ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹೃದಯಘಾತದಿಂದ ನಿಧನ ಹೊಂದಿದ ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಇಂದು ಕಂಠೀರವ ಸ್ಟೇಡಿಯಂನಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಿನ್ನೆ ಬೆಳಗ್ಗೆ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 6-6:30ರ ಸುಮಾರಿಗೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆಂದು ಹೇಳಲಾಗುತ್ತಿದೆ.
ಇಂದು ಮಧ್ಯಾಹ್ನ 3 ಗಂಟೆಯವರಿಗೂ ನೆಚ್ಚಿನ ನಟನ ಅಂತಿಮ ದರ್ಶನವನ್ನು ಪಡೆಯಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದ್ದು, ನಂತರ ಕಂಠೀರವ ಸ್ಟುಡಿಯೋದವರೆಗೂ ಮೆರವಣಿಗೆ ನಡೆಸಲಾಗುವುದು, ಹೀಗಾಗಿ 3 ಗಂಟೆಯ ಬಳಿಕ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಬರದಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಪುನೀತ್ ಪುತ್ರಿ ಧ್ರುತಿ ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ಸಂಜೆ 4.15ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಧ್ರುತಿ ಅವರು ಬಂದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಇನ್ನೂ ಹಾಗೂ ಆಪ್ತವಲಯಕ್ಕಷ್ಟೇ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ ಎನ್ನಲಾಗಿದೆ.
ಪುನೀತ್ ಅಂತ್ಯಕ್ರಿಯೆ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಪುನೀತ್ ರಾಜ್ ಕುಮಾರ್ ಅವರ ಕುಟುಂಬಸ್ಥರ ನಿರ್ಧಾರದ ಮೇರೆಗೆ ಮುಂದಿನ ಹಂತದ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ. ಅಂತ್ಯಕ್ರಿಯೆ ಯಾವಾಗ ನಡೆಸುವುದು ಎಂಬುದನ್ನು ಪುನೀತ್ ಅವರ ಕುಟುಂಬಸ್ಥರೇ ನಿರ್ಧರಿಸುತ್ತಾರೆ. ಇಂದು ಸಂಜೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ಅವರು ಮಾತನಾಡಿ, ಸಂಜೆ 6 – 6.30ಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು. ಮುಖ್ಯಮಂತ್ರಿಗಳ ಆದೇಶದಂತೆ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಭಿಮಾನಿಗಳು ಸ್ಪಂದಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಸಚಿವರಿಂದ ಸ್ಥಳ ಪರಿಶೀಲನೆ
ಡಾ.ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲೇ ನಡೆಯುತ್ತಿರುವ ಸಿದ್ಧತೆಯನ್ನು ಅಬಕಾರಿ ಸಚಿವ ಕೆ.ಗೋಪಾಲಯ್ಯ ಬೆಳಿಗ್ಗೆ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ವಿಶ್ವನಾಥ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಬಿಬಿಎಂಪಿ ಅಧಿಕಾರಿಗಳು, ಇಂಜಿನಿಯರ್‌ಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post