ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-25 |
ರಾಮನಾಮಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎಂಬ ದಾಸರ ಮಾತು ಸಾರ್ವಕಾಲಿಕ ಸತ್ಯ. ರಾಮನಾಮವೇ ಹಾಗೆ ಸಿಹಿಯಾದ, ಸವಿಯಾದ, ರುಚಿಯಾದ ಪಾಯಸ ಸವಿದಂತೆ ಇಡೀ ಜಗತ್ತಿಗೆ ಪಿತನಾದವನು ಭಗವಂತ ರಾಮ ಅವತಾರವನ್ನು ತಾಳಿ ಮನುಷ್ಯ ಬದುಕಿದರೆ ಹೇಗೆ ಬದುಕಬೇಕೆಂದು ತಾವು ಮಾಡುವುದರ ಮೂಲಕ ತಿಳಿಸಿಕೊಟ್ಟವ ಕಲಿಸಿಕೊಟ್ಟವ. ರಾಮದೇವರ ಮಂದಿರ ದುಷ್ಟರಿಂದ ಧ್ವಂಸವಾದಾಗ ನಮ್ಮೆಲ್ಲರ ಹೃದಯ ಒಡೆದು ಹೋಗಿತ್ತು ಬದುಕಿದ್ದರೂ ಸತ್ತಂತೆ ಆಗಿದ್ದೆವು. ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ಎಂಬಂತೆ ಬಹಳಷ್ಟು ಜನರ ನಿರಂತರ ಹೋರಾಟಕ್ಕೆ ಬಲಿದಾನಗಳ ನಂತರ ಕೊನೆಗೂ ಫಲ ಸಿಕ್ಕಿತು. ಗುರುಗಳ ಸಂಕಲ್ಪ ನೆರವೇರಿತು. ಹೀಗೆ ರಾಮಮಂದಿರ ನಿರ್ಮಾಣವಾದ ಹಿನ್ನೆಲೆಯನ್ನು ನೋಡೋಣ.
ಸೂರ್ಯವಂಶದವರ ನೆಲೆ ಅಯೋಧ್ಯ. ಶ್ರೀರಾಮದೇವರು ಅಯೋಧ್ಯೆಯಲ್ಲಿ ತ್ರೇತಾಯುಗದಲ್ಲಿ ಅವತರಿಸಿದರು, ರಾವಣನ ಸಂಹಾರ ನಂತರ ರಾಮದೇವರು 10,000 ವರ್ಷಗಳ ಕಾಲ ರಾಜ್ಯಭಾರವನ್ನು ಮಾಡಿದರು ಮತ್ತೆ ಪರಂಧಾಮಕ್ಕೆ ತೆರಳಿದರು. ರಾಮ ತನಯನಾದ ಕುಶರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದರು. ಹೀಗೆ ಸುಮಾರು 500 ರಿಂದ 600 ವರ್ಷಗಳಿಗೊಮ್ಮೆ ದೇವಸ್ಥಾನ ಪುನರ್ ನಿರ್ಮಾಣವಾಗುತ್ತಿತ್ತು.
ಬಾಬರ್ ಭಾರತಕ್ಕೆ 1528 ರಲ್ಲಿ ಬಂದ, ಅದಕ್ಕಿಂತ ಮೊದಲೇ ಗುರುನಾನಕ್ ಅವರು ಅಯೋಧ್ಯೆಗೆ ಬಂದು ಎಚ್ಚರಿಕೆಯನ್ನು ಕೊಟ್ಟರು. ಬಾಬರ್ ದೇವಾಲಯವನ್ನು ಒಡೆದು ಹಾಕಿ ಮಸೀದಿಯನ್ನು ಕಟ್ಟಿದ. ನಾವು ಭಾರತೀಯರು ಏನನ್ನು ಬೇಕಾದರೂ ಸಹಿಸಬಹುದು ಆದರೆ, ಧರ್ಮಕ್ಕೆ ಆದ ಅಪಚಾರವನ್ನು ಮಾತ್ರ ಸಹಿಸಲಾರರು. ಅಂದಿನಿಂದ ಅನೇಕ ಬಾರಿ ನಿರಂತರವಾಗಿ ಹೋರಾಟವು ನಡೆದಿದೆ ಆದರೆ ಯಶಸ್ವಿಯಾಗಲಿಲ್ಲ. 76 ಬಾರಿ ಹೋರಾಟಗಳಾಗಿ, 3500 ಮಹಿಳೆಯರು ಶಸ್ತ್ರವನ್ನು ಹಿಡಿದು ಹೋರಾಡಿದ್ದಾರೆ. ಸಾಧುಸಂತರು ಹೋರಾಡಿದ್ದಾರೆ. ಗುರು ಗೋವಿಂದ ಸಿಂಗ್ ರವರ ನೇತೃತ್ವದಲ್ಲಿ ಹೋರಾಟ ನಡೆದಿದೆ. 1949 ಡಿಸೆಂಬರ್ 22ರಂದು ಮಸೀದಿಯ ಒಳಗೆ ರಾಮದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತು. 1984 ಹಿಂದೂ ಸಮ್ಮೇಳನದ ನಂತರ ಸಂತರಿಂದ ರಾಮ್ ಜಾನಕಿ ರಥ ಯಾತ್ರೆ ಪ್ರಾರಂಭವಾಯಿತು. ರಕ್ಷಣೆಗಾಗಿ ಅಶೋಕ್ ಸಿಂಗಲ್ ಅವರು ಯುವಕರ ಭಜರಂಗದಳ ಎಂಬ ಸಂಘದಿಂದ ದಂಡ ಹಿಡಿದು ರಕ್ಷಣೆ ಮಾಡಲು ಪ್ರೇರೇಪಿಸಿದರು.
ನಂತರ 1985 ಉಡುಪಿಯಲ್ಲಿ ಧರ್ಮ ಸಂಸತ್ ನಡೆಯಿತು ಅಲ್ಲಿಂದ ಅಯೋಧ್ಯಗೆ ಎಚ್ಚರಿಕೆಯನ್ನು ನೀಡಲಾಯಿತು. ಡಿಸೆಂಬರ್ ಆರನೇ ತಾರೀಕಿಗೆ ಬಾಗಿಲುಗಳನ್ನು ತೆಗೆಯಿರಿ ಇಲ್ಲವಾದಲ್ಲಿ ಘೋರ ಕದನ ನಡೆಸುತ್ತೇವೆ ಎಂದು ಎಲ್ಲೆಡೆ ಘೋಷಿಸಿದರು. ನಂತರ ಅಯೋಧ್ಯೆಯ ಮಸೀದಿಯ ಬಾಗಿಲನ್ನು ತೆರೆಯಲು ಸರ್ಕಾರವು ಆದೇಶಸಿತು. 1989 ಅಯೋಧ್ಯೆಯ ಮಸೀದಿಯ ಮುಂದೆ ಕಾಮೇಶ್ವರ್ ಚೌಪಾಲರಿಂದ ಶಿಲಾನ್ಯಾಸವು ನಡೆಯಿತು. ಆಗ ಮುಲಾಯಂ ಸಿಂಗ್ ಸರ್ಕಾರವಿತ್ತು. ಉತ್ತರ ಪ್ರದೇಶದ ಗಡಿಗಳಲ್ಲಿ ಕಂದಕಗಳನ್ನು ಕಟ್ಟಿದರು. ಹಾಗೆಯೇ ತಪ್ಪಿಸಿಕೊಂಡು ಎರಡುವರೆ ಲಕ್ಷ ಜನ ಸೇರಿದರು.
ಅಕ್ಟೋಬರ್ 30 ನೇ ತಾರೀಕು ಎಲ್ಲರೂ ಬಾಬರ್ ಮಸೀದಿಯ ಮುಂದೆ ನೆಲೆಸಿದ್ದರು. ಇದ್ದಕ್ಕಿದ್ದಂತೆ ಒಂದು ಮಿಲಿಟರಿ ಟ್ರಕ್ ನಲ್ಲಿ ಒಬ್ಬರು ಕುಳಿತುಕೊಂಡು ರಭಸದಿಂದ ಬಂದು ಬ್ಯಾರಿಕೇಡ್ಗಳಿಗೆ ಗುದ್ದಿದರು, ನಂತರ ಅವರು ಎಲ್ಲಿಯೂ ಸಿಗಲಿಲ್ಲ. ಆತ ರಾಮರ ಸೇವೆಗಾಗಿ ರಾಮದೂತ ಹನುಮಂತನೆ ಬಂದಿರಬೇಕೆಂದು ಜನರ ನಂಬಿಕೆಯಾಗಿದೆ. ನಂತರ ಎಲ್ಲರೂ ಒಳಗೆ ನುಗ್ಗಿ, ಧ್ವಜವನ್ನು 11:00 ಗಂಟೆಗೆ ಹಾರಿಸಿದರು.
ಕೋಪದಿಂದ ಮುಲೈಮ್ ಸಿಂಗ್ ಗೋಳಿಬಾರ್ ಮಾಡಿಸಿದ. ಎಷ್ಟೋ ಜನರ ಬಲಿದಾನವಾಯಿತು. ಎರಡು ವರ್ಷಗಳ ನಂತರ 1992, ಡಿಸೆಂಬರ್ 6 ರಂದು ಜನರು ಸೇರಿ ಬಾಬರ್ ಮಸೀದಿಯನ್ನು ಒಡೆದು ಹಾಕಿದರು. ಆಗ ಕಲ್ಯಾಣ ಸಿಂಗ್ ರವರ ಸರ್ಕಾರವಿತ್ತು, ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಮಸೀದಿಯ ನಿರ್ನಾಮವಾದ ನಂತರ ರಾಜಕೀಯದಿಂದ ಹೊರಗೆ ಬಂದರು. ಮಸೀದಿಯನ್ನು ಒಡೆದ ನಂತರ ಎಲ್ಲರೂ ಉತ್ಸಾಹದಿಂದ ಹೊರಟರು, ಆದರೆ ಪೇಜಾವರ ಮಠದ ವಿಶ್ವೇಶ ತೀರ್ಥರು ಹೊರಡಲಿಲ್ಲ. ಯಾಕೆಂದರೆ ಪೂಜೆಯು ನಡೆಯಬೇಕು ಎಂದು ಕೆರೆಸಿ ಪೂಜೆಯನ್ನು ಮಾಡಿಸಿ ಹೊರಟರು.
ನಂತರ 2010 ರಲ್ಲಿ ಉಚ್ಚ ನ್ಯಾಯಾಲಯವು ಮೂರು ಭಾಗವನ್ನು ಮಾಡಿರಿ ಎಂದು ಆದೇಶವಿತ್ತು. ನಂತರ ಸರ್ವೋಚ್ಚ ನ್ಯಾಯಾಲಯವು 2019 ನವೆಂಬರ್ 9 ರಂದು ಎಲ್ಲಾ ಐದು ನ್ಯಾಯಾಧೀಶರು ಒಂದೇ ನ್ಯಾಯವನ್ನು ಬರೆದು ಸಹಿ ಹಾಕಿ 70 ಎಕರೆ ಭೂಮಿ ರಾಮಮಂದಿರಕ್ಕಾಗಿ ಕೊಟ್ಟರು. ಶ್ರೀ ವಿಶ್ವೇಶ ತೀರ್ಥರು ತೀರ್ಪು ಬರುವವರೆಗೂ ಉಸಿರನ್ನು ಬಿಗಿ ಹಿಡಿದಿದ್ದರು . ತೀರ್ಪು ಬಂದ ನಂತರ ಹರಿಪಾದ ಸೇರಿದರು. ಅವರ ಶ್ರಮ ಫಲ ಕೊಟ್ಟಿತು.
ದೊಡ್ಡ ಗುರುಗಳ ಕನಸಾದ, ಕೋಟ್ಯಾಂತರ ಹಿಂದೂಗಳ ಆರಾಧ್ಯ ದೈವ ರಾಮಮಂದಿರ ನಿರ್ಮಾಣದ ನಂತರ ಮುದ್ದು ಬಾಲರಾಮನ ಪ್ರತಿಷ್ಠಾಪನೆ ಪೂಜೆಗೆ ಸಾಕ್ಷಿಯಾಗಿ ನಿಂತವರು ನಮ್ಮ ಶ್ರೀ ವಿಶ್ವಪ್ರಸನ್ನ ತೀರ್ಥರು. ಬಾಲರಾಮನ ಪ್ರತಿಷ್ಠಾಪನೆಯಾದ ತಕ್ಷಣ, ಇಡೀ ಭೂಮಂಡಲದ ಕಣಕಣವು , ಮನೆ ಮನಗಳಲ್ಲವು ರಾಮಮಯವಾಗಿತ್ತು. ರಾಮನಾಮದ ಜಯಕಾರ ಮುಗಿಲು ಮುಟ್ಟುವಂತಿತ್ತು. ಮೈಮನವೆಲ್ಲ ರಾಮ ರಾಮ ರಾಮ ಎನ್ನುತ್ತಾ ಈ ಐತಿಹಾಸಿಕ ಕ್ಷಣಗಳಿಗೆ ನಾವೆಲ್ಲಾ ಸಾಕ್ಷಿಯಾಗಿರುವುದು ನಮ್ಮ ಪೂರ್ವಜನ್ಮದ ಸುಕೃತವೇ ಸರಿ.
2024 ಜನವರಿ 22,ರಂದು ಅಯೋಧ್ಯೆಯಲ್ಲಿ ನರೇಂದ್ರ ದಾಮೋದರ್ ದಾಸ್ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನವಾಯಿತು. ಹೀಗೆಯೇ ನಮ್ಮೆಲ್ಲರ ಮನದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಬೇಕು.
ಶ್ರೀ ಕೃಷ್ಣಾರ್ಪಣ ಮಸ್ತು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post