ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮೂಡಾ ಉರುಳು ಸಿಎಂ ಸಿದ್ದರಾಮಯ್ಯ #CM Siddaramaiah ಅವರಿಗೆ ದಿನದಿಂದ ದಿನಕ್ಕೆ ಬಿಗಿಯಾಗುತ್ತಿರುವ ಬೆನ್ನಲ್ಲೇ ಅವರ ಪತ್ನಿ ತಾವು ಪಡೆದಿದ್ದ 14 ಸೈಟುಗಳನ್ನು ಮೂಡಾಕ್ಕೆ ಹಿಂದಿರುಗಿಸಲು ಹಠಾತ್ ನಿರ್ಧಾರ ಕೈಗೊಂಡಿದ್ದು, ಈ ವಿಚಾರ ವಿವಿಧ ರೀತಿಯ ಚರ್ಚೆಗೆ ಗ್ರಾಸವಾಗಿದೆ.
ಹೌದು… ಈ ಕುರಿತಂತೆ ಸಿಎಂ ಪತ್ನಿ ಪಾರ್ವತಿ #CM Siddaramaiah wife Parvathi ಅವರು, ಮೂಡಾ #MUDA ಆಯುಕ್ತರಿಗೆ ಪತ್ರ ಬರೆದಿದ್ದು, ಪತ್ರಿಕಾ ಹೇಳಿಕೆಯನ್ನೂ ಸಹ ಬಿಡುಗಡೆ ಮಾಡಿದ್ದಾರೆ.
ತಾವೆಂದೂ ಮನೆ, ಆಸ್ತಿ, ಚಿನ್ನ ಹಾಗೂ ಸಂಪತ್ತನ್ನು ಬಯಸಿದವಳಲ್ಲ. ಈ ನಿವೇಶನಗಳು ತೃಣಕ್ಕೆ ಸಮ. ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಪ್ರಜ್ಞಾಪೂರ್ವಕವಾಗಿ ಯಾರೊಂದಿಗೂ ಚರ್ಚಿಸದೆ ಸೈಟು ವಾಪಸು ಮಾಡಿದ್ದೇನೆ. ಇಡೀ ಪ್ರಕರಣದ ತನಿಖೆ ನಡೆಸಿ ಎಂದಿದ್ದಾರೆ.
ಏನಿದೆ ಸಿಎಂ ಪತ್ನಿ ಬರೆದ ಪತ್ರದಲ್ಲಿ?
ನನ್ನ ಪತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದು ಎಂಬ ನಿರ್ಧಾರಕ್ಕೆ ಬದ್ಧಳಾಗಿ ಬದುಕಿದವಳು ನಾನು. ನಾನೆಂದೂ ಮನೆ, ಆಸ್ತಿ, ಚಿನ್ನ, ಸಂಪತ್ತನ್ನು ಬಯಸಿದವಳಲ್ಲ. ಯಾವುದೇ ಕಾರಣಕ್ಕೂ ನನ್ನಿಂದ ಅವರ ರಾಜಕೀಯ ಜೀವನಕ್ಕೆ ಒಂದು ಸಣ್ಣ ಹನಿಯಷ್ಟೂ ಕಳಂಕ ತಟ್ಟಬಾರದೆಂದು ಎಚ್ಚರಿಕೆಯಿಂದ ನಡೆದುಕೊಂಡವಳು. ನನ್ನ ಪತಿಗೆ ರಾಜ್ಯದ ಜನತೆ ಹರಿಸುತ್ತಾ ಬಂದ ಪ್ರೀತಿ ಅಭಿಮಾನಗಳನ್ನು ದೂರದಿಂದಲೇ ಕಂಡು ಸಂತೋಷ ಮತ್ತು ಹೆಮ್ಮೆ ಪಟ್ಟವಳು. ಹೀಗಿದ್ದರೂ ಮೈಸೂರಿನ ಮುಡಾ ನಿವೇಶನಕ್ಕೆ ಸಂಬಂಧಿಸಿ ಕೇಳಿಬಂದ ಆರೋಪಗಳಿಂದ ನಾನು ಘಾಸಿಗೊಂಡಿದ್ದೇನೆ.
ನನ್ನ ಸ್ವಂತ ಸೋದರ ಅರಿಶಿನ-ಕುಂಕುಮದ ಭಾಗವಾಗಿ ಕೊಟ್ಟ ಜಮೀನಿನ ಬಾಬು ಪಡೆದ ನಿವೇಶನಗಳು ಇಷ್ಟೊಂದು ರಾದ್ಧಾಂತವಾಗುತ್ತದೆ, ಇದರಿಂದ ನನ್ನ ಪತಿ ಅನ್ಯಾಯವಾಗಿ ಆರೋಪಗಳನ್ನು ಎದುರಿಸುವಂತಾಗಬಹುದು ಎನ್ನುವುದನ್ನು ನಾನು ಊಹಿಸಿದವಳೂ ಅಲ್ಲ. ನನಗೆ ಈ ನಿವೇಶನ, ಮನೆ, ಆಸ್ತಿ, ಸಂಪತ್ತು ಯಾವುದೂ ಕೂಡ ನನ್ನ ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ಅವರ ನೆಮ್ಮದಿಗಿಂತ ದೊಡ್ಡದಲ್ಲ. ಇಷ್ಟು ವರ್ಷ ಕಾಲ ಅಧಿಕಾರದಲ್ಲಿದ್ದ ಅವರಿಂದ ಏನ ನ್ಯೂ ನನಗಾಗಲೀ, ನನ್ನ ಕುಟುಂಬಕ್ಕಾಗಲೀ ಬಯಸದೇ ಇದ್ದ ನನಗೆ ಈ ನಿವೇಶನೆಗಳು ತೃಣಕ್ಕೆ ಸಮ. ಹೀಗಾಗಿ 14 ಸೈಟ್ ವಾಪಸ್ ನೀಡಲು ನಿರ್ಧರಿಸಿದ್ದೇನೆ.
ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ.464 ರಲ್ಲಿ 3 ಎಕರೆ 16 ಗುಂಟೆ ವಿಸ್ತೀರ್ಣದ ನನ್ನ ಜಮೀನನ್ನು ಪ್ರಾಧಿಕಾರವು ಭೂಸ್ವಾಧೀನವಿಲ್ಲದೆ ಉಪಯೋಗಿಸಿಕೊಂಡಿದೆ. ಇದಕ್ಕಾಗಿ ಮುಡಾ 14 ನಿವೇಶನಗಳನ್ನು ಮಂಜೂರು ಮಾಡಿದೆ. ಈ ನಿವೇಶನಗಳ ಕ್ರಯಪತ್ರ ರದ್ದುಗೊಳಿಸಿ ಹಿಂತಿರುಗಿಸಲು ನಿರ್ಧರಿಸಿದ್ದು, ಸೈಟ್’ಗಗಳನ್ನು ಸಹ ಮುಡಾಕ್ಕೆ ಮರಳಿ ಹಸ್ತಾಂತರಿಸುತ್ತಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ನನ್ನ ಪತಿಯವರ ಅಭಿಪ್ರಾಯ ಏನಿದೆ ಎನ್ನುವುದು ನನಗೆ ತಿಳಿದಿಲ್ಲ. ನನ್ನ ಮಗನ ಬಳಿಯಾಗಲಿ, ನನ್ನ ಕುಟುಂಬದ ಇತರ ಸದಸ್ಯರ ಬಳಿಯಾಗಲಿ ಈ ಬಗ್ಗೆ ಚರ್ಚಿಸಿಲ್ಲ. ಇದು ನಾನು ನನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಪ್ರಜ್ಞಾ ಪೂರ್ವಕವಾಗಿ ಕೈಗೊಂಡಿರುವ ತೀರ್ಮಾನ. ಆರೋಪ ಕೇಳಿ ಬಂದ ದಿನವೇ ನಾನು ಈ ನಿರ್ಧಾರ ಮಾಡಿದ್ದೆ. ಆದರೆ, ಈ ಮುಡಾ ನಿವೇಶನ ಹಂಚಿಕೆ ಆರೋಪವನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದ್ದು, ಈ ಅನ್ಯಾಯದ ವಿರುದ್ದ ಹೋರಾಡಬೇಕು. ಅವರ ಸಂಜೆಗೆ ನಾವು ಬಲಿಯಾಗಬಾರದು ಎಂದು ಕೆಲವು ಹಿತೈಷಿಗಳು ಹೇಳಿದ ಕಾರಣಕ್ಕೆ ನಿವೇಶನ ವಾಪಸು ಮಾಡಬೇಕೆಂಬ ನಿರ್ಧಾರ ಕೈಬಿಟ್ಟಿದ್ದೇನೆ ಎಂದಿದ್ದಾರೆ.
ಅಲ್ಲದೇ, ಈ ನಿವೇಶನಗಳನ್ನು ವಾಪಸು ನೀಡುವುದರ ಜೊತೆಗೆ ಮುಡಾಕ್ಕೆ ಸಂಬಂಧಿಸಿದ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post