ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: 25 ವರುಷಗಳಿಂದ ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕನ್ನಡ ಕೇಂದ್ರದ ವತಿಯಿಂದ ಕನ್ನಡ ಪರ ಮತ್ತು ಕನ್ನಡ ಉಳಿವಿಗಾಗಿ ಹೋರಾಟ ಮಾಡುತ್ತಿರುವ, ಸದಾ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ಕೆ.ವಿ. ರಾಮಚಂದ್ರ ಅವರು ಕನ್ನಡ ತಿಂಡಿ ಕೇಂದ್ರ ಮತ್ತು ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕನ್ನಡ ಕೇಂದ್ರ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಅಕ್ಕರೆಯ ಬಾಗಿನ ನೀಡುವ ಶ್ರೇಷ್ಠ ಕಾರ್ಯಕ್ರಮ ಶನಿವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಮಚಂದ್ರ ಅವರೊಂದಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಒಂದಷ್ಟು ಮಾತುಕತೆ ಹೀಗಿದೆ:
ಕಲ್ಪ ನ್ಯೂಸ್: ಬಾಗಿನ ನೀಡುವುದು ಪದ್ಧತಿಯ ಬಗ್ಗೆ?
ರಾಮಚಂದ್ರ: ಗೌರಿಯನ್ನು ಬರ ಮಾಡಿಕೊಂಡ ದಿನ ಸುಮಂಗಲಿಯರಿಗೆ ಬಾಗಿನ ನೀಡುವುದು ಪದ್ಧತಿ. ಹೀಗಾಗಿ, ನೀಡುತ್ತಿದ್ದೇವೆ.
ಕಲ್ಪ ನ್ಯೂಸ್: ಆಚರಣೆ ಮಹತ್ವದ ಬಗ್ಗೆ ?
ರಾಮಚಂದ್ರ: ಯಾವುದೇ ಆಚರಣೆ ಮಹತ್ವ ಪಡೆಯುತ್ತಿದ್ದಂತೆ ಅಥವಾ ಜನಪ್ರಿಯವಾಗುತ್ತಿದ್ದಂತೆ ಅದರ ಹಿಂದೆಯೇ ವಾಣಿಜ್ಯ ಚಟುವಟಿಕೆ ಸಹ ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಬಾಗಿನ ಸಹ ಉದ್ಯಮವಾಗುತ್ತಿದೆ. ಹಬ್ಬದ ಆಚರಣೆಯ ಭಾಗವಾದ ಬಾಗಿನ ನೀಡುವುದನ್ನು ಮಹಿಳೆಯರು ಸಂಭ್ರಮಿಸುತ್ತಾರೆ.
ಕಲ್ಪ ನ್ಯೂಸ್: ಗೌರಿ ಹಬ್ಬದ ಸಮಯದಲ್ಲಿಯೇ ಬಾಗಿನ ನೀಡುವ ಪದ್ದತಿ ಇದೆ. ಆದರೆ ಈಗ ನೀವು ಬಾಗಿನ ನೀಡುತ್ತಿರುವ ಉದ್ದೇಶ?
ರಾಮಚಂದ್ರ: ನಮ್ಮ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಸಾಮಾನ್ಯವಾಗಿ ನಾವು ಯಾರನ್ನು ಆಶಾ ಕಾರ್ಯಕರ್ತೆಯರು ಎಂದು ಕರೆಯುತ್ತೇವೆಯೋ ಅವರನ್ನು ಗೌರವಿಸುವ ಕಾರ್ಯ ಈಗ ನಡೆಯಬೇಕಾಗಿದೆ. ಇದನ್ನು ಗ್ರಹಿಸಿ ನಾವು ಅಂದರೆ ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಇದನ್ನು ಕೈಗೆತ್ತಿಕೊಂಡಿದ್ದೇವೆ. ಕಾರ್ಯಕ್ರಮದಲ್ಲಿ ಸಮಾಜದ ಸೇವೆ ಮಾಡುತ್ತಿರುವ ಈ ಕಾರ್ಯಕರ್ತೆಯರನ್ನು ಗೌರವಿಸಲಾಗುವುದು. ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರದ ಮಹಿಳೆಯರು ಆಶಾ ಕಾರ್ಯಕರ್ತೆಯರಿಗೆ ಬಾಗಿನ ನೀಡುತ್ತಾರೆ. ಬಾಗಿನ ನೀಡಿದರೆ ಸೌಭಾಗ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಆಶಾ ಕಾರ್ಯಕರ್ತೆಯರು ಸಮಾಜದ ಒಳಿತಿಗಾಗಿ ಶ್ರಮ ವಹಿಸಿ ದುಡಿಯುತ್ತಿದ್ದು ಅವರ ಬದುಕು ಹಸನಾಗಿರಲಿ ಎಂಬ ಉದ್ದೇಶದಿಂದ ಬಾಗಿನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಲ್ಪ ನ್ಯೂಸ್: ಸಿದ್ಧ ಬಾಗಿನದಲ್ಲಿರುವ ವಸ್ತುಗಳ ಬಗ್ಗೆ ತಿಳಿಸಿ ?
ರಾಮಚಂದ್ರ: ಬಾಗಿನದಲ್ಲಿರುವ ವಸ್ತುಗಳು ಅಕ್ಕಿ ಕೇರುವ ಮರ, ಅಕ್ಕಿ, ಬೆಲ್ಲ ನವಧಾನ್ಯಗಳು (ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ), ಉಪ್ಪು, ತೆಂಗಿನಕಾಯಿ, ಹಣ್ಣು, ಅರಿಶಿನ-ಕುಂಕುಮ, ವೀಳ್ಯದ ಎಲೆ, ಅಡಿಕೆ, ಬಳೆ ಪ್ಯಾಕೇಟ್‌ನಲ್ಲಿ ಲಭ್ಯವಿರುವ ವಸ್ತುಗಳು: ಕನ್ನಡಿ, ಕಾಡಿಗೆ, ಬಾಚಣಿಕೆ, ಕುಂಕುಮ, ಕಪ್ಪು ಬಳೆ, ಕಪ್ಪು ಮಣಿ.
ಕಲ್ಪ ನ್ಯೂಸ್: ಜೂನ್ 6 ರಂದು ನೀವು ಎಷ್ಟು ಆಶಾ ಕಾರ್ಯಕರ್ತೆಯರಿಗೆ ಅಕ್ಕರೆಯ ಬಾಗಿನ ನೀಡುತ್ತಿದ್ದೀರಾ ?
ರಾಮಚಂದ್ರ: 30 ಜನ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಗೌರವಿಸಿ ಅಕ್ಕರೆಯ ಬಾಗಿನ ನೀಡುತ್ತಿದ್ದೇವೆ. ಸುಮಾ ಎಚ್, ಶೀಲಾ, ಪರ್ವೀನ್ ತಾಜ್, ರೋಹಿನಾ, ಶಾಹೀನ್ ತಾಜ್, ಶಬೀನಾ ತಾಜ್, ಆಯೇಶಾ ಸುಲ್ತಾನಾ, ಫರ್ಜಾನಾ ತಾಜ್, ಗಾಯತ್ರಿ, ಕುಸುಮಾವತಿ ಜಿ, ಶಶಿಕಲಾ ಎನ್, ಮೇನಕಾ ಎಸ್, ಲಕ್ಷ್ಮಿದೇವಿ, ಮೆಹರುನ್ನೀಸಾ, ನಾಗರತ್ನ, ರೇಣುಕಾ, ರೇಷ್ಮಾ, ಥಸೀನಾ, ನಾಗಲಕ್ಷ್ಮೀ ವಿ, ಸುಫಿಯಾ ಬಿ, ಗೀತಾ ಆರ್, ಶಮೀನಾ ಬಾನು, ಪ್ರವೀಣ್ ತಾಜ್, ರಜೀಯಾ ಬಾನು, ಶಬೀನಾ ಬಾನು, ಶಹ್ತಾಜ್, ನಾಜಿಯಾ ಬಾನು, ಹಮ್ದಾನ, ಅಲ್ಮಾಸ್, ರತ್ನಾ ಎಂ ಸಿ, ಪದ್ಮಾವತಿ, ನಿರ್ಮಲಾ, ಸರಸ್ವತಿ.
ಬಾಗಿನವೂ ಒಂದು ಕೊಂಡಿ
ತವರಿನಿಂದ ಬರುವ ಬಾಗಿನಕ್ಕೆ ಹೆಣ್ಣುಮಕ್ಕಳ ಮನಸ್ಸು ಹಾತೊರೆಯುತ್ತಿದೆ. ತವರಿಗೂ ಹೆಣ್ಣು ಮಗಳಿಗೂ ಇರುವ ಬಾಂಧವ್ಯದ ಹಾರಕ್ಕೆ ಈ ಬಾಗಿನವೂ ಒಂದು ಕೊಂಡಿ ಇದ್ದಂತೆ.
ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿರುವ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿ ಹಿಡಿದು, ನಾಡಿನ ಜನತೆಯ ಆರೋಗ್ಯ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಆಶಾ ಕಾರ್ಯಕರ್ತೆಯರಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಗೌರವ ವಂದನೆ ಸಲ್ಲಿಸುವ ಮೂಲಕ ಅವರ ಕಾರ್ಯ ವೈಖರಿಗೆ ಒಂದು ಗೌರವ ಪೂರ್ವಕ ನಮನಗಳನ್ನು ಸಲ್ಲಿಸೋಣ.
Get In Touch With Us info@kalpa.news Whatsapp: 9481252093
Discussion about this post