ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರಾಥಮಿಕ ಹಂತದಲ್ಲಿ 10 ದಿನಗಳ ಕಾಲ ಲಾಕ್‍ಡೌನ್ ಜಾರಿ ಮಾಡುವುದು ಸೂಕ್ತ ಎಂದು ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ಮಾಡಿದೆ ಎನ್ನಲಾಗಿದೆ.
ವಿಧಾನಸೌಧದಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಸಮಿತಿ ಸದಸ್ಯರು ಬೆಂಗಳೂರಿನಲ್ಲಿ 10 ದಿನ ಲಾಕ್‍ಡಾನ್ ಜಾರಿ ಮಾಡುವುದು ಸೂಕ್ತ. ಇದರ ಫಲಿತಾಂಶವನ್ನು ನೋಡಿಕೊಂಡು ಸೋಂಕು ಹೆಚ್ಚಿರುವ ಬೇರೆ ಬೇರೆ ಜಿಲ್ಲೆಗಳಿಗೂ ಮುಂದಿನ ಹಂತದಲ್ಲಿ ವಿಸ್ತರಣೆ ಮಾಡಬಹುದು ಎಂದು ಸಚಿವ ಸುಧಾಕರ್‌ಗೆ ಸಲಹೆ ಮಾಡಿದರು ಎನ್ನಲಾಗಿದೆ.
ಕಳೆದ 20 ದಿನಗಳಿಂದ ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಒಟ್ಟು ಸೋಂಕಿನ ಪ್ರಕರಣಗಳಲ್ಲಿ ಶೇ.80ರಿಂದ 85ರಷ್ಟು ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಪತ್ತೆಯಾಗುತ್ತಿದೆ. ಹೀಗಾಗಿ ಸರ್ಕಾರ ಲಾಕ್‍ಡೌನ್ ಮಾಡುವುದು ಸೂಕ್ತ ಎಂದು ತಜ್ಞರ ಸಲಹಾ ಸಮಿತಿ ಸದಸ್ಯರಲ್ಲೊಬ್ಬರಾದ ಡಾ.ಗಿರಿಧರ್ ಬಾಬು ಮನವಿ ಮಾಡಿದರು ಎಂದು ತಿಳಿದುಬಂದಿದೆ.
ಆದರೆ ಇದನ್ನು ಒಪ್ಪದ ಸುಧಾಕರ್ ಲಾಕ್‍ಡೌನ್ ಜಾರಿ ಮಾಡುವುದನ್ನು ಬಿಟ್ಟು ಬೇರೆ ಯಾವುದಾದರೂ ಮಾರ್ಗೋಪಾಯಗಳಿದ್ದರೆ ನೀಡಿ. ಸರ್ಕಾರ ಅದನ್ನು ಚಾಚು ತಪ್ಪದೆ ಅನುಷ್ಠಾನ ಮಾಡಲಿದೆ ಎಂದರು.
ಲಾಕ್‍ಡೌನ್ ಜಾರಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಸುತಾರಾಂ ಒಪ್ಪುತ್ತಿಲ್ಲ. ಎಲ್ಲ ಆರ್ಥಿಕ ಚಟುವಟಿಕೆಗಳು ಬಂದ್ ಆದರೆ ಸರ್ಕಾರದ ಬೊಕ್ಕಸಕ್ಕೆ ಯಾವುದೇ ರೀತಿಯ ಆದಾಯ ಬರುವುದಿಲ್ಲ. ಹೀಗಾದರೆ ಸರ್ಕಾರ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆಂದು ತಿಳಿಸಿದರು.
ಈಗಾಗಲೇ 8 ಜಿಲ್ಲೆಗಳಲ್ಲಿ ಕೊರೊನಾ ಕರ್ಫ್ಯೂ ವಿಧಿಸಿದ್ದೇವೆ. ಇದರಿಂದ ವ್ಯಕ್ತವಾಗುವ ಫಲಿತಾಂಶವನ್ನು ನೋಡಿಕೊಂಡು ಮುಂದೆ ತೀರ್ಮಾನಿಸೋಣ. ಅಗತ್ಯಬಿದ್ದರೆ ಇನ್ನು ಕೆಲವು ಕಡೆ ಕರ್ಫ್ಯೂ ಜಾರಿ ಮಾಡಲಾಗುವುದು. ಮೈಕ್ರೋ ಕಂಟೈನ್ಮೆಂಟ್ ಮತ್ತು ಕಂಟೋನ್ಮೆಂಟ್ ವಲಯಗಳನ್ನು ಹೆಚ್ಚಳ ಮಾಡಲಾಗುವುದು ಎಂದರು.
80 ಸಾವಿರಿಂದ ಒಂದು ಲಕ್ಷದವರೆಗೆ ಕೋವಿಡ್ ಟೆಸ್ಟ್ ನಡೆಸುವ ಗುರಿ ನೀಡಲಾಗಿದೆ. ಸಾಧ್ಯವಾದರೆ ಇನ್ನಷ್ಟು ಕಂಟೈನ್ಮೆಂಟ್ ವಲಯಗಳನ್ನು ಹೆಚ್ಚಿಸಲಾಗುವುದು. ಅಲ್ಲದೆ ಧಾರ್ಮಿಕ, ಸಭೆ ಸಮಾರಂಭಗಳು, ಮದುವೆ ಮಂಟಪಗಳಿಗೂ ನಿರ್ಬಂಧ ಹಾಕಲಾಗುವುದು. ಲಾಕ್‍ಡೌನ್ ಜಾರಿಯಾದರೆ ಜನರಿಗೆ ನೇರವಾಗಿ ಹೊಡೆತ ಬೀಳಲಿದೆ. ಹೀಗಾಗಿ ಸಿಎಂ ಒಪ್ಪುತ್ತಿಲ್ಲ. ಪ್ರಧಾನಿಯವರು ಕೂಡ ಲಾಕ್‍ಡೌನ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಬೇರೆ ಸಲಹೆಗಳನ್ನು ನೀಡಬೇಕು ಎಂದು ಸುಧಾರಕ್ ಸಮಿತಿ ಸದಸ್ಯರಲ್ಲಿ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post