ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) KWJA ಸಂಘದ ಮನವಿ ಮೇರೆಗೆ ಹಿರಿಯ ಪತ್ರಕರ್ತ ದಯಾಶಂಕರ ಮೈಲಿ ಅವರ ಹೃದಯ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 1.50 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ.
ಕನ್ನಡ ಪ್ರಭ ಪತ್ರಿಕೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದ್ದ ಅವರು ಸದ್ಯ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರಾಗಿದ್ದಾರೆ.
ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಅವರು ಲಘು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಸದ್ಯ ಅವರು ವಿಶ್ರಾಂತಿಯಲ್ಲಿದ್ದು ಆರೋಗ್ಯ ಸುಧಾರಿಸುತ್ತಿದೆ.

ದಯಾಶಂಕರ ಮೈಲಿ ಅವರು ಸಂಕಷ್ಟದಲ್ಲಿರುವ ಕಾರಣ ಆ ಕುಟುಂಬಕ್ಕೆ ಆರ್ಥಿಕ ನೆರವು ಕೊಡಿಸುವಂತೆ ಸಂಯುಕ್ತ ಕರ್ನಾಟಕ ಪತ್ರಿಕಾ ಬಳಗ ಮತ್ತು ಅವರ ಸ್ನೇಹಿತರು, ಕೆಯುಡಬ್ಲ್ಯೂಜೆ ಗಮನಕ್ಕೆ ತಂದಿದ್ದರು. ದಯಾಶಂಕರ ಮೈಲಿ ಅವರಿಗೆ ನೆರವು ಕೋರಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸಲ್ಲಿಸಿದ ಮನವಿಯನ್ನು ಪರಿಗಣಿಸಿರುವ ಮುಖ್ಯಮಂತ್ರಿ ಮಾನವೀಯ ದೃಷ್ಟಿಯಿಂದ ಪರಿಹಾರ ಮಂಜೂರು ಮಾಡಿದ್ದಾರೆ.
ಪರಿಹಾರ ಮಂಜೂರು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕೃತಜ್ಞತೆಗಳನ್ನು ಸಲ್ಲಿಸಿದೆ.












Discussion about this post