ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ರಾಜ್ಯದಲ್ಲಿ ಐಪಿ ಸೆಟ್ ಆರ್.ಆರ್. ನಂಬರ್‌ಗೆ ಆಧಾರ್ ಸಂಖ್ಯೆ ಲಿಂಕ್ ಮಾಡುತ್ತಿರುವುದು ದಾಖಲಾತಿಗಾಗಿ ಮಾತ್ರವೇ ಹೊರತು ಬೇರೆ ಉದ್ದೇಶವಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ #K J George ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಇಲಾಖೆ ಅಧಿಕಾರಿಗಳೊಂದಿಗಿನ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಇಂಧನ ಸಚಿವರು, ಐಪಿ ಸೆಟ್ ಗಳ ಸಂಖ್ಯೆ ತಿಳಿದುಕೊಂಡು ಸಮರ್ಪಕ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ ಐಪಿ ಸೆಟ್ ಗಳ ಆರ್.ಆರ್. ನಂಬರ್ ಗೆ ಆಧಾರ್ ಸಂಖ್ಯೆ ಜೋಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

“ಬರಗಾಲದ ಸಂದರ್ಭದಲ್ಲೂ ರಾಜ್ಯದ ರೈತರಿಗೆ ದಿನದ ಏಳು ಗಂಟೆ ವಿದ್ಯುತ್ ಪೂರೈಸಲಾಗಿದೆ. ಲೋಡ್ ಶೆಡ್ಡಿಂಗ್ ಮಾಡಿಲ್ಲ. ಭವಿಷ್ಯದಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಲಭ್ಯವಿರುತ್ತದೆ. ಆದರೂ ಬೇರೆ ಬೇರೆ ಕಾರಣಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿದೆ. ಈ ಸಮಸ್ಯೆ ಬಗೆಹರಿಸಿ ಸಮರ್ಪಕ ವಿದ್ಯುತ್ ಪೂರೈಕೆ ಉದ್ದೇಶದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲು ನಿರ್ಧರಿಸಿದ್ದೇನೆ”, ಎಂದು ಹೇಳಿದರು.

ವರ್ಗಾವಣೆ ತಡೆಗಟ್ಟಲು ಏಕಕಾಲದಲ್ಲಿ ಲೈನ್ ಮೆನ್ ಗಳ ನೇಮಕ
“ರಾಜ್ಯದಲ್ಲಿ 2000 ಲೈನ್ ಮೆನ್ ಗಳ ನೇಮಕಕ್ಕೆ ಇನ್ನು 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ಸಾಮಾನ್ಯವಾಗಿ ಲೈನ್ ಮೆನ್ ಗಳ ನೇಮಕ ವೇಳೆ ಒಂದು ಜಿಲ್ಲೆಯವರು ಇನ್ನೊಂದು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿ ನೇಮಕಗೊಳ್ಳುತ್ತಾರೆ. ಬಳಿಕ ತಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಇದರಿಂದ ಕೆಲವು ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಲೈನ್ ಮೆನ್ ಗಳ ಕೊರತೆಯಾಗುತ್ತದೆ. ಈ ಹಿನ್ನೆಲೆಯಲ್ಲಿ 2000 ಲೈನ್ ಮೆನ್ ಗಳನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಆಯಾ ಜಿಲ್ಲೆಯವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ನೇಮಕ ಪ್ರಕ್ರಿಯೆ ನಡೆಸಲಾಗುವುದು”, ಎಂದರು.

ಸಭೆಯಲ್ಲಿ ಶಾಸಕರಾದ ಕಂಪ್ಲಿ ಗಣೇಶ್, ಬಿ.ಎಂ.ನಾಗರಾಜ್, ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post