ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸರಿ ರಾತ್ರಿಯಲ್ಲಿ ಆಟೋ ಚಾಲಕನೊಬ್ಬ ಕುಟುಂಬವೊಂದಕ್ಕೆ ಚಾಲಾಕಿತನದಿಂದ ಮೋಸ ಮಾಡಿ, ದೌರ್ಜನ್ಯವೂ ಸಹ ಎಸಗಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಈ ಕುರಿತಂತೆ ತಮಗಾದ ಕಹಿ ಅನುಭವವನ್ನು ಹಂಚಿಕೊಂಡ ಅನಂತ ಕಲ್ಲಾಪುರ ಎನ್ನುವವರು ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಡಿ.20ರಂದು ಕುಕ್ಕೆ ಸುಬ್ರಹ್ಮಣ್ಯದಿಂದ ಹೊರಟು ಬೆಳಗಿನ ಜಾವ 2.45ಕ್ಕೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಇಳಿದೆವು. ಬನಶಂಕರಿ 3ನೇ ಹಂತದಲ್ಲಿರುವ ನಮ್ಮ ಮನೆಗೆ ತೆರಳಲು ಆಟೋ ಕೇಳಿದೆವು. ಆಗ, ಆಟೋ ಚಾಲಕನೊಬ್ಬ ಡಬ್ಬಲ್ ಮೀಟರ್ ಕೊಡಬೇಕು ಎಂದು ಕೇಳಿದ ಎಂದು ಅಳಲು ತೋಡಿಕೊಂಡರು.
ಡಬ್ಬಲ್ ಆದರೂ ಪರವಾಗಿಲ್ಲ ಎಂದು ಒಪ್ಪಿಕೊಂಡು ಹೊರಟು ನಮ್ಮ ಮನೆ ತಲುಪುವಾಗ ಮೀಟರ್ ದರ 333 ರೂಪಾಯಿ ಆಗಿತ್ತು. ಆದರೆ, ಸಾಮಾನ್ಯವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ನಮ್ಮ ಮನೆಗೆ ಅಂದಾಜು 175 ರೂಪಾಯಿ ಆಗುತ್ತದೆ. ಆದರೆ, 333 ರೂ. ಮೀಟರ್ ಆಗಿದ್ದು 670 ರೂಪಾಯಿ ಕೊಡಿ ಎಂದು ಆಟೋ ಚಾಲಕ ಕೇಳಿದ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ, ಆಟೋ ಒಳಗೆ ಟಾರ್ಚ್ ಹಾಕಿ ಹಣ ತೆಗೆಯಲು ಹೊರಟ ನಮಗೆ ಟಾರ್ಚ್ ಆನ್ ಮಾಡಬೇಡಿ. ಮಗು ಇದೆ. ಗ್ಯಾಸ್ ಬ್ಲಾಸ್ಟ್ ಆಗುತ್ತದೆ ಎಂದು ಕತೆ ಕಟ್ಟಿ, ಟಾರ್ಚ್ ಹಾಕಲು ಬಿಡಲಿಲ್ಲ. ಅಲ್ಲದೇ, ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಬೇಗ ಬೇಗ ಹಣ ಕೊಡಿ ಎಂದು ಹೆದರಿಸಿ ನಾವು ಕೊಟ್ಟ 500 ರೂಪಾಯಿಯ ನೋಟನ್ನು ಚಾಲಾಕಿ ತನ ಮಾಡಿ 100 ರೂಪಾಯಿ ಎಂದು ಹೇಳಿ, 600 ರೂಪಾಯಿ ಅನ್ನು ಆಟೋ ಒಳಗೆ ಕುಳಿತುಕೊಂಡು ನೀವು ಕೊಟ್ಟಿದ್ದು 200/-ರೂಪಾಯಿ ಎಂದು ಹೇಳಿ ನಮ್ಮ ಬಳಿ 2ಬಾರಿ ಹಾಗೇ ಮಾಡಿ ಒಂದು ಸಾವಿರ ರೂಪಾಯಿ ಕಿತ್ತುಕೊಂಡ ಎಂದು ಅಳಲು ತೋಡಿಕೊಂಡರು.
ನನ್ನ ಹೆಂಡತಿ ಹಾಗೂ ಮಗುವನ್ನು ಆಟೋದಿಂದ ಇಳಿಸಿಕೊಂಡೆ. ಮತ್ತೆ ಕಡಿಮೆ ಕೊಟ್ಟಿದ್ದೀರಿ ಎಂದು 670 ರೂಪಾಯಿ ಕಸಿದುಕೊಂಡ. ಸರಿ ರಾತ್ರಿಯಲ್ಲಿ ಯಾರೂ ಇಲ್ಲದ ಹೊತ್ತಿನ ನಿರ್ಜನ ಪ್ರದೇಶದಲ್ಲಿ ಅವನ ದೌರ್ಜನ್ಯದಿಂದ ನಾವು ಸುರಕ್ಷಿತವಾಗಿ ಉಳಿದರೆ ಸಾಕಿತ್ತು ಎಂದು ಯೋಚಿಸಿ ಸುಮ್ಮನಾದೆ. ಅಂತಿಮವಾಗಿ ಅತನಿಗೆ 1000 ರೂ. ಹಾಗೂ 670 ರೂ. ಸೇರಿ 1670 ರೂಪಾಯಿ ಕೊಟ್ಟ ಹಾಗಾಯಿತು. ನಾಗರಿಕರೇ ಇಂತಹ ದುಷ್ಟ ಆಟೋ ಚಾಲಕರು ಇದ್ದಾರೆ ದಯವಿಟ್ಟು ಸಿಲಿಕಾನ್ ಸಿಟಿಯ ನಾಗರಿಕರು ಹುಷಾರು ಎಂದು ಎಚ್ಚರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















