ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಗರ್ಭಿಣಿ ಮಹಿಳೆಯರು ಗರ್ಭಿಣಿ ಅವಧಿಯಲ್ಲಿ ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗಬಾರದು. ಗಂಡಾಂತರಕಾರಿ ಚಿಹ್ನೆಗಳಿದ್ದಲ್ಲಿ ಹೆರಿಗೆಯ 3 ದಿನ ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಮೂಲಕ ವೈದ್ಯರ ನಿಗಾವಣೆಯಲ್ಲಿದ್ದುಕೊಂಡು ಸರಳ ಹೆರಿಗೆಗೆ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಬಳ್ಳಾರಿ ತಾಲ್ಲೂಕಿನ ಹಡ್ಲಿಗಿ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಟುಂಬಗಳು ಹೆಚ್ಚು ವಾಸಿಸುವ ಸ್ಥಳಗಳಿಗೆ ತೆರಳಿ ಕಾಲುಬಾವು ಕಂಡುಬಂದ ತೊಡಕಿನ ಗರ್ಭಿಣಿಯನ್ನು ಗುರ್ತಿಸಿ ತಾಯಿ ಕಾರ್ಡ್ ಇತರೆ ದಾಖಲಾತಿ ಪರಿಶೀಲಿಸಿ ಕುಟುಂಬದ ಸದಸ್ಯರೊಂದಿಗೆ ಅವರು ಮಾತನಾಡಿದರು.

ಗರ್ಭಿಣಿಯಲ್ಲಿ ಅಪಾಯಕಾರಿ ಚಿಹ್ನೆಗಳು ಕಂಡುಬಂದಲ್ಲಿ ಹೆರಿಗೆಯ 3 ದಿನ ಪೂರ್ವದಲ್ಲಿ ಆಸ್ಪತ್ರೆಗೆ ದಾಖಲಿಸುವ ಜೊತೆಗೆ ತಮ್ಮ ಮನೆ ಮಗಳು ಅಥವಾ ತಮ್ಮ ಮನೆಯ ಸೊಸೆ ಸಂತಸದಿಂದ ನವಜಾತ ಶಿಶುವಿನೊಂದಿಗೆ ಮನೆಗೆ ತೆರಳುವ ಅವಕಾಶಕ್ಕೆ ಕೈಗೂಡಿಸಬೇಕು ಎಂದು ವಿನಂತಿಸಿದರು.

ಹೆರಿಗೆ ಅವಧಿಯಲ್ಲಿ ಕಂಡು ಬರಬಹುದಾದ ಸಂಭವನಿಯ ತೊಂದರೆಗಳನ್ನು ವೈದ್ಯರ ನಿಗಾವಣೆ ಮೂಲಕ ಗುರ್ತಿಸಿ ಸುರಕ್ಷಿತ ಹೆರಿಗೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಗರ್ಭಿಣಿ ಅವಧಿಯಲ್ಲಿ ಮಹಿಳೆಗೆ ಪೌಷ್ಟಿಕ ಆಹಾರ ಒದಗಿಸುವ ವ್ಯವಸ್ಥೆ ಸಹ ಕಲ್ಪಿಸಲಾಗುವುದು. ಗರ್ಭಿಣಿಯ ಪಾಲಕರು ಇದರ ಸದುಪಯೋಗ ಪಡೆದು ತಾಯಿ ಮಗುವಿನ ಆರೈಕೆಗೆ ಪೂರಕವಾಗಬೇಕು ಎಂದರು.

ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180 ಮಾತ್ರೆ ಮತ್ತು ಒಂದು ವೇಳೆ ರಕ್ತಹೀನತೆಯ ಪ್ರಮಾಣ ತೀವ್ರವಾಗಿದ್ದಲ್ಲಿ ದಿನಕ್ಕೆ 2 ರಂತೆ 360 ಮಾತ್ರೆಗಳನ್ನು 6 ತಿಂಗಳ ಅವಧಿಯಲ್ಲಿ ಸೇವಿಸುವಂತೆ ಇದರ ಜೊತೆಯಲ್ಲಿ ದೈಹಿಕವಾಗಿ ಸದೃಢವಾಗಿರಲು ಕ್ಯಾಲ್ಸಿಯಮ್ ಮಾತ್ರೆಗಳನ್ನು ಸಹ ನುಂಗುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಆಶಾಕಾರ್ಯಕರ್ತೆಯರಾದ ಗಂಗಮ್ಮ, ಶಶಿಕಲಾ, ರತ್ನಮ್ಮ ಸೇರಿದಂತೆ ಸಿಬ್ಬಂದಿಯವರು ತಾಯಂದಿರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post