ಅಣ್ಣ ತಮ್ಮ ಇಬ್ಬರೂ ತಂದೆ ಮರಣಾನಂತರ ಆಸ್ತಿಯ ಪಾಲಿಗಾಗಿ ಜಗಳವಾಡುತ್ತಾರೆ. ಪಿತ್ರಾರ್ಜಿತ ಕೇವಲ ಒಂದು ಮುರುಕು ಮನೆ, ಒಂದು ಕರು ಸತ್ತ ಹಾಲು ನೀಡುವ ಎಮ್ಮೆ, ಒಂದು ಕಂಬಳಿ ಮಾತ್ರ.
ಅಣ್ಣ ಬುದ್ದಿವಂತ, ತಮ್ಮ ಹೆಡ್ಡ. ಕೊನೆಗೆ ಬುದ್ಧಿವಂತ ಅಣ್ಣ ತಮ್ಮನೊಡನೆ ಹೀಗೊಂದು ಪಾಲು ಪಟ್ಟಿ ಮಾಡಿಕೊಂಡ. ಮನೆಯಲ್ಲಿ ಎರಡು ಪಾಲು, ಕಂಬಳಿಯನ್ನು ಎರಡು ಪಾಲಿಗೆ ಹರಿದರೆ ಅದು ಯಾರಿಗೂ ಸಾಕಾಗದ ಕಾರಣ, ಹಗಲಿಗೆ ಕಂಬಳಿ ತಮ್ಮನಿಗೂ ರಾತ್ರಿಗೆ ಅಣ್ಣನಿಗೂ ಸಿಕ್ಕಿತು.
ಇನ್ನು ಎಮ್ಮೆ. ಎಮ್ಮೆಯ ನಾಭಿಯಿಂದ ಮುಸುಡಿನ ವರೆಗೆ ತಮ್ಮನಿಗೆ. (ಪಾಪ ತಮ್ಮನಿಗೆ ಎಮ್ಮೆ ಸೆಗಣಿ ಗಲೀಜು ತಾಗಬಾರದಲ್ಲವೇ ಎಂಬ ಪಿರೀತಿ)ನಾಭಿಯಿಂದ ಬಾಲದವರೆಗೆ ಅಣ್ಣನಿಗೆ. ಇದಕ್ಕೆ ಪಕ್ಕದ ಮನೆಯ ಒಂದು ಅಜ್ಜಿನ್ನು ಸಾಕ್ಷಿ ಇರಿಸಿ agreement ಕೂಡಾ ತಯಾರಾಯ್ತು. ಇಬ್ಬರೂ ಹೆಬ್ಬೆಟ್ಟಿನ ರುಜು ಹಾಕಿದರು.
ಮರುದಿನ ತಮ್ಮನು ಒಪ್ಪಂದದಂತೆ ಹಗಲಿಗೆ ಕಂಬಳಿಗೆ ಕೈಹಾಕಿದ. ಆದರೇನು ಅದು ಸೆಖೆಯ ಕಾಲ!! ತನ್ನ ಭಾಗಕ್ಕೆ ಬಂದ ಎಮ್ಮೆಗೆ ಹುಲ್ಲು ತಿನ್ನಿಸಬೇಕು. ಎರಡು ದಿನ ಹೀಗೆಯೇ ನಡೆಯಿತು. ಅಣ್ಣ ಸರಿಯಾಗಿ ಹಾಲು ಕುಡಿದ, ಉಳಿದುದನ್ನು ಮಾರಿದ. ರಾತ್ರಿ ಕಂಬಳಿಹೊದ್ದು ಸುಖ ನಿದ್ರೆಯನ್ನೂ ಮಾಡಿದ. ತಮ್ಮ ಚಳಿಯಲ್ಲಿ ನಡುಗುತ್ತಾ, ಹೊಟ್ಟೆ ಹಸಿವಿನಿಂದ ಮಲಗಿದ. ಪಾಪವೇ.. ಕರುಳು ಚುರುಕ್ ಎನಿಸುತ್ತದೆ. ಒಂದು ದಿನ ಅದೇ ಸಾಕ್ಷಿ ಅಜ್ಜಿಯ ಬಳಿ ತನ್ನ ಕಷ್ಟ ಹೇಳಿಕೊಂಡ. ಆಗ ಅಜ್ಜಿಯು ತಮ್ಮನ ಕಿವಿಯಲ್ಲಿ ಏನೋ ಗುಸು ಗುಸು ಹೇಳಿ ತಮ್ಮನನ್ನು ಕಳುಹಿಸಿತು.
ಮರುದಿನ ತಮ್ಮ ಹಗಲಿನ ಪಾಲಿನ ಕಂಬಳಿಯನ್ನು ನೀರಲ್ಲಿ ನೆನೆಹಾಕಿ ಹಿಂಡಿದ. ಸೆಖೆ ನಿವಾರಣೆಯಾಯ್ತು. ಸಂಜೆ ಹುಲ್ಲು ತಂದ. ಅಣ್ಣ ಎಮ್ಮೆಯ ಹಾಲು ಹಿಂಡುವಾಗ ತಮ್ಮ ಎಮ್ಮೆಗೆ ಹುಲ್ಲು ತಿನ್ನಿಸುತ್ತಾ, ಎಮ್ಮೆಯ ಮುಸುಡಿಗೆ ಕೋಲು ಹಿಡಿದು ಬಾರಿಸ ತೊಡಗಿದ. ಅಣ್ಣ ಪ್ರತಿಭಟನೆ ಮಾಡಿದಾಗ ಅಜ್ಜಿ ಬಂದಳು. ಹೊಡೀಲಿ ಬಿಡೋ. ಅವನ ಪಾಲಿಗೆ ಹೊಡೆದರೆ ನಿನಗೇನು ಎಂದಳು. ಆದಿನದ ಹಾಲು ಚೆಲ್ಲಿಹೋಯ್ತು. ಇನ್ನು ಸುಖ ನಿದ್ರೆ ಮಾಡೋಣ ಎಂದರೆ ಕಂಬಳಿ ಒದ್ದೆ!! ಆಗಲೂ ಅಜ್ಜಿಯು ಇರ್ಲಿ ಬಿಡೋ. ಅವನ ಪಾಲಿನಲ್ಲಿ ಏನು ಬೇಕಾದ್ರೂ ಮಾಡ್ಕೊಳ್ಳಿ. ನಿನಗೇನು ಬಂತು ರೋಗ? ಎಂದು ದಬಾಯಿಸಿತು.
ತನ್ನ ಸ್ವಾರ್ಥ ಅರಿವಾಯ್ತು ಅಣ್ಣನಿಗೆ. ಮರುದಿನ ಪಾಲುಪಟ್ಟಿ agreement ಸುಟ್ಟು ಹಾಕಿದ. ಸುಮ್ಮನೆ ಈ ಕಥೆ ಹೇಳಲಿಲ್ಲ. ಈ ಕಥೆಯಂತೆ ಕರ್ನಾಟಕದೊಳಗಿನ ಪ್ರತ್ಯೇಕ ರಾಜ್ಯದ ಕೂಗಾದೀತು.
ನೆಲವೊಂದೇ-ಜಲವೊಂದೇ-ಮಾತೃ ಒಂದೇ
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post