ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-18 |
ಭಾರತವು ನಮ್ಮ ಶಾಸ್ತ್ರಗಳಲ್ಲಿ ಕರ್ಮಭೂಮಿ ಎಂಬ ಹೆಸರಿನಿಂದ ಪ್ರಸಿದ್ಧಿ ಗಳಿಸಿದೆ. ಇದಕ್ಕೆ ಕಾರಣ ಏನಿರಬಹುದು? ಎಂದು ನೋಡ ಹೊರಟರೆ ಇಲ್ಲಿನ ಜ್ಞಾನ, ಸಂಸ್ಕೃತಿಗಳೇ ಮೂಲ ಕಾರಣಗಳಾಗಿವೆ. ಭಾರತದ ಈ ಸಾಂಸ್ಕೃತಿಕ ಸಂಪತ್ತು ಹಾಗೂ ಜ್ಞಾನಭಂಡಾರವೆಂಬ ಅಯಸ್ಕಾಂತದ ಸೆಳೆತಕ್ಕೆ ಪ್ರಪಂಚದ ಮೂಲೆ ಮೂಲೆಯಿಂದ ಹಲವಾರು ರಾಜ್ಯ, ಸಾಮ್ರಾಜ್ಯಗಳು ಆಕರ್ಷಿತವಾಗಿರುವುದನ್ನು ನಾವು ನಮ್ಮ ಇತಿಹಾಸದಲ್ಲಿ ಕಾಣುತ್ತೇವೆ. ತನ್ನ ಜ್ಞಾನನಿಧಿ, ಆರೋಗ್ಯ ಶಕ್ತಿ, ಸಂಪತ್ತುಗಳಿಂದ ತನ್ನನ್ನು ಗುರುತಿಸಿಕೊಂಡು ಕರ್ಮಭೂಮಿ ಎನಿಸಿಕೊಂಡ ದೇಶ ನಮ್ಮ ಭಾರತ. ನಮ್ಮಲ್ಲಿನ ಈ ಅಗಾಧ ಜ್ಞಾನದ ಆಕರಗಳೇ ವೇದಗಳು. ಅಂತೆಯೇ ಸಾಧನೆಗೆ ಪೂರಕವಾದ ಆರೋಗ್ಯ ರಕ್ಷಣೆಯ ಆಕರ ಆಯುರ್ವೇದ. ರೋಗಮೂಲವನ್ನು ಗುರುತಿಸಿ ಪರಿಹಾರವನ್ನು ಹುಡುಕುವುದರಿಂದ ಶಾರೀರಿಕ ಹಾಗು ಮಾನಸಿಕ ಆರೋಗ್ಯವನ್ನು ಒದಗಿಸಬಲ್ಲ ವಿದ್ಯಾಧನವೇ ನಮ್ಮ ಆಯುರ್ವೇದ.
ರೋಗಲಕ್ಷಣಗಳನ್ನು ಗಮನಿಸಿ, ಒಳಹೊಕ್ಕು ಇಣುಕಿ ನೋಡುವ ವಿಶಿಷ್ಟ ಸಾಮರ್ಥ್ಯವನ್ನು ಆಯುರ್ವೇದವು ಹೊಂದಿದೆ. ಒಳಗಿನಿಂದ ಉದ್ಭವಿಸಿದ ಸಮಸ್ಯೆಗಳಿಗೆ ಒಳಗಿನಿಂದಲೇ ಪರಿಹಾರ ಕಂಡುಕೊಳ್ಳಬೇಕೆಂಬ ಧ್ಯೇಯವನ್ನು ಹೊಂದಿರುವ ಈ ಶಾಸ್ತ್ರವು ನೈಸರ್ಗಿಕವಾಗಿ, ಪ್ರಕೃತಿತಾಯಿಯೊಂದಿಗೆ ಹೊಂದಿಕೊಂಡು ಜೀವನ ಸಾಗಿಸುವ ಬಗೆಯನ್ನು ತೋರಿಸುತ್ತಾ ಬಂದಿದೆ. ಭಗವದ್ಗೀತಾದಿ ಗ್ರಂಥಗಳು ಉಲ್ಲೇಖಿಸುವಂತೆ ನಾವು ಸ್ವೀಕರಿಸುವ ಆಹಾರದ ಪರಿಣಾಮವೇ ನಮ್ಮ ಆರೋಗ್ಯ. ಈ ವಿಷಯವನ್ನು ಮನದಟ್ಟು ಮಾಡಿಕೊಂಡಿದ್ದ ನಮ್ಮ ಪೂರ್ವಜರು ಪ್ರತಿಯೊಬ್ಬರ ದೇಹಕ್ಕೆ ತಕ್ಕ ಪೋಷಣೆಯನ್ನು ನೀಡಬಲ್ಲ ಭೋಜನಕ್ಕೆ ಆದ್ಯತೆಯನ್ನಿತ್ತವರಾಗಿದ್ದರು. ಸಾತ್ವಿಕವಾದ ಆಹಾರವನ್ನು ಪರಿಶುದ್ಧವಾದ ಮನದಿಂದ ತಯಾರಿಸಿ, ಅದನ್ನು ಭುಂಜಿಸುವವರಾಗಿದ್ದರಿಂದ ಆ ಅನ್ನವು ನರನಾಡಿಗಳಲ್ಲಿ ಹೊಕ್ಕು, ವಪುವಿಗೆ ಅವಶ್ಯವಾದ ಆರೋಗ್ಯಭಾಗ್ಯವನ್ನು ಕರುಣಿಸುತ್ತದೆ. ತನ್ಮೂಲಕ ಹೃತ್ಕಮಲಕ್ಕೆ ಹೊಕ್ಕು ಸದ್ಭಾವ – ಸಚ್ಚಿಂತನೆಗಳನ್ನು ಮೂಡಿಸುತ್ತದೆ. ಮಾನಸಿಕ ಸ್ಥಿತಿಯು ಹದಗೆಡದೆ ಆಂತರಿಕ ಆರೋಗ್ಯವನ್ನು ಒದಗಿಸುತ್ತದೆ. ಸುಖಶಾಂತಿಗಳು ಮನವನ್ನು ತಬ್ಬಿಕೊಳ್ಳುತ್ತವೆ. ಇದರಿಂದ ಮಾನವನ ವ್ಯಕ್ತಿತ್ವವು ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದೆ ಎಂಬುದನ್ನು ಋಷಿಮುನಿಗಳ ಆದರ್ಶದ ಮೂಲಕ ಪ್ರತ್ಯಕ್ಷವಾಗಿ ನಾವು ಕಾಣಬಹುದು.
ಭಗವಂತನು ತಾನು ಒಬ್ಬರಿಂದ ಒಬ್ಬರನ್ನು ಭಿನ್ನವಾಗಿ, ವಿಶೇಷವಾಗಿ ಸೃಷ್ಟಿಸಿರುವಾಗ ಪ್ರತಿಯೊಬ್ಬನಿಗೂ ಏಕರೀತಿಯ ಚಿಕಿತ್ಸೆ, ಔಷಧಿಯು ಹೇಗೆ ತಾನೇ ಪ್ರಭಾವ ಬೀರೀತು? ಎಂಬ ವಿಚಾರಪಥದಲ್ಲಿ ಸಾಗುವುದು ಆಯುರ್ವೇದ. ವೈಯಕ್ತಿಕ ಸ್ವಭಾವವನ್ನು ಅರಿತು ಅದಕ್ಕನುಗುಣವಾಗಿ ಬೇರಿನಲ್ಲಿಯೇ ಪರಿಣಾಮ ಬೀರುವಂತಹ ಫಲಿತಾಂಶವನ್ನು ಕಂಡುಕೊಳ್ಳುವ ಮಾರ್ಗದಲ್ಲಿ ಹೆಜ್ಜೆ ಹಾಕುವುದು ಈ ವೇದಶಾಖೆ. ಇತರ ಚಿಕಿತ್ಸಾ ಪದ್ಧತಿಗಳಿಗೂ ಆಯುರ್ವೇದ ಜ್ಞಾನನಿಧಿಗೂ ಇರುವ ಗಮನಾರ್ಹ ವ್ಯತ್ಯಾಸವೇ ಇದು. ಅದರಿಂದಲೇ ಆಯುರ್ವೇದದ ಸ್ಥಾನಮಾನವು ಗಗನದೆತ್ತರಕ್ಕೆ ಏರುವುದು. ಪ್ರಕಾಶಮಾನ ತಾರೆಯಂತೆ ತಾರಾಪಥಕ್ಕೆ ಮತ್ತಷ್ಟು ಶೋಭೆಯನ್ನು ತರುವುದು. ಅಲೋಪತಿ ಮುಂತಾದ ಚಿಕಿತ್ಸಾವಿಧಿಗಳು ತಾತ್ಕಾಲಿಕ ಪ್ರಭಾವ ಬೀರುವ ಪದ್ಧತಿಗಳನ್ನು ಅವಲಂಬಿಸಸಿದ್ದರೆ, ಇತ್ತ ಆಯುರ್ವಿದ್ಯೆಯು ಆ ರುಜಿನವು ಮತ್ತೆ ಬಾರದಂತೆ ಹೊಣೆಯನ್ನು ವಹಿಸಿ ಚಿಕಿತ್ಸೆಯನ್ನು ಕೈಗೊಳ್ಳುತ್ತದೆ. ಆರೋಗ್ಯವು ಮತ್ತಷ್ಟು ದೃಢವಾಗುವುದು. ಅದರೊಂದಿಗೆ ಮಾನಸಿಕ ನೆಮ್ಮದಿಯೂ ಸಿದ್ಧಿಸಿ, ಅದು ಸುಖಸಂತೋಷಗಳಿಂದ ಭರಿತವಾದ ಜೀವನಕ್ಕೆ ಕಾರಣವಾಗುವುದು. ಆರೋಗ್ಯದೊಂದಿಗೆ ಜೀವನ ಶೈಲಿಯಲ್ಲಿಯೂ ಕ್ರಮೇಣ ಸ್ವಾಭಾವಿಕ ಬದಲಾವಣೆಗಳು ಕಂಡುಬರುತ್ತವೆ. ಸ್ವಧರ್ಮವನ್ನು ಕೈಗೊಳ್ಳಲು ಮತ್ತಷ್ಟು ಶಕ್ತಿಯು ತುಂಬಿಕೊಂಡು, ಅರ್ಥವ್ಯಯವು ಹೆಚ್ಚು ಪ್ರಮಾಣದಲ್ಲಾಗದೆ, ಮನದಾಳದ ಆಸೆಗಳು ಪೂರ್ತಿಯಾಗಿ, ಜೀವನನೀತಿಗಳನ್ನು ಮನವರಿತು ಕೊನೆಗೆ ಹರಿಯನ್ನು ಪಡೆಯುವ ದಾರಿಯಲ್ಲಿ ಮುನ್ನಡೆಯುವೆವು.
ಇಂತಹ ವಿಸ್ಮಯವೇ ಆದ ಆಯುರ್ವೇದದ ಪಿತೃವಾದ ಧನ್ವಂತರಿಯ ಮಹಾತ್ಮೆಯು ಭಾರತೀಯ ಮಹಾಗ್ರಂಥಗಳಲ್ಲಿ ಅಗಣಿತವಾಗಿದೆ. ಸಮುದ್ರಮಥನ ಕಾಲದಲ್ಲಿ ಉದಿಸಿದ ಈ ದೇವನ ರೂಪವು ಅಪಾರ ಜ್ಞಾನಸಂಪತ್ತಿನಿಂದ ಭಕ್ತರ ಕಣ್ತೆರೆಯಿತು. ಹರಿಯ ಈ ಅವತಾರವು ಬಲಗೈಯಲ್ಲಿನ ಜ್ಞಾನಮುದ್ರೆಯಿಂದ, ಎಡದಲ್ಲಿನ ಅಮೃತಕಲಶದಿಂದ, ಇನ್ನಿತರ ಕೈಗಳಲ್ಲಿನ ಶಂಖಚಕ್ರ ಹಾಗೂ ಗಿಡಮೂಲಿಕಗಳೊಂದಿಗೆ ಶೋಭಾಯಮಾನವಾಗಿದೆ. ದಾಸವರೇಣ್ಯರು ಪಾಡಿ ಕೊಂಡಾಡಿದಂತೆ ವೈದ್ಯಮೂರ್ತಿಯಾದ ಈ ದೇವನ ಸಂಸ್ಮರಣೆಯಿಂದ ಆಯುಷ್ಯ, ಆರೋಗ್ಯ ಹಾಗೆ ಐಶ್ವರ್ಯದ ಭಾಗ್ಯವೂ ಒಲಿಯುವುದು. ಶ್ರೇಯಸ್ಸು ಅದನ್ನು ಹಿಂಬಾಲಿಸಿ ಬರುವುದು. ಅಷ್ಟೇ ಏಕೆ? ಧನ್ವಂತರಿಯೊರ್ವನೇ ದೇವ , ಯಾವುದೇ ವ್ಯಾಧಿಯನ್ನು ಪರಿಹರಿಸುವ ಸಾಮರ್ಥ್ಯವುಳ್ಳವನು.
ಆಯುರ್ವೇದವನ್ನು ಅವಲಂಬಿಸುವುದರಿಂದ ಸಾವಿರಾರು ರೋಗರುಜಿನಗಳು, ಅದರ ಜೊತೆ ಜೊತೆಯಲ್ಲಿ ಬರುವ ದುಃಖದುಮ್ಮಾನಗಳು ನಶಿಸುತ್ತವೆ. ಶ್ರದ್ಧಾಭಕ್ತಿಯಿಂದ ಧನ್ವಂತರಿಯ ಜಪ ಮಾಡುವುದರಿಂದ ವ್ಯಾಧಿಗಳು ದೂರ ಸರಿಯುತ್ತವೆ. ಅಷ್ಟು ಪವಿತ್ರವಾದುದು ನಮ್ಮ ಜ್ಞಾನನಿಧಿ. ದೇಶವಿದೇಶದವರು ಇಚ್ಛಾಪೂರ್ವಕವಾಗಿ ನಮ್ಮ ವಿದ್ಯಾವಿತ್ತವನ್ನು ಅಪಹರಿಸುತ್ತಿರುವರೆಂಬ ವಿಚಾರವೂ ನಮ್ಮ ಮನವನ್ನು ಕಲುಕದೇ ಇರುವುದೇ ವಿಪರ್ಯಾಸ. ಅಧ್ಯಯನ ವಿಮುಖರಾಗಿ,ನಮ್ಮ ಇತಿಹಾಸದ ಅರಿವು ಮಾಡಿಕೊಳ್ಳದೇ ಅಡಿಗರ ಮಾತಿನಂತೆ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ” ಎಂಬಂತಾಗಿದೆ ನಮ್ಮ ಬದುಕು. ಇದರಿಂದಾಚೆ ಬರಬೇಕು. ನಮ್ಮಲ್ಲಿರುವ ಸತ್ವವನ್ನು ಅರಿತು, ನಮ್ಮ ಜೀವನದಲ್ಲಿ ಆ ಸತ್ವವನ್ನು ಅಳವಡಿಸಿಕೊಂಡು, ಆರೋಗ್ಯವಂತರಾಗಿ ಬಾಳಿ ನಮ್ಮ ಲ್ಲಿರುವ ಉತ್ತಮ ಗುಣಗಳನ್ನು ಇಡೀ ಪ್ರಪಂಚಕ್ಕೆ ಹಂಚಬೇಕಿರುವುದು ಪ್ರಪಂಚದ ಒಳಿತಿನ ದೃಷ್ಟಿಯಿಂದ ಅನಿವಾರ್ಯವಾಗಿದೆ. ಆರೋಗ್ಯವನ್ನು ಭಾಗ್ಯವಾಗಿಸಿಕೊಳ್ಳುವ ಸಾಮರ್ಥ್ಯ ನಮ್ಮ ಆಯುರ್ವೇದದಲ್ಲಿದೆ. ತಾಳ್ಮೆಯಿಂದ ಅರಿತು, ರೂಢಿಸಿಕೊಂಡು ಬದಲಾವಣೆಯತ್ತ ಹೆಜ್ಜೆ ಹಾಕಿದಲ್ಲಿ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಅಳಿಲು ಸೇವೆಯ ಪ್ರಯತ್ನಗೈದ ಧನ್ಯತಾಭಾವ ನಮ್ಮದಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post