ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ಎಲ್ಲಾ ರೀತಿಯ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದ್ದು, ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಇದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆರೋಗ್ಯ ಸಮಿತಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಎಲ್ಲಾ ಸರ್ಕಾರಿ ಕಚೇರಿಗಳು ಆರಂಭವಾಗಿದ್ದು, ಕಚೇರಿಗೆ ಆಗಮಿಸುವ ಸಾರ್ವಜನಿಕರ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿ ನಡೆಸಬೇಕು. ಸರಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತವಾಗಿ ಕೀಟನಾಶಕ ಸಿಂಪಡಣೆ ಕಾರ್ಯವನ್ನು ಕೈಗೊಳ್ಳಬೇಕು ಎಂದರು.
ಯಾವುದೇ ಸಭೆ, ಸಮಾರಂಭಗಳಲ್ಲಿ 10ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಈಗಾಗಲೇ ಅನುಮತಿ ನೀಡಲಾಗಿರುವ ಕಾರ್ಖಾನೆಗಳು ತಮ್ಮ ಕಾರ್ಮಿಕರಿಗೆ ಕಡ್ಡಾಯವಾಗಿ ವೈದ್ಯಕೀಯ ವಿಮೆಯನ್ನು ಮಾಡಬೇಕು. ಕಂಪೆನಿಗಳು ಶಿಫ್ಟ್ ನಡುವೆ ಕನಿಷ್ಟ ಒಂದು ಗಂಟೆ ಕಾಲ ಅಂತರ ನೀಡಬೇಕು. ಊಟದ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಸೇರುವುದನ್ನು ತಪ್ಪಿಸಲು ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ಸಮೀಕ್ಷೆ
ಜಿಲ್ಲೆಯಲ್ಲಿ ಇದುವರೆಗೆ 11 ಲಕ್ಷ ಜನರ ಆರೋಗ್ಯ ತಪಾಸಣಾ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.
ಆಶಾ ಕಾರ್ಯಕರ್ತೆಯರು ಇದುವರೆಗೆ ನಗರ ವ್ಯಾಪ್ತಿಯಲ್ಲಿ 1.28 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಳಿಸಿದ್ದು, 5.16ಲಕ್ಷ ಜನರ ಆರೋಗ್ಯ ಸಮೀಕ್ಷೆ ಕೈಗೊಂಡಿದ್ದಾರೆ. ಇವರ ಪೈಕಿ 168 ಮಂದಿಯ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ. ಇದೇ ವೇಳೆ ಗ್ರಾಮೀಣ ಪ್ರದೇಶದಲ್ಲಿ 1.78 ಲಕ್ಷ ಮನೆಗಳಿಗೆ ಭೇಟಿ ನೀಡಿ 7.64ಜನರ ಆರೋಗ್ಯ ಸಮೀಕ್ಷೆ ನಡೆಸಲಾಗಿದೆ. ಒಟ್ಟು 77 ಮಂದಿಯ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕಾರ್ಯವನ್ನು ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಂಡು ಪ್ರತಿದಿನ ವರದಿಯನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ಮೊದಲಾದವರಿದ್ದರು.
Get in Touch With Us info@kalpa.news Whatsapp: 9481252093
Discussion about this post