ಕಲ್ಪ ಮೀಡಿಯಾ ಹೌಸ್ | ಟೆಹ್ರಾನ್ |
ಟೆಹ್ರಾನ್ ಇರಾನ್’ನಲ್ಲಿನ ಭದ್ರತಾ ಪರಿಸ್ಥಿತಿ ಸುಧಾರಣೆಯ ಲಕ್ಷಣಗಳನ್ನು ತೋರಿದ್ದರೂ, ಮುಂದಿನ ಸೂಚನೆ ಬರುವವರೆಗೆ ಭಾರತೀಯರು ಅನಗತ್ಯವಾಗಿ ಇರಾನ್’ಗೆ ಪ್ರಯಾಣಿಸಬಾರದು ಎಂದು ಟೆಹ್ರಾನ್’ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಷ್ಕೃತ ಪ್ರಯಾಣ ಸಲಹೆ ಹೊರಡಿಸಿದೆ.
ರಾಯಭಾರ ಕಚೇರಿಯ ಪ್ರಕಟಣೆಯ ಪ್ರಕಾರ ಇರಾನ್ ಪರಿಸ್ಥಿತಿಯನ್ನು ಸಮೀಪದಿಂದಲೇ ಗಮನಿಸಲಾಗುತ್ತಿದೆ. ಇತ್ತೀಚಿನ ಸಕಾರಾತ್ಮಕ ಬೆಳವಣಿಗೆಗಳು ಹಾಗೂ ಒಟ್ಟಾರೆ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿರುವುದಾಗಿ ಹೇಳಲಾಗಿದೆ. ಆದಾಗ್ಯೂ ಪರಿಸ್ಥಿತಿ ಸಡಿಲಗೊಂಡಿದ್ದರೂ ಸಹ ಅನಗತ್ಯ ಪ್ರಯಾಣಗಳನ್ನು ತಪ್ಪಿಸುವಂತೆ ಭಾರತೀಯ ನಾಗರಿಕರಿಗೆ ಸೂಚನೆ ನೀಡಲಾಗಿದೆ.
ಇರಾನ್’ನಲ್ಲಿರುವ ಭಾರತೀಯರಿಗೆ ಎಚ್ಚರಿಕೆ
ಪ್ರಸ್ತುತ ಇರಾನ್’ನಲ್ಲಿ ವಾಸಿಸುತ್ತಿರುವ ಅಥವಾ ಅನಿವಾರ್ಯ ಕಾರಣಗಳಿಂದ ಅಲ್ಲಿಗೆ ತೆರಳಬೇಕಾಗಿರುವ ಭಾರತೀಯರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ.
ಎಲ್ಲ ಸಮಯದಲ್ಲೂ ಜಾಗರೂಕರಾಗಿರಬೇಕು, ಪರಿಸ್ಥಿತಿಯ ಅರಿವು ಕಾಪಾಡಿಕೊಳ್ಳಬೇಕು ಹಾಗೂ ವಿಶ್ವಾಸಾರ್ಹ ಮೂಲಗಳ ಮೂಲಕ ಸ್ಥಳೀಯ ಬೆಳವಣಿಗೆಗಳನ್ನು ಗಮನಿಸಬೇಕು ಎಂದು ಸಲಹೆ ನೀಡಲಾಗಿದೆ. ಅಲ್ಲದೆ, ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಇರಾನ್’ನಲ್ಲಿರುವ ಭಾರತೀಯರು ನೋಂದಣಿ ಕಡ್ಡಾಯ
ಇರಾನ್’ನಲ್ಲಿ ಇರುವ ಎಲ್ಲಾ ಭಾರತೀಯರು ತಮ್ಮ ವಿವರಗಳನ್ನು ಟೆಹ್ರಾನ್’ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಶೀಘ್ರವಾಗಿ ನೋಂದಾಯಿಸಿಕೊಳ್ಳುವಂತೆ ಒತ್ತಾಯಿಸಲಾಗಿದೆ.
ಮುಂದಿನ ನವೀಕರಣಗಳು ಹಾಗೂ ಸಲಹೆಗಳನ್ನು ಪಡೆಯಲು ರಾಯಭಾರ ಕಚೇರಿಯ ವೆಬ್’ಸೈಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ನಿಯಮಿತವಾಗಿ ಪರಿಶೀಲಿಸುವಂತೆ ತಿಳಿಸಲಾಗಿದೆ.
ತುರ್ತು ಸಂಪರ್ಕ ಸಂಖ್ಯೆಗಳು
ಸಹಾಯದ ಅಗತ್ಯವಿರುವ ಭಾರತೀಯರಿಗೆ ರಾಯಭಾರ ಕಚೇರಿ ಕೆಳಗಿನ ತುರ್ತು ಸಂಖ್ಯೆಗಳನ್ನೂ ಪ್ರಕಟಿಸಿದೆ:
+989128109115
+989128109109
+989128109102
+989932179359
ಇಮೇಲ್ ಮೂಲಕ ಸಂಪರ್ಕಿಸಲು: cons.tehran@mea.gov.in
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Comments 1