರಿದ್ದು ವಿಶೇಷ.
ಆದರೆ, ಇವೆಲ್ಲವನ್ನೂ ಗಮನಿಸುತ್ತಾ ಕುಳಿತಿದ್ದ ಸ್ಪರ್ಧೆಯ ಜಡ್ಜ್’ಗಳಲ್ಲಿ ಒಬ್ಬರಾದ ಸಂಗೀತ ನಿರ್ದೇಶನ ಅರ್ಜುನ್ ಜನ್ಯ ಹೇಳಿದ ಒಂದು ಮಾತು ನಿಜಕ್ಕೂ ಅವರ ಹೃದಯ ಶ್ರೀಮಂತಿಕೆಯನ್ನು ತೆರೆದಿಟ್ಟಿದೆ.
ಇಬ್ಬರೂ ಸಹೋದರಿಯರೊಂದಿಗೆ ಮಾತನಾಡಿದ ಜನ್ಯ, ದೇವರು ಇದ್ದಾನೆ ಎಂಬುದಕ್ಕೆ ಇದಕ್ಕಿಂತಲೂ ಸಾಕ್ಷಿ ಬೇಡ. ಊಟಕ್ಕೂ ಕಷ್ಟ ಎಂದಿರಿ.. ಇವತ್ತಿನಿಂದ ತಾಯಿ ಮಾರಮ್ಮ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡುತ್ತಾಳೆ. ಸೋತು ಗೆದ್ದರೆ ಇತಿಹಾಸ ನಿರ್ಮಾಣವಾಗುತ್ತದೆ. ಇದುವರೆಗೂ ನೀವು ಸೋತಿದ್ದೀರಾ. ಇನ್ನು ಮುಂದೆ ಗೆಲ್ಲುತ್ತೀರಾ ಎಂಬ ಭರವಸೆಯನ್ನು ತುಂಬಿದರು.
ನಾನು ನಂಬುವುದು ಆದಿ ಪರಾಶಕ್ತಿಯನ್ನು. ಅಲ್ಲಿರುವ ತಾಯಿಯನ್ನು ಅಮ್ಮಾ ಎಂದು ಕರೆಯುತ್ತೇವೆ. 15 ವರ್ಷದ ನಂತರ ದೇವಾಲಯಕ್ಕೆ ಭೇಟಿ ನೀಡಿದ್ದೆ. ತೀರಾ ಪರಿಚಯ ಇರುವಂತೆ ಮಾತನಾಡಿದ ಅವರು, ನೀನು ಏನು ಮಾಡುತ್ತೀಯೋ, ಬಿಡುತ್ತೀಯೋ.. ಅನ್ನದಾನ ಮಾತ್ರ ಮಾಡು ಎಂದಿದ್ದರು. ಈಗ ಅವರ ಪ್ರೇರಣೆಯಂತೆಯೇ ಹೇಳುತ್ತೇನೆ. ಇಂದಿನಿಂದ ನಿಮ್ಮ ಕುಟುಂಬಕ್ಕೆ ಪ್ರತಿ ತಿಂಗಳು ಊಟಕ್ಕೆ ಬೇಕಾದ ಪದಾರ್ಥಗಳ ಖರ್ಚಿನ ಹೊಣೆ ನನ್ನದು. ಇನ್ನು ಮುಂದೆ ನೀವು ಉಪವಾಸ ಇರುವುದಿಲ್ಲ ಎಂದರು.
ನಿಜಕ್ಕೂ ಇದು ಮನಮುಟ್ಟುವಂತಹ ಸನ್ನಿವೇಶ ಎಂಬುವುದರ ಜೊತೆಗೆ, ಓರ್ವ ಸಂಗೀತ ನಿರ್ದೇಶಕ ತನ್ನ ಸಂಗೀತದ ಮೂಲಕ ಮಾತ್ರವಲ್ಲ, ತನ್ನೊಳಗಿನ ಮಾನವೀಯತೆಯ ಮೂಲಕವೂ ಸಹ ಎಲ್ಲರ ಮನಮುಟ್ಟಬಲ್ಲ ಎಂಬುದನ್ನು ಸಾರಿದ್ದಾರೆ. ಜೊತೆಯ ಜನ್ಯ ಅವರಿಗೆ ಅವರ ತಂದೆ ತಾಯಿಗಳು ನೀಡಿರುವ ಸಂಸ್ಕಾರವನ್ನೂ ಸಹ ಎತ್ತಿ ಹಿಡಿದಿದೆ.
ಈಗಿನ ಕಾಲದಲ್ಲಿ ನಾಲ್ಕೈದು ಮಂದಿರುವ ಕುಟುಂಬಕ್ಕೆ ಪ್ರತಿನಿತ್ಯ ಊಟ-ತಿಂಡಿ ಕೊಟ್ಟು ನಿರ್ವಹಣೆ ಮಾಡುವುದು ಸುಲಭದ ಮಾತಲ್ಲ. ಆದರೆ, ಈ ಪ್ರತಿಭಾನ್ವಿತ ಸಹೋದರಿಯರು ಹಾಗೂ ಅವರ ಕುಟುಂಬದ ಪರಿಸ್ಥಿತಿಯನ್ನು ಕಂಡು ಅವರು ಇಡಿಯ ಕುಟುಂಬದ ಊಟಕ್ಕೆ ಅಗತ್ಯವಿರುವ ಪದಾರ್ಥಗಳ ನಿರಂತರ ಜವಾಬ್ದಾರಿಯನ್ನು ಹೊತ್ತಿರುವ ಅರ್ಜುನ್ ಜನ್ಯ ನಿಜಕ್ಕೂ ಹೃದಯ ಶ್ರೀಮಂತ ಹಾಗೂ ಸಮಾಜಕ್ಕೆ ಮಾದರಿ.
ಜನ್ಯ ಅವರ ಈ ನಿರ್ಧಾರ ಕೇವಲ ಕಲಾವಿದರಿಗೆ ಮಾತ್ರವಲ್ಲ, ಇಡಿಯ ಚಿತ್ರರಂಗ ಹಾಗೂ ಸಮಾಜದಲ್ಲಿ ಹಣವಿರುವ ಶ್ರೀಮಂತರಿಗೆಲ್ಲಾ ಮಾದರಿಯೇ ಹೌದು…
ಇಂತಹ ಒಂದು ಪವಿತ್ರ ಕಾರ್ಯಕ್ಕೆ ಕೈ ಹಾಕಿದ ಅರ್ಜುನ್ ಜನ್ಯ ಅವರನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೃದಯತುಂಬಿ ಅಭಿನಂದಿಸುತ್ತದೆ.
-ಎಸ್.ಆರ್. ಅನಿರುದ್ಧ ವಸಿಷ್ಠ
Get in Touch With Us info@kalpa.news Whatsapp: 9481252093
Discussion about this post