ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯುಷ್ ಇಲಾಖೆಯು ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ವಿತರಣೆ ಮಾಡುತ್ತಿರುವ ಆಯುರ್ವೇದ ಔಷಧಗಳನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಸರ್ಕಾರಿ ನೌಕರರಿಗೆ ವಿತರಿಸಿದರು.
ಆಯುರ್ವೇದ ಔಷಧಗಳನ್ನು ವಿತರಿಸಿ ಮಾತನಾಡಿದ ಅವರು, ದೇಶದ ಹಲವಾರು ಕಡೆ ಆಯುರ್ವೇದೀಯ ಔಷಧಗಳನ್ನು ಮುಂಜಾಗರೂಕತಾ ಕ್ರಮವಾಗಿ ಆಯುಷ್ ಇಲಾಖೆಯ ವತಿಯಿಂದ ವಿತರಿಸಲಾಗುತ್ತಿದ್ದು, ಸದಾ ಸೇವೆ ನಿರ್ವಹಿಸುತ್ತಿರುವ ನೌಕರರು ತೀವ್ರ ಸಂಕಷ್ಟದಲ್ಲಿ ಸೋಂಕುಪೀಡಿತರ ಮಧ್ಯೆಯೇ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಔಷಧಗಳನ್ನು ಸರಿಯಾಗಿ ಸೇವಿಸಿ, ರೋಗನಿರೋಧಕ ಶಕ್ತಿಯನ್ನು ವರ್ಧಿಸಿಕೊಳ್ಳುವಂತೆ ಮನವಿ ಮಾಡಿದರು.
ಕೊರೋನಾ ರೋಗದ ಲಕ್ಷಣಗಳಿಗೆ ನಮ್ಮ ದೇಶದ ಸನಾತನ-ಸಾಂಸ್ಕೃತಿಕ ಪರಂಪರೆಯಲ್ಲಿ ಬಂದಿರುವ ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆಗಳು ಲಭ್ಯವಿದ್ದು, ವೈರಾಣುವಿನಿಂದ ನರಳಿ ಬಳಲುವುದಕ್ಕಿಂತ ರೋಗ ಬರುವ ಮೊದಲೇ ಆಯುರ್ವೇದೀಯ ಔಷಧಗಳನ್ನು ಸೇವಿಸಿ ಸುರಕ್ಷಿತವಾಗಿರುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.
ವಿಚಿತ್ರವೆಂದರೆ ನಮಗೆ ಅನ್ಯದೇಶದ ವೈದ್ಯಪರಂಪರೆಗಳ ಮೇಲೆ ಅನನ್ಯ ನಂಬಿಕೆ ಇದೆ. ಆದರೆ, ನಮ್ಮ ದೇಶದ, ಮಹರ್ಷಿಪ್ರಣೀತ, ಆಯುರ್ವೇದೋಕ್ತ ಚಿಕಿತ್ಸಾ ಪದ್ಧತಿಗಳ ಮೇಲೆ ಮಾತ್ರ ನಂಬಿಕೆ ಕಡಿಮೆ. ನಮ್ಮ ಚಿಕಿತ್ಸಾ ಪದ್ಧತಿಗಳನ್ನು ಒದಗಿಸಲು ನೂರೆಂಟು ಕಾನೂನು ತೊಡಕುಗಳಿವೆ. ಇಂತಹ ವಿಷಮ ಪರಿಸ್ಥಿತಿ ನಿವಾರಣೆಯಾಗಿ ಜನಸಾಮಾನ್ಯರಿಗೆ ನಮ್ಮ ಪರಂಪರಾಗತ ಆಯುರ್ವೇದೀಯ ಚಿಕಿತ್ಸಾ ಪದ್ಧತಿಗಳು ಸುಲಭವಾಗಿ, ಸರ್ವತ್ರ ಸಿಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ, ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಸಿ.ಎ. ಹಿರೇಮಠ, ಜಿಲ್ಲಾ ಕಾರ್ಯದರ್ಶಿ ಐ.ಪಿ. ಶಾಂತರಾಜ್, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್. ಮೋಹನಕುಮಾರ, ಪಾಪಣ್ಣ, ನಿರಂಜನಮೂರ್ತಿ, ಅರುಣಕುಮಾರ್, ಚೆನ್ನಪ್ಪ, ಗಣೇಶ ಮತ್ತಿತರರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post