ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೋವಿಡ್ ಮೂರನೇ ಅಲೆ ಎದುರಿಸಲು ಸಹಕಾರಿ ಆಗುವಂತೆ ನಗರದಲ್ಲಿ ಲಸಿಕೀಕರಣ ಮಾಡಲು ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯ ನೀಡುವ ಆಕ್ಟ್ ಫೈಬರ್ ನೆಟ್ ಕಂಪನಿ 50,000 ಕೋವಿಡ್ ಲಸಿಕೆ ನೀಡಲು ಮುಂದೆ ಬಂದಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರದಂದು ಆಕ್ಟ್ ಫೈಬರ್ ನೆಟ್ ಕಂಪನಿ ಸಿಇಒ ಬಾಲಾ ಮಲ್ಲಾಡಿ ಜತೆ ಮಾತುಕತೆ ನಡೆಸಿದ ನಂತರ ಈ ಮಾಹಿತಿ ನೀಡಿದ ಅವರು, “ಈಗಾಲೇ 5,000 ಲಸಿಕೆಯನ್ನು ತನ್ನ ಸಿಎಸ್‌ಆರ್ ನಿಧಿಯಡಿ ಕಂಪನಿ ದಾನ ಮಾಡಿದೆ. ಮುಂದಿನ ದಿನಗಳಲ್ಲಿ ಹಂತವಾಗಿ 50,000 ಲಸಿಕೆಗಳನ್ನು ನೀಡಲಿದೆ. ಇದಕ್ಕಾಗಿ ಕಂಪನಿ ಸುಮಾರು ನಾಲ್ಕು ಕೋಟಿ ರೂ ಖರ್ಚು ಮಾಡುತ್ತಿದೆ ಎಂದರು.
ಇಷ್ಟೂ ಲಸಿಕೆಯನ್ನು ಬೆಂಗಳೂರು ನಗರದ 28 ವಿಧಾನಸಭೆ ಕ್ಷೇತ್ರಗಳ ನಾಗರೀಕರಿಗೆ ನೀಡಲಾಗುವುದು. ಆಯಾ ಕ್ಷೇತ್ರಗಳ ಶಾಸಕರು ಯಾವ ಪ್ರದೇಶದಲ್ಲಿ ಲಸಿಕೀಕರಣ ಮಾಡಬೇಕು ಎಂದು ತಿಳಿಸಿದರೆ ಆಯಾ ಪ್ರದೇಶಕ್ಕೆ ಪೂರೈಕೆ ಮಾಡಲಾಗುವುದು ಎಂದರು.
ಜನರ ಆರೋಗ್ಯ ದೃಷ್ಟಿಯಿಂದ ಆಕ್ಟ್ ಫೈಬರ್ ನೆಟ್ ಕಂಪನಿ ಇಷ್ಟು ಬೃಹತ್ ಪ್ರಮಾಣದಲ್ಲಿ ಲಸಿಕೆ ನೀಡುವುದು ಸಂತಸದ ವಿಷಯ. ಇದಕ್ಕಾಗಿ ನಾನು ಕಂಪನಿಗೆ ಕೃತಜ್ಞತೆ ಸಲ್ಲಿಸುವೆ. ಇದೇ ರೀತಿ ಖಾಸಗಿ ಕ್ಷೇತ್ರವು ಇನ್ನೂ ಹೆಚ್ಚು ಪ್ರಮಾಣದಲ್ಲಿ ಲಸಿಕೆ ಸರಕಾರದ ಜತೆ ನಿಂತು ಲಸಿಕೆ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಈ ಕುರಿತು ಬಾಲಾ ಮಲ್ಲಾಡಿ ಮಾತನಾಡಿ, ಸರ್ಕಾರದ ಜತೆ ಲಸಿಕೆ ನೀಡುವ ಕೆಲಸದಲ್ಲಿ ಭಾಗಿಯಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ. ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ಇರುವವರಿಗೆ ಲಸಿಕೆ ನೀಡುವುದು ಪುಣ್ಯದ ಕೆಲಸ. ಎಲ್ಲರೂ ಲಸಿಕೆ ಹಾಕಿಸಿಕೊಂಡು ಸುರಕ್ಷಿತವಾಗಿ ಇರಬೇಕು ಎಂದು ಹೇಳಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post