ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ನೇತೃತ್ವದ ನಿಯೋಗ ಇಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ, ಸರ್ಕಾರ ಹಮ್ಮಿಕೊಂಡಿರುವ ವನಮಹೋತ್ಸವದ ಭಾಗವಾಗಿ ರಾಜ್ಯದಾದ್ಯಂತ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ 10 ಲಕ್ಷ ಸಸಿ ನೆಡಲು ನೆರವು ಕೋರಿತು.
ಇದಕ್ಕೆ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ, Minister Eshwar Khandre ರಾಜ್ಯದಲ್ಲಿ ಈ ವರ್ಷ 5 ಕೋಟಿ ಸಸಿ ನೆಟ್ಟು ಬೆಳೆಸುವ ಸಂಕಲ್ಪವನ್ನು ಸರ್ಕಾರ ಮಾಡಿದ್ದು, ಅರಣ್ಯ ಇಲಾಖೆಯ ವೃಕ್ಷಾಂದೋಲನದಲ್ಲಿ ಕೈಜೋಡಿಸುವಂತೆ ತಿಳಿಸಿ, 10 ಲಕ್ಷ ಸಸಿಗಳನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದರು.
ಚಿಣ್ಣರ ವನ ದರ್ಶನ: ಅರಣ್ಯ ಪ್ರದೇಶದಲ್ಲಿ ಡೇರೆ ನಿರ್ಮಿಸಿ, ಮಕ್ಕಳು ಅರಣ್ಯದಲ್ಲೇ ಉಳಿದು ಪ್ರಾಣಿ, ಪಕ್ಷಿ ಮತ್ತು ಅರಣ್ಯದ ಬಗ್ಗೆ ಅರಿಯಲು ಅನುವಾಗುವ ಚಿಣ್ಣರ ವನ ದರ್ಶನ ಕಾರ್ಯಕ್ರಮದ ಅಡಿಯಲ್ಲಿ ಸ್ಕೌಟ್ಸ್ ಮತ್ತು ಗ್ರೈಡ್ಸ್ ಗೆ ಆದ್ಯತೆ ನೀಡಬೇಕು ಎಂಬ ಮನವಿಯನ್ನೂ ಪುರಸ್ಕರಿಸುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.
Also read: ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ನೂತನ ರಾಜ್ಯಾಧ್ಯಾಕ್ಷರ ನೇಮಿಸಿದ ಬಿಜೆಪಿ
ಕಾಡ್ಗಿಚ್ಚು ಕಾಣಿಸಿಕೊಂಡಾಗ ಸ್ಕೌಟ್ಸ್ ವಿದ್ಯಾರ್ಥಿಗಳು ಪ್ರಕೃತಿ ಯೋಧರಾಗಿ ಅರಣ್ಯ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಬೆಂಕಿ ನಂದಿಸಲು ನೆರವು ನೀಡುತ್ತಿರುವುದಕ್ಕೆ ಅರಣ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದ ಹಸಿರು ವ್ಯಾಪ್ತಿ ಹೆಚ್ಚಳಕ್ಕೆ ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ., ಎನ್.ಎಸ್.ಎಸ್., ಸ್ವಯಂ ಸೇವಾ ಸಂಸ್ಥೆಗಳು, ಮಹಿಳಾ ಸ್ವ ಸಹಾಯ ಸಂಘಗಳು, ಅಂಗನವಾಡಿ ಕಾರ್ಯಕರ್ತರು, ವಿವಿಧ ಕಾರ್ಮಿಕ ಸಂಘಟನೆಗಳು ಎಲ್ಲರೂ ಒಟ್ಟಿಗೆ ಕೈಜೋಡಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ, ಪಿಸಿಸಿಎಫ್ ರಾಜೀವ್ ರಂಜನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post