ಇದು ಕಾಳಿಂಗಗಳ ಮಿಲನದ ಸಮಯ (Mating Season) ಸಾಮಾನ್ಯವಾಗಿ ಫೆಬ್ರವರಿಯಿಂದ – ಏಪ್ರಿಲ್’ವರೆಗೂ ಕಾಳಿಂಗಗಳ ಓಡಾಟ ಹೆಚ್ಚಿದ್ದು, ಜನರ ಕಣ್ಣಿಗೆ ಬೀಳುವ ಸಾಧ್ಯತೆ ಈ ತಿಂಗಳುಗಳಲ್ಲೇ ಅಧಿಕ.
ನಮ್ಮ ರಾಜ್ಯದಲ್ಲಿ ಪಶ್ಚಿಮ ಘಟ್ಟ ಹಾಗೂ ಅದರ ಆಸುಪಾಸಿನಲ್ಲಿ ಕಂಡುಬರುವ ಇವು ಸಂತಾನೋತ್ಪತ್ತಿ ಕಾಲದಲ್ಲಿ ಆಹಾರಕ್ಕಿಂತ ಸಂಗಾತಿ ಹುಡುಕಾಟದಲ್ಲೇ ಹೆಚ್ಚಿನ ಸಮಯ ಕಳೆಯುತ್ತವೆ.
ಮನುಷ್ಯರಿಗೆ ಋತುಚಕ್ರವಿದೆ ಆದರೆ ಪ್ರಾಣಿಗಳಿಗೆ ಬೆದೆ ಚಕ್ರವಿದೆ. ಬೆದೆಯ ಸಮಯದಲ್ಲಿ ತನ್ನ ಜನನಾಂಗದಿಂದ ವಿಶೇಷ ರಸಾಯನಿಕ (ಫೆರಮೊನ್) ಬಿಡುಗಡೆ ಮಾಡುವ ಹೆಣ್ಣು ಕಾಳಿಂಗ ತಾನು ಸಂತಾನೋತ್ಪತ್ತಿಗೆ ಸಿದ್ದ ಎಂಬ ಸೂಚನೆ ಕೊಡುತ್ತದೆ. ಈ ಸಮಯದಲ್ಲಿ ಗಂಡು ಪೆರಮೊನಿಗೆ ಆಕರ್ಷಿತವಾಗಿ ಹೆಣ್ಣುಗಳ ಹುಡುಕಾಟದಲ್ಲಿ ತೊಡಗುತ್ತವೆ.
ಕಾಳಿಂಗಗಳು ತನ್ನದೆ ಟೆರಿಟರಿ ವ್ಯಾಪ್ತಿಯಲ್ಲಿ ಬದುಕಲು ಇಚ್ಚಿಸುತ್ತವೆ, ಆದರೆ ಈ ಬೆದೆಯ ಕಾಲದಲ್ಲಿ ತನ್ನ ವ್ಯಾಪ್ತಿ ಮೀರಿ ಕೆಲ ಕಾಳಿಂಗಗಳು 8-10 ಕಿ ಮೀ ದೂರ ಹೋಗಿ ಸಂಗಾತಿಗಳನ್ನು ಹುಡುಕಿ ತಮ್ಮ ಮೂಲ ನೆಲೆಗೆ ವಾಪಾಸಾಗಬಲ್ಲವು.
ಒಂದು ಹೆಣ್ಣನ್ನು ಕೊಡಲು ಕೆಲವು ಸಲ 2-3 ಗಂಡುಗಳು ಪೈಪೋಟಿ ಮಾಡುತ್ತವೆ, ಇಲ್ಲಿ ಗಂಡುಗಳ ಮಧ್ಯೆಹೋರಾಟ (Combat) ನಡೆದು, ಗೆದ್ದ ಗಂಡು ಹೆಣ್ಣನ್ನು ಸೇರಿದರೆ ಸೋತ ಗಂಡು ತನ್ನ ನೆಲೆಯ ಕಡೆಗೆ ವಾಪಾಸಾಗುತ್ತದೆ.
ಹೆಣ್ಣು ತನ್ನ ಜನನಾಂಗದಿಂದ ಬಿಡುಗಡೆ ಮಾಡುವ/ಸಿಂಪಡಿಸುವ ಪೆರಮೊನಿಗೆ ಅದ್ಬುತ ಶಕ್ತಿ ಇದೆ. ಬೆದಗೆ ಬಂದ ಹೆಣ್ಣು ಒಂದು ನಿರ್ಧಿಷ್ಠ ಜಾಗದಲ್ಲಿ ಸಂಚರಿಸಿ 8-11 ದಿನ ಕಳೆದಿದ್ದರೂ, ಗಂಡು ಆ ಹೆಣ್ಣು ಸಂಚರಿಸಿದ ಜಾಗವನ್ನು ನಿಖರವಾಗಿ ಪತ್ತೆ ಮಾಡಬಲ್ಲದು.
ನಾನು ಒಂದು ಊರಿನಲ್ಲಿ (Mating Season)ಒಂದು ಹೆಣ್ಣು ಹಾವನ್ನು ರಕ್ಷಣೆ ಮಾಡಿದ್ದೆ, ಹಾವು ಮನೆಯ ಒಳ ಪ್ರವೇಶಿಸಿ ಧಾನ್ಯದ ಚೀಲದಡಿ ಮಲಗಿತ್ತು, ಹಾವನ್ನು ಹಿಡಿದ ನಂತರ ಮನೆಯವರು ಆ ಜಾಗವನ್ನು ಸಗಣಿ ನೀರಿನಿಂದ ಅನೇಕ ಸಾರಿ ತೊಳೆದಿದ್ದರು. ಸರಿಯಾಗಿ 8 ದಿನಗಳ ನಂತರ ಅದೇ ಜಾಗಕ್ಕೆ ಗಾತ್ರದಲ್ಲಿ ದೊಡ್ಡದಿದ್ದ ಗಂಡು ಕಾಳಿಂಗ ಬಂದು ಹುಡುಕಾಟ ನಡೆಸಿತ್ತು.
ಸಾಮಾನ್ಯವಾಗಿ ಬೇಸಿಗೆ ಎಂದರೆ ನೀರಿನ ಅಭಾವ ಹಾಗು ಹೆಚ್ಚು ಬಿಸಿಲು ಎಲ್ಲೆಡೆ ಇರುತ್ತದೆ, ಹಾಗಾಗಿ ಕಾಳಿಂಗಗಳು ಮಲೆನಾಡಿನ ಅಡಿಕೆ ತೋಟ, ಮನೆಯ ಅಕ್ಕಪಕ್ಕದಲ್ಲೆ ಹೆಚ್ಚು ಮಿಲನ ಕ್ರಿಯೆ ನಡೆಸುತ್ತವೆ, (ಕೆಲವು ಸಲ ಕಾಡಿನಲ್ಲೂ ನಡೆಯುತ್ತದೆ). ಇಂತಹ ಸಮಯದಲ್ಲಿ ಕಾಳಿಂಗ ಜೋಡಿಗಳನ್ನು ಹಿಡಿದು ಸ್ಥಳಾಂತರ ಮಾಡಲೇಬಾರದು. ಕಾರಣ ಒಂದು ಹೆಣ್ಣಿಗಾಗಿ ಸುತ್ತಲಿನ ಗುಂಡು ಕಾಳಿಂಗಗಳು ಪೈಪೋಟಿ ನಡೆಸಿ ಗೆದ್ದ ಗಂಡಿಗೆ ಅವಕಾಶ ಸಿಕ್ಕಿರುತ್ತದೆ, ಇಂತಹ ಸಮಯದಲ್ಲಿ ಸ್ಥಳಾಂತಗೊಳಿಸಿದರೆ ಕಾಳಿಂಗಗಳ ಸಂತಾನೋತ್ಪತ್ತಿಗೆ ತೊಂದರೆಯಾಗಬಹುದು, ಹೆಣ್ಣಿನ ಬೆದೆ ಚಕ್ರ ಅವಧಿ ಮುಗಿದು ಗಂಡು ಮತ್ತೊಮ್ಮೆ ಸೇರಲು ಸಾಧ್ಯವಾಗದೇ ಇರಬಹುದು.
ಇಲ್ಲಿ ಕಾಳಿಂಗಗಳ ಜೀವನ ಶೈಲಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಹಾವುಗಳ ರಕ್ಷಣೆ (Rescuer) ಮಾಡುವ ಎಲ್ಲರೂ ಮಿಲನದ ತಿಂಗಳುಗಳಲ್ಲಿ ಕಾಳಿಂಗ ಜೋಡಿಗಳನ್ನು ಸ್ಥಳಾಂತರ ಮಾಡದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಹಾವುಗಳ ಚಲನವಲನದ ಮೇಲೆ ದೂರದಿಂದ ನಿಗಾ ಇಡಲು ಹೇಳಿ. ಕಾಳಿಂಗ ಜೋಡಿಗಳು 2-3 ದಿನ ಮಿಲನ ಕ್ರಿಯೆ ಮುಗಿಸಿ ನಂತರ ಜನವಸತಿಯಿಂದ ದೂರ ಹೋಗುತ್ತವೆ.
Save King Cobra
ಲೇಖನ ಕೃಪೆ: ನಾಗರಾಜ್ ಬೆಳ್ಳೂರು
Discussion about this post