ಬೆಂಗಳೂರು: ನಾನು ನನ್ನ ಜೀವನದಲ್ಲಿ ಕಂಡ ಅತ್ಯಂತ ಸಜ್ಜನಿಕೆಯ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ಕಳೆದ ಎರಡು ವರ್ಷದಿಂದ ಅವರ ಆರೋಗ್ಯ ಹದಗೆಡುತ್ತಲೇ ಇತ್ತು. ಈ ನಡುವೆ ಎರಡು ಮೂರು ಬಾರಿ ಹೋಗಿ ಮಾತನಾಡಿಸಿದ್ದೆ. ಈಗ ಅವರ ಆರೋಗ್ಯ ಗಂಭೀರವಾಗಿರುವುದು ಆತಂಕ ಮೂಡಿಸಿದೆ ಎಂದಿದ್ದಾರೆ.
ನಮ್ಮ ಜೀವನದಲ್ಲಿ ಅವರೊಂದಿಗೆ 15 ರಿಂದ 20 ಬಾರಿ ರಾಜಕೀಯ ಪ್ರವಾಸಕ್ಕೆ ತೆರಳುವ ಭಾಗ್ಯ ನನಗೆ ದೊರೆತಿದ್ದು ನನ್ನ ಪುಣ್ಯ. ಅಟಲ್ ಜೀ ಅವರು ಎಂತಹ ಭಾವುಕ ಮನಃಸ್ಥಿತಿಯವರು ಎಂದರೆ ‘ಎಷ್ಟೋ ಬಾರಿ ನಾವು ರೈಲಿನಲ್ಲಿ ರಾತ್ರಿ ತೆರಳುತ್ತಿದ್ದೆವು. ಯಾವುದಾದರೂ ನಿಲ್ದಾಣದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ನೆರೆದಿದ್ದಾರೆ ಎಂದು ತಿಳಿದರೆ ಸಾಕು, ಅಲ್ಲೇ ರೈಲಿನಿಂದ ಹೊರಬಂದು ಕೈ ಬೀಸಿ, ಮಾತನಾಡಿಸುತ್ತಿದ್ದರು ಎಂದು ಸ್ಮರಿಸಿದರು.
ಅಭಿಮಾನಿಗಳು ಒಮ್ಮೆ ನನ್ನ ಜನ್ಮ ದಿನವನ್ನು ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದರು. ಅಂದು ಅಟಲ್ ಜೀ ಆಗಮಿಸಿ, ತಾವು ಯಾರದ್ದೇ ಜನ್ಮದಿನ ಕಾರ್ಯಕ್ರಮಕ್ಕೆ ಹೋಗಿಲ್ಲ. ನಿನ್ನದೇ ಮೊದಲು.. ನಿನಗೆ ಆರ್ಶೀವದಿಸಲು ಬಂದಿದ್ದೇನೆ ಎಂದರು. ಅದಕ್ಕಿಂತಲೂ ನನಗಿನ್ನೇನು ಭಾಗ್ಯ ಬೇಕು ಎಂದು ಭಾವುಕರಾದರು.
ಅಟಲ್ ಜೀ ಅವರ ಆರೋಗ್ಯ ಹದಗೆಟ್ಟಿರುವುದು ಬೇಸರದ ಸಂಗತಿ. ಈಗಾಗಲೇ ದೇಶದೆಲ್ಲೆಡೆ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ನಡೆಯುತ್ತಿದೆ. ನಾವೆಲ್ಲರೂ ಸೇರಿ ಅವರ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ ಎಂದರು.
ದೇಶದೆಲ್ಲೆಡೆ ಬಿಜೆಪಿಯ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದ್ದು, ರಾಜ್ಯದಲ್ಲೂ ಸಹ ಪಕ್ಷದ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ದೆಹಲಿಗೆ ಬರುವಂತೆ ಎಲ್ಲರಿಗೂ ಬುಲಾವ್ ಬಂದಿದೆ. ಹೀಗಾಗಿ, ಇಂದು ನವದೆಹಲಿಗೆ ತೆರಳುತ್ತಿದ್ದು, ಇನ್ನು ಮೂರು ನಾಲ್ಕು ದಿನ ಅಲ್ಲೇ ಇರುತ್ತೇನೆ ಎಂದರು.
Discussion about this post