ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ನೀತಿ ಆಯೋಗ ಅಭಿವೃದ್ಧಿ ಪಡಿಸಿದ 2020-21 ನೇ ಸಾಲಿನ ಸುಸ್ಥಿತರ ಅಭಿವೃದ್ಧಿ ಗುರಿ (ಎಸ್‍ಡಿಜಿ) ಸೂಚ್ಯಂಕವು ಬಿಡುಗಡೆಯಾಗಿದ್ದು, ಕರ್ನಾಟಕ ರಾಜ್ಯವು ನಾಲ್ಕನೇ ಸ್ಥಾನಕ್ಕೆ ಏರಿರುವುದಕ್ಕೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹರ್ಷ ವ್ಯಕ್ತಪಡಿಸಿದ್ದಾರೆ. 2019-20ನೇ ಸಾಲಿನ ಅಂಕಪಟ್ಟಿಯಲ್ಲಿ 66 ಅಂಕದಲ್ಲಿದ್ದ ಕರ್ನಾಟಕವು ಪ್ರಸಕ್ತ ಸಾಲಿನಲ್ಲಿ 72 ಅಂಕಗಳೊಂದಿಗೆ 6 ನೇ ಸ್ಥಾನದಿಂದ 4 ನೇ ಸ್ಥಾನಕ್ಕೆ ಜಿಗಿದಿದೆ.
ಸಚಿವ ಡಾ. ನಾರಾಯಣಗೌಡ ಅವರು ಅಧಿಕಾರಿಗಳ ಜೊತೆಯಲ್ಲಿ ನಿರಂತರ ಸಭೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದ್ದರು. ಅಧಿಕಾರಿಗಳ ಶ್ರಮ ಹಾಗೂ ಸಮಯೋಚಿತ ಕಾರ್ಯಾನುಷ್ಠಾನದ ಪರಿಣಾಮದಿಂದಾಗಿ ಸುಸ್ಥಿತರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯ 4ನೇ ಸ್ಥಾನ ಪಡೆದುಕೊಂಡಿದೆ. ಬಡತನ ಮುಕ್ತ, ಹಸಿವು ಮುಕ್ತ, ಲಿಂಗಸಮಾನತೆ, ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಲಭ್ಯ ಹಾಗೂ ಸುಸ್ಥಿರ ನಗರಗಳು ಮತ್ತು ಸಮುದಾಯಗಳ ವಿಭಾಗದಲ್ಲಿ ಸಹ ರಾಜ್ಯವು ಉತ್ತಮ ಸಾಧನೆ ಮೂಲಕ ಉನ್ನತ ಮಟ್ಟಕ್ಕೇರಿದೆ.
ಹೆಚ್‍ಐವಿ ಮುಕ್ತದತ್ತ ಕರ್ನಾಟಕ ರಾಜ್ಯ:
ರಾಜ್ಯದಲ್ಲಿ ಹೆಚ್‍ಐವಿ ಪ್ರಕರಣ ಶೇ. 0.02 ಆಗಿದ್ದು, ಕರ್ನಾಟಕ ಸಂಪೂರ್ಣ ಹೆಚ್‍ಐವಿ ಮುಕ್ತವಾಗುವತ್ತ ಸಾಗಿದೆ. ಮಕ್ಕಳ ಸಾಂಸ್ಥಿಕ ಹೆರಿಗೆ ಪ್ರಮಾಣ ಸಹ ಶೇ. 99.9 ರಷ್ಟು ಇದೆ. ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆಗೆ 28.4 ಮೆಗಾವ್ಯಾಟ್ ಹೊಂದಿರುವ ಅತಿ ಹೆಚ್ಚು ಗ್ರಿಡ್ ಇಂಟರ್ಯಾಕ್ಟಿವ್ ಜೈವಿಕ ಶಕ್ತಿಯನ್ನು ಹೊಂದಿದೆ. ಪ್ರತಿ ಮಿಲಿಯನ್ ಹೆಕ್ಟೇರ್ ಸಂರಕ್ಷಿತ ಪ್ರದೇಶಕ್ಕೆ ಶೇ. 5ಕ್ಕಿಂತ ಕಡಿಮೆ ವನ್ಯಜೀವಿ ಅಪರಾಧ ಪ್ರಕರಣಗಳಿವೆ. ಎಸ್‍ಡಿವಿ ವಿಷನ್ 2030ಕ್ಕೆ ನಿಗದಿಪಡಿಸಿದ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಕರ್ನಾಟಕವು ದಾಪುಗಾಲಿಟ್ಟಿದೆ. ಯೋಜನಾ ಇಲಾಖೆಯು ಕರ್ನಾಟಕದಲ್ಲಿ ಸುಸ್ಥಿರ ಗುರಿಗಳನ್ನು ಸಾಧಿಸುವಲ್ಲಿ ನೋಡಲ್ ಇಲಾಖೆಯಾಗಿದೆ. 2020ರಲ್ಲಿ ಯೋಜನಾ ಇಲಾಖೆಯಲ್ಲಿ ಯುಎನ್‍ಡಿಪಿಯ ಸಹಯೋಗದೊಂದಿಗೆ ಸುಸ್ಥಿರ ಗುರಿಗಳ ಸಮನ್ವಯ ಕೇಂದ್ರವನ್ನೂ ಸ್ಥಾಪಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯವು 6 ರಿಂದ 4 ನೇ ಸ್ಥಾನಕ್ಕೆ ಜಿಗಿದಿದ್ದು, ಮುಂಬರುವ ವರ್ಷಗಳಲ್ಲಿ ಕರ್ನಾಟಕವು ಸುಸ್ಥಿತರ ಅಭಿವೃದ್ಧಿ ಗುರಿ (ಎಸ್‍ಡಿಜಿ) ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆಯುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ. ಅಲ್ಲದೆ ಯೋಜನೆ, ಕಾರ್ಯಕ್ರಮ ಸಂಯೋಜನೆ, ಸಾಂಖ್ಯಿಕ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳ ಕಾರ್ಯವನ್ನು ಸಚಿವರು ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post