ಕಲ್ಪ ಮೀಡಿಯಾ ಹೌಸ್
ಅದೊಂದು ಸರ್ಕಾರಿ ಕಚೇರಿ. ಅಲ್ಲೊಂದು ಅತೃಪ್ತ ಜೀವ. ಅದರ ಬಳಿ ಎಲ್ಲವೂ ಇತ್ತು, ಮನಶ್ಶಾಂತಿ ಒಂದನ್ನು ಬಿಟ್ಟು. ಅದರ ಪರಿಧಿ ಒಳಗೆ ಒಂದು ಸೊಳ್ಳೆಯೂ ಬರುವಂತೆ ಇರಲಿಲ್ಲ. ಅದನ್ನು ಹಿಂಡಿ ಮೇಲಿನವರ ಬಳಿ ಒಯ್ಯುತ್ತಿದ್ದ ಪ್ರಾಣಿ ಅದು. ಮೊಗಸಾಲೆಯಲ್ಲಿ ಒಂದು ಮಾತಿತ್ತು, ಅವನು ಒಂಬತ್ತು ತಿಂಗಳು ಕಳೆದರೂ ಹುಟ್ಟಿರಲಿಲ್ಲ ಅಂತೆ. ಆಗ ಅವರ ತಂದೆ ದೇವರಿಗೆ ಒಂದು ಕಂಪ್ಲೈಂಟ್ ಮಾಡಿದ. ಆವಾಗ ಇವನು ಹುಟ್ಟಿದ್ದು. ಅದಕ್ಕೆ ಮಾತು ಮಾತಿಗೆ ಕಂಪ್ಲೇಟ್ ಮಾಡ್ತಾನೆ ಅಂತ. ಇದ್ರೂ ಇರಹುದೇನೊ. ನನಗೇನು ಗೊತ್ತು, ನಾನು ಪಾಪದೋನು.
ಅದರ ಕಾಟಕ್ಕೆ ಬೇಸತ್ತು ಹೊದವರೆಷ್ಟೋ, ಅತ್ತು ಕರೆದು ನೊಂದವರೆಷ್ಟೋ. ನನ್ನ ಪ್ರಶ್ನೆ ಒಂದೇ ಆ ದೇವರಿಗೆ, ಇಂತಹ ಒಂದು ಎಡಬಿಡಂಗಿ ಅವಶ್ಯಕತೆ ಏನಿತ್ತು ಈ ಭೂಮಿಯ ಮೇಲೆ ಅಂತ. ಏನಾದ್ರೂ ಕಷ್ಟ ಅಂತ ಬರ್ತಿದೆ ಅಂತ ಗೊತ್ತಾದ್ರೆ ಸಾಕು ಯಾರನ್ನೋ ಸಿಕ್ಕು ಹಾಕಿಸಿ ತಾನು ತಪ್ಪಿಸಿಕೊಳ್ಳುತ್ತಿದ್ದ. ದಿನ ಬೆಳಗಾದರೆ ಕಚೇರಿಯಲ್ಲಿ ಜಗಳ, ಕೆಲಸದಲ್ಲಿ ಗೋಳು ಹೊಯ್ದುಕೊಳ್ಳುವುದು. ಲಿಮಿಟೆಡ್ ಲಂಚಾವತಾರ ಕೂಡ ಇತ್ತು.
ಎಷ್ಟೋ ಮಳೆಗಾಲ ಕಳೆದ್ವು, ಎಷ್ಟೋ ಎಲೆಗಳು ಉದುರಿದವು. ಆ ದಿನ ಬಾರದೇ ಇರತ್ತ? ಜೋರು ಮಳೆ ಬರೋ ದಿನಗಳು. ಅದೇ ಹುಂಬತನ, ಅದೇ ನೀಚ ಬುದ್ಧಿ ಅವತ್ತು ಇತ್ತು. ಆದರೆ ದೇವರು ಕೈ ಬಿಟ್ಟಿದ್ದ.
ಕಚೇರಿಯ ಮುಂದೆ ಯಾವಾಗಲೂ ಒಂದು ನಾಯಿ ಬಂದು ಮಲಗುತ್ತಿತ್ತು. ಯಾರೋ ಊಟ ಉಳಿದಾಗ ಒಂದಿಷ್ಟು ಹಾಕೊರು. ಅದನ್ನೇ ತಿಂದುಕೊಂಡು ಯಾರಿಗೂ ಕಷ್ಟ ಕೊಡದೆ ಅಲ್ಲೇ ಬಿದ್ದುಕೊಂಡು ಇರುತ್ತಿತ್ತು. ಇವನಿಗೆ ಅನ್ನ ಹಾಕುವುದು ಬಿಡಿ, ಅದನ್ನು ಕಂಡರೆ ಆಗ್ತಾ ಇರಲಿಲ್ಲ. ಹೊಡೆಯೋನು ಬಡಿಯೋನು ಅವನು ಅದು ಅಲ್ಲೇ ಎಲ್ಲೋ ಓಡಿ ಹೋಗಿ ಮತ್ತೆ ಬಂದು ಮಲಗುತ್ತಿತ್ತು. ದುರದೃಷ್ಟವಶಾತ್ ಅದು ಆ ಮಳೆಯಲ್ಲಿ ಮರಿಗಳನ್ನು ಕೂಡ ಹಾಕಿತ್ತು. ಆ ಪುಟ್ಟ ಮರಿಗಳನ್ನು ತಗೊಂಡು ಅಲ್ಲಿ ಇಲ್ಲಿ ಓಡೋದು. ಅವನ್ನು ಬೆಚ್ಚಗಿನ ಜಾಗ ಹುಡುಕಿ, ಇಡೋದು. ಬೇರೆ ನಾಯಿ, ಎಲ್ಲರ ಕಣ್ಣು ತಪ್ಪಿಸಿ ಅವಕ್ಕೆ ಹಾಲು ಕುಡಿಸಿ, ತಾನು ಏನಾದ್ರೂ ತಿನ್ನೋಕೆ ಓಡಿ ಹೋಗೋದು. ಅವತ್ತು ಜನರ ಸಂಧಿಯಲ್ಲಿ ಬಾಗಿಲ ಬಳಿಯೇ ಮರಿಗಳನ್ನು ಇಟ್ಟುಕೊಂಡು ಥರ ಥರ ನಡುಗುತ್ತ ನಿಂತ್ಕೊಂಡು ಇತ್ತು.
ಆ ಚಿಕ್ಕ ಜೀವಗಳು ಸಲೀಸಾಗಿ ಸಿಕ್ಕಿದ್ದು ಕಂಡು ಇವನಿಗೆ ಒಳಗೆ ಖುಷಿ. ಒಂದು ದೊಡ್ಡ ಕೋಲು ತರೆಸಿ ಅವಕ್ಕೆ ಸಿಕ್ಕಾಪಟ್ಟೆ ಹೊಡೆದು ಬಿಟ್ಟ. ಇವನ ಏಟಿಗೆ ಒಂದೋ ಎರಡೋ ಮರಿಗಳು ಸತ್ತೇ ಹೋದವು. ಆ ಸುರಿಯೋ ಮಳೆಯಲ್ಲಿ ಉಳಿದ ಮರಿಗಳನ್ನು, ಪಾಪದ ಅಮ್ಮ ನಾಯಿನೂ ಓಡಿಸಿಬಿಟ್ಟ. ಎಲ್ಲ ನೊಂದುಕೊಂಡು ಇದ್ದರೆ ಈ ಜೀವಕ್ಕೆ ಖುಷಿ. ಕರ್ಮ ಅಂತ ಒಂದಿದೆ ಬಿಡಿ. ಅದು ಯಾರ್ ವಿಳಾಸಾನೂ ಮರೆಯಲ್ಲ. ಈ ಹಿಂಸೆ ಮಾಡಿದ್ದನ್ನು ಯಾರೋ ವಿಡಿಯೋ ಮಾಡಿ ಪ್ರಾಣಿ ದಯಾ ಸಂಘಕ್ಕೆ ಕಳಿಸಿದ್ದರು. ಒಂದು ದಿನ ಅವರು ಮೀಡಿಯಾ ಕರೆದುಕೊಂಡು ಬಂದೇ ಬಿಟ್ಟರು. ಈ ತೆಪ್ರೇಷಿನ, ಇವನಿಗೆ ಕೋಲು ತಂದು ಕೊಟ್ಟವರನ್ನ ಎಲ್ಲರನ್ನೂ ಸ್ಟೇಷನ್ ಗೆ ತಗೊಂಡು ಹೋಗಿ ರಾತ್ರಿ ತನಕ ಕೂರಿಸಿದರು. ವಿಚಾರ ಎಲ್ಲೋ ಹೋಗಿ ಮುಟ್ಟಿತ್ತು. ಸಂಬಂಧಪಟ್ಟವರು, ಮೇಲಿನವರು ಎಲ್ಲಾ ಓಡಿ ಬಂದರು. ವಿಚಾರಣೆ ಬೆಳಗಿನ ಜಾವದ ತನಕ ನಡೆಯಿತು. ಎಷ್ಟು ಮರಿಗಳನ್ನು ಕೊಂದೆ ಅಂತ ಕೇಳಿದ್ರೆ ಮೊದ್ಲು ಸಾಯ್ಸಿನೆ ಇಲ್ಲ ಅಂದ, ಆಮೇಲೆ ಅರ್ಧ ಅಂದ. ಅದೆಂಗೆ ಅರ್ಧ ಅಂದ್ರೆ ಆವಾಗ ಒಂದು ಅಂದ. ವಿಡಿಯೋ ತೋರಿಸಿದ ಮೇಲೆ ಎರಡು ಅಂತ ಒಪ್ಪಿಕೊಂಡ. ತಪ್ಪೊಪ್ಪಿಗೆ ಹೇಳಿಕೆ ಬರೆದುಕೊಟ್ಟ. ಉಳಿದವರು ತಲೆ ತಗ್ಗಿಸಿ ನಿಂತಿದ್ದರು. ನಿಜ ಒಬ್ಬ ವ್ಯಕ್ತಿಯ ಮೂರ್ಖತನ ಮತ್ತು ದುರಹಂಕಾರಕ್ಕೆ ಆ ಇಡೀ ಸಂಸ್ಥೆಯೇ ಮುಖ ಕೆಳಗೆ ನಿಂತಿತ್ತು. ಬಿಡುಗಡೆ ಏನೋ ಆಯಿತು ಬಿಡಿ.
ಅದರೆ ಅವತ್ತು ಕುಕ್ಕರುಗಾಲಿನಲ್ಲಿ ಕೂರಿಸಿದ್ರಲ್ಲಾ ಮನೇಲಿ ಟಾಯ್ಲೆಟ್ ನಲ್ಲಿ ಕುಳಿತಾಗಲೂ ಅವನಿಗೆ ಅದೇ ನೆನಪು ಬರ್ತಾ ಇತ್ತು ಅಂತೆ. ಅದ್ಕೆ ಇಟಾಲಿಯನ್ ಕಮೊಡ್ ಹಾಕಿಸಿದ ಅಂತ ಯಾರೋ ಹೇಳಿದ ನೆನಪು. ಆದರೇನು ಮಾಡುವುದು ಅಭ್ಯಾಸಬಲ. ಅದರ ಮೇಲೂ ಹತ್ತಿ ಕುಕ್ಕರುಗಾಲಿನಲ್ಲಿ ಕೂರುತ್ತಾ ಇದ್ದಾನೆ ಅಂತ ಸುದ್ದಿ. ಕಂಡೋರ ಬದುಕು ನಮ್ಗೆ ಯಾಕೆ ಬಿಡಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















