ಕಾರ್ಗಿಲ್ ಯುದ್ದ ಗೆದ್ದಾಗ ರೇಡಿಯೋ ನ್ಯೂಸ್ ಕೇಳಿ ಹೇಗೆ ಖುಷಿ ಪಟ್ಟಿದ್ದೆನೋ ಹಾಗೆಯೇ ನಂತರದ ಲೋಕಸಭಾ ಚುನಾವಣೆಯಲ್ಲಿ ಅಟಲ್ ಜೀಗೆ ಸೋಲಾದಾಗ ಅಷ್ಟೇ ಕಣ್ಣೀರಿಟ್ಟಿದ್ದೆ.
ವಿಶೇಷ ಲೇಖನ: ಅಕ್ಷತಾ ಬಜ್ಪೆ, ಖ್ಯಾತ ಅಂಕಣಕಾರ್ತಿ
ಆಗಿನ್ನೂ ತುರ್ತು ಪರಿಸ್ಥಿತಿಯಿಂದ ಹೊರಬಂದಿರಲಿಲ್ಲ ದೇಶ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಸೇರಿದ್ದ ಅಪ್ಪ(ನನ್ನ ತಾತ)ನ ಅನೇಕ ಒಡನಾಡಿಗಳು ನಮ್ಮ ಮನೆಗೆ ಬಂದು ಹಲವಾರು ಘಟನೆಗಳ ಅವಲೋಕನ ಮಾಡುತ್ತಿದ್ದರು. ಇಂದಿರಾ ಗಾಂಧಿ ಅವರನ್ನು ಜೈಲಿಗಟ್ಟಿದ ಸಂದರ್ಭದಲ್ಲಿನ ಅನುಭವ ಘೋರವಾದದ್ದು.
ದಿನದಲ್ಲಿ ಒಂದು ಬಾರಿ ದೊರೆಯುತ್ತಿದ್ದ ಒಂದು ಪ್ಲೇಟ್ ಅನ್ನದಲ್ಲಿ ಒಂದು ದಿನ 98 ಕಲ್ಲುಗಳನ್ನು ಲೆಕ್ಕ ಮಾಡಿದ್ದರಂತೆ. ಅನ್ನಕ್ಕೆ ಕಲ್ಲು ಬೆರಸುತ್ತಿದ್ದರೋ ಅಥವಾ ಕಲ್ಲಿಗೆ ಅನ್ನ ಬೆರೆಸುತ್ತದ್ದರೋ ತಿಳಿಯುತ್ತಿರಲಿಲ್ಲ. ಆದರೂ ನಮಗೆ ನೋವಾಗುತ್ತಿರಲಿಲ್ಲ. ಏಕೆಂದರೆ ನಾವು ಮಾಡುವ ಕೆಲಸ ತಾಯಿ ಭಾರತಿಗೆ ಸಮರ್ಪಿತ ಅಲ್ಲವೇ? ಯಾವಾಗಲಾದರೂ ತುಂಬ ಬೇಜಾರಾದಾಗ ಬೆಂಗಳೂರಿನ ಜೈಲಿನಲ್ಲಿ ಸೆರೆವಾಸ ಅನುಭಿಸುತ್ತಿದ್ದ ಅಟಲ್ ಜೀ ಅಡ್ವಾಣೀ ಜೀ ನೆನಪು ಮಾಡಿಕೊಳ್ಳುತ್ತಿದ್ದರಂತೆ.
ಈ ಕಥೆ ಕೇಳಿಸಿಕೊಳ್ಳುತ್ತಿದ್ದ ಅಪ್ಪ(ನನ್ನ ತಾತ) ಇರಲಿ ಬಿಡು.(70ರ ದಶಕ ಅದು) ನಮಗೂ ಕಾಲ ಬರುತ್ತದೆ. ಕಾಂಗ್ರೆಸ್ ನ ಅಟ್ಟಹಾಸ ಬೇಗ ಕೊನೆಗೊಳ್ಳುತ್ತದೆ. ಅತೀ ಶೀಘ್ರದಲ್ಲಿ ಜನಸಂಘ ಅಧಿಕಾರಕ್ಕೆ ಬರುತ್ತದೆ. ನಮ್ಮ ಕಷ್ಟ ನೀಗುತ್ತದೆ ಎಂದು.
ಅವರ ಮಾತುಗಳು ಮಗಿದ ಮೇಲೆ ನಾನು(ನನ್ನಮ್ಮ) ಅಪ್ಪನಲ್ಲಿ ಪ್ರಶ್ನೆ ಮಾಡಿದೆ. ಅಪ್ಪಾ.. ತಮಾಷೆ ಮಾಡುತ್ತಿದ್ದೀರಾ? ಜನಸಂಘಕ್ಕೆ ಚುನಾವಣೆಯಲ್ಲಿ ಠೇವಣಿಯೂ ಸಿಗುತ್ತಿಲ್ಲ. ಸಂಸತ್ತಿನಲ್ಲಿ 1-2 ಸಂಸದರೂ ಇಲ್ಲ. ನೀವು ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಿದ್ದೀರಲ್ಲಾ? ಎಂದು. ಅದಕ್ಕೆ ಅಪ್ಪ(ನನ್ನ ತಾತ) ನೋಡುತ್ತಿರು, 100% ಜನಸಂಘ ಅಧಿಕಾರಕ್ಕೆ ಬರುತ್ತದೆ. ನಾವು ಭೂಗತರಾಗಿ ಕೆಲಸ ಮಾಡುತ್ತಿದ್ದಾಗ ಈ ಅಚಲವಾದ ವಿಶ್ವಾಸವೇ ನಮಗೆ ಸ್ಪೂರ್ತಿ ತುಂಬಿದ್ದು. ಹಾಗೆಯೇ ಅಟಲ್ ಜೀ ಒಂದು ದಿನ ಖಂಡಿತಾ ಈ ದೇಶದ ಪ್ರಧಾನಿಯಾಗುತ್ತಾರೆ.ದೇಶ ಮತ್ತೆ ಸುಭೀಕ್ಷವಾಗುತ್ತದೆ. ಎಂದು ಭವಿಷ್ಯ ನುಡಿದಿದ್ದರು.
ಇದು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನನ್ನ ಅಮ್ಮ ನನಗೆ ಹೇಳಿದ ಕಥೆಯಿದು. ಹಾಗೆಯೇ ಅಂದು ಅಟಲ್ ಜೀ ಪ್ರಧಾನಿಯಾಗುವುದನ್ನು ನೋಡಲು ಅಪ್ಪ(ನನ್ನ ತಾತ) ಬದುಕಿಲ್ಲವಲ್ಲ ಎಂದು ಬೇಸರಿಸಿ ಕೊಂಡಿದ್ದರು ಕೂಡ.
ಇಂತಹ ಕಥೆಗಳನ್ನು ಕೇಳುತ್ತಲೇ ಬೆಳೆದ ನನಗೆ ಅಟಲ್ ಜೀ ನನ್ನ ತಾತನಷ್ಟೇ ಮನಸ್ಸಿಗೆ, ಹೃದಯಕ್ಕೆ ಹತ್ತಿರ. ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭ ಪರೀಕ್ಷೆಯಲ್ಲಿ ದೇಶದ ಇಂದಿನ ಪ್ರಧಾನಿ. ಈ ಪ್ರಶ್ನೆಗೆ ಅಟಲ್ ಬಿಹಾರಿ ವಾಜಪೇಯಿ ಅಂತ ಒಂದಕ್ಷರವೂ ತಪ್ಪಿಲ್ಲದೆ ಹೆಮ್ಮೆಯಿಂದ ಬರೆದು ಬರುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. ನನ್ನಮ್ಮ ಅಟಲ್ ಜೀ ಆಡಳಿತದ ಮುತ್ಸದ್ಧಿತನವನ್ನು ವರ್ಣಿಸುತ್ತಿದ್ದಿದ್ದು ಹೀಗೆ ಒಂದು ಕೈಯಲ್ಲಿ 10 ತೆಂಗಿನಕಾಯಿ(ಹತ್ತಾರು ಮಿತ್ರಪಕ್ಷಗಳು) ಹಿಡಿದುಕೊಂಡು ಅಷ್ಟು ದಿಟ್ಟ ಆಡಳಿತ ನೀಡಿದ ನಾಯಕ ಈ ದೇಶದಲ್ಲಿ ಇನ್ನೊಬ್ಬನಿಲ್ಲ. ಎಂದೂ ತಾನು ನಂಬಿದ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಂಡಿಲ್ಲ, ಆದರೂ ಆತ ಅಜಾತಶತ್ರು.
ದಿನಗಳು ಉರುಳಿದಂತೆ ರಾಜಕೀಯ ಬದಲಾಯಿತು. ಕಾರ್ಗಿಲ್ ಯುದ್ದ ಗೆದ್ದಾಗ ರೇಡಿಯೋ ನ್ಯೂಸ್ ಕೇಳಿ ಹೇಗೆ ಖುಷಿ ಪಟ್ಟಿದ್ದೆನೋ ಹಾಗೆಯೇ ನಂತರದ ಲೋಕಸಭಾ ಚುನಾವಣೆಯಲ್ಲಿ ಅಟಲ್ ಜೀಗೆ ಸೋಲಾದಾಗ ಅಷ್ಟೇ ಕಣ್ಣೀರಿಟ್ಟಿದ್ದೆ.
ಅಟಲ್ ಜೀ ನೀವು ರಾಜಕೀಯ ದಿಂದ ದೂರ ಉಳಿದಾಗ, ನಿಮ್ಮ ಆರೋಗ್ಯ ಕೈ ಕೊಡುತ್ತಿದೆ ಎಂದಾಗೆಲ್ಲಾ ತುಂಬಾ ನೊಂದುಕೊಳ್ಳುತ್ತಿದ್ದೆ. ದೇಶಸೇವೆ ಕಂಕಣ ತೊಟ್ಟ ಅಖಂಡ_ಬ್ರಹ್ಮಚಾರಿ ನಿಮ್ಮನ್ನೊಮ್ಮೆ ನೋಡಬೇಕು ಎಂಬ ಆಸೆ ಇನ್ನೂ ನೆರವೇರಿಲ್ಲ.
ಇಂದಿನ ನಿಮ್ಮ ಆರೋಗ್ಯ ಸ್ಥಿತಿಯ ಸುದ್ದಿ ಕೇಳಿ ಆಘಾತವಾಗಿದೆ. ನನಗೇ ತಿಳಿಯದಂತೆ ಕಣ್ಣಂಚು ಒದ್ದೆಯಾಗಿದೆ. ನನ್ನ ತಾತನ ಆರೋಗ್ಯ ಕೆಟ್ಟಾಗ ಅಳು ಒತ್ತರಿಸಿ ಬಂದಂತೆ ಇಂದೂ ಸಮಾಧಾನ ಮಾಡಿಕೊಳ್ಳಲಾಗುತ್ತಿಲ್ಲ.
ಭಗವಂತನ ಕೃಪೆ ನಿಮ್ಮ ಜೊತೆಗಿರಲಿ ಎಂದಷ್ಟೇ ಹಾರೈಸಬಲ್ಲೆ.
ಅಜಾತಶತ್ರು_ಅಟಲ್ ಜೀ
#pray_for_Ataljee
Discussion about this post