ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿಯ ರವೀಂದ್ರ ಕಲಾಕ್ಷೇತ್ರದಲ್ಲಿ ತಮೋಹ ಆರ್ಟ್ಸ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲ ಪ್ರತಿಭೆ ಪಿ. ಆದ್ಯಾ ಮಯ್ಯ ಅವರ ಅದ್ಬುತ ಪ್ರದರ್ಶನ ಗಮನ ಸೆಳೆಯಿತು.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅದ್ಬುತ ಪ್ರದರ್ಶನ ನೀಡಿ ಗಮನ ಸೆಳೆದ 10 ವರ್ಷದ ಬಾಲಪ್ರತಿಭೆ ಪಿ. ಆದ್ಯಾ ಮಯ್ಯ, ವಿದುಷಿ ಶ್ರೀಮತಿ ಗಾಯತ್ರಿ ಮಯ್ಯ ಅವರ ಪುತ್ರಿ ಹಾಗೂ ಶಿಷ್ಯೆಯಾಗಿದ್ದಾರೆ.
ದಶರೂಪ ವೈಭವಂ ಎಂಬ ಭವ್ಯ ನೃತ್ಯರೂಪಕದಲ್ಲಿ, ಆದ್ಯಾ ಭಕ್ತ ಪ್ರಹ್ಲಾದ ಮತ್ತು ಶ್ರೀಕೃಷ್ಣನ ಕಾಳಿಂಗ ನೃತ್ಯ ರೂಪವನ್ನು ಅತೀವ ಮನೋಹರವಾಗಿ ಪ್ರದರ್ಶಿಸಿದಳು. ತನ್ನ ಭಾವಭಂಗಿ ಮತ್ತು ನೃತ್ಯಕೌಶಲ್ಯದಿಂದ ಪ್ರೇಕ್ಷಕರ ಮನಗೆದ್ದಳು.
ಇದರೊಂದಿಗೆ ಅವಳು ಕೊನ್ನಕ್ಕೋಲ್ ಕಲೆಗೂ ತೊಡಗಿ, ತಮ್ಮ ಗುರು ಶ್ರೀ ಕೊನ್ನಕ್ಕೋಲ್ ಸೋಮಶೇಖರ ಜೋಯಿಸ್ ಅವರ ಮಾರ್ಗದರ್ಶನದಲ್ಲಿ ಆದಿತಾಳ ತನಿ ಆವರ್ತನವನ್ನು ನಿರೂಪಿಸಿದಳು. ಈ ಅಪೂರ್ವ ಪ್ರದರ್ಶನವು ಪ್ರೇಕ್ಷಕರಿಂದಲೂ, ಮಾನ್ಯ ಮುಖ್ಯ ಅತಿಥಿಗಳಿಂದಲೂ ಅಪಾರ ಮೆಚ್ಚುಗೆಯನ್ನು ಗಳಿಸಿತು.
ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ದಶರೂಪ ವೈಭವಂ ನೃತ್ಯ ಪ್ರದರ್ಶನ
ಇನ್ನು, ಇದೇ ತಮೋಹ ಆರ್ಟ್ಸ್ ಫೌಂಡೇಶನ್ ಸಂಸ್ಥೆಯು ಒಂಭತ್ತನೇ ವಾರ್ಷಿಕೋತ್ಸವವು ರವೀಂದ್ರ ಕಲಾಕ್ಷೇತ್ರದಲ್ಲಿ ಆ.24ರಂದು ಅದ್ದೂರಿಯಾಗಿ ನೆರವೇರಿಸಿತು.
ನಾಲ್ಕು ವರ್ಷದಿಂದ ಐವತ್ತು ವರ್ಷದ ಒಳಗಿನ ಎಪ್ಪತ್ತಕ್ಕೂ ಹೆಚ್ಚು ಕಲಾವಿದರು ದಶರೂಪ ವೈಭವಂ ಎಂಬ ಭವ್ಯ ಭರತನಾಟ್ಯ ಯ ರೂಪಕವನ್ನು ಪ್ರದರ್ಶಿಸಿ, ರಸಿಕರನ್ನು ಮುದಗೊಳಿಸಿದರು.
ಕಾರ್ಯಕ್ರಮಕ್ಕೆ ಡಾ. ದರ್ಶಿನಿ ಮಂಜುನಾಥ್ (ನೃತ್ಯ ದಿಶಾ ಟ್ರಸ್ಟ್) ಹಾಗೂ ಶಶಿಕಲಾ ವೆಂಕಟೇಶ್ (ನಾಟ್ಯಸುಧಾ ಅಕಾಡೆಮಿ) ಅತಿಥಿಗಳಾಗಿ ಆಗಮಿಸಿದ್ದರು.
ಸಂಸ್ಥೆಯ ನಿರ್ದೇಶಕಿ ವಿದುಷಿ ಗಾಯತ್ರಿ ಮಯ್ಯ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಆತ್ಮವಿಶ್ವಾಸ ಹಾಗೂ ಮೆಚ್ಚುಗೆ ಗಳಿಸಿದರು.
ಜಯನಗರ ರಾಯರ ಮಠದಲ್ಲಿ ನೃತ್ಯ ಸೇವೆ
ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಮೊನ್ನೆ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಹಾಮಂಗಳಾರತಿ, ಅನ್ನದಾನ ಸೇವೆಗಳು ಜರುಗಿದವು.
ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ ಗಜವಾಹನೋತ್ಸವ ಪಲ್ಲಕ್ಕಿ ಉತ್ಸವ ತೊಟ್ಟಿಲು ಸೇವೆ, ಅಷ್ಟಾವಧಾನ ಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ವಿದುಷಿ ಡಾ, ವಿದ್ಯಾ ಎಸ್. ಅವರ ನಿರ್ದೇಶನದಲ್ಲಿ ನೃತ್ಯ ಲೋಕ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಿತ್ತು ಎಂದು ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post