ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಜೀವಕ್ಕೆ ಅಪಾಯ ಒದಗಿಸಬಹುದಾದ ಸೊಳ್ಳೆ ಕಚ್ಚುವಿಕೆಯಿಂದ ಬರುವ ಡೆಂಗ್ಯೂ, ಮಲೇರಿಯಾ, ಚಿಕಿನ್ ಗುನ್ಯಾ ಸೇರಿದಂತೆ ಆನೆಕಾಲು ರೋಗ ಮುಂತಾದವುಗಳನ್ನು ತಡೆಗಟ್ಟಲು ಮಳೆಗಾಲ ಪ್ರಾರಂಭವಾಗುವ ಪೂರ್ವದಲ್ಲಿಯೇ ರೋಗ ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳು ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ, ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ಕುರಿತು ಹಮ್ಮಿಕೊಂಡಿದ್ದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳು, ರಸ್ತೆ ಸಾರಿಗೆ ಸಂಸ್ಥೆ, ಶಿಕ್ಷಣ ಇಲಾಖೆ, ನೀರಾವರಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಮ್ಮ ಜವಾಬ್ದಾರಿಯನ್ನು ಅರಿತು ಆರೋಗ್ಯ ಇಲಾಖೆಯ ಕೈಗೊಳ್ಳುವ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಎಲ್ಲಾ ಸರ್ಕಾರಿ ಕಚೇರಿಗಳ ಮೇಲ್ಛಾವಣೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ, ಅಡಚಣೆ ಉಂಟುಮಾಡುವ ಕಸ, ಕಡ್ಡಿಗಳನ್ನು ಸ್ವಚ್ಛಗೊಳಿಸಬೇಕು. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಣ ಮಾಡುವ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೈಗಾರಿಕಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಲಸೆ ಬರುವ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ರೋಗ ಹರಡದಂತೆ ಕ್ರಮ ವಹಿಸಬೇಕು. ಶಾಲೆಗಳು ಆರಂಭವಾದ ನಂತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮುಂಜಾಗ್ರತೆ ಕುರಿತು ಶಾಲಾ ಮಕ್ಕಳಿಗೆ ಹಾಗೂ ಜನತೆಗೆ ಜಾಗೃತಿ ನೀಡಲು ಕ್ರಮ ವಹಿಸಲು ಕ್ರಿಯಾಯೋಜನೆ ರಚಿಸಿ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಎಸ್.ಎಮ್.ಒ ಡಾ.ಆರ್.ಎಸ್.ಶ್ರೀಧರ್ ಅವರು ರೋಗಗಳ ನಿಯಂತ್ರಣ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್. ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post