ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಿಲ್ಲಾಧಿಕಾರಿಗಳಿಗೆ ಮಹಾರಾಜರು ಎನ್ನುವ ಭಾವನೆ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಜನಸೇವೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಸೂಚನೆ ನೀಡಿದರು.
ವಿಧಾನಸೌಧದ #Vidhanasoudha ಸಮ್ಮೇಳನ ಸಭಾಂಗಣದಲ್ಲಿ ನಡೆದ ಡಿಸಿ ಮತ್ತು ಸಿಇಒ ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಈ ಸೂಚನೆ ನೀಡಿದರು.
ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಲುಪಿಸಲು ಡಿಸಿ-ಎಸ್’ಪಿ-ಸಿಇಒಗಳು ಕ್ರಿಯಾಶೀಲತೆಯಿಂದ, ಸಮನ್ವಯತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರದ ಕಾಳಜಿಗಳು ಜನರಿಗೆ ತಲುಪಲು ಸಾಧ್ಯ ಎಂದರು.
ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಿ. ಡಿಸಿ, ಡಿಎಚ್’ಒಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ಷಿಪ್ರವಾಗಿ ಕೆಲಸ ಮಾಡಿ ಎಂದು ಸೂಚಿಸಿದರು.
ಇಷ್ಟು ದಿನ ಉದಾಸೀನ, ನಿರ್ಲಕ್ಷö್ಯಕ್ಕೆ, ಕರ್ತವ್ಯಲೋಪಕ್ಕೆ ಕೆಳ ಹಂತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇವತ್ತಿನಿಂದ ಹಿರಿಯ ಅಧಿಕಾರಿಗಳನ್ನೂ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.
Also read: ನರ್ಸಿಂಗ್ ವಿದ್ಯಾರ್ಥಿನಿ ಹಾಸ್ಟೆಲ್’ನಲ್ಲಿ ಆತ್ಮಹತ್ಯೆ | ಕಾರಣವೇನು?
ಜನಸಂಪರ್ಕ, ಜನಸ್ಪಂದನ ಸಭೆಗಳಲ್ಲಿ 15-20 ಸಾವಿರ ಅರ್ಜಿಗಳು ಬರುತ್ತವೆ. ನೀವು ಸರಿಯಾಗಿ ಸ್ಥಳೀಯವಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಮಂದಿ ನನ್ನ ಬಳಿಗೆ ಏಕೆ ಬರುತ್ತಾರೆ ಎಂದು ಪ್ರಶ್ನಿಸಿ, ಡಿಸಿ, ಡಿಸಿಒಗಳು ಇರೋದು ಜನಸಂಪರ್ಕ ಸಭೆಗಳಿಗೆ ಬಂದ ಅರ್ಜಿಗಳನ್ನು ಫಾರ್ವಡ್ ಮಾಡಿ ಮುಚ್ಚಳಿಕೆ ಕೊಟ್ಟು ಕೈತೊಳೆದುಕೊಳ್ಳೋಕಾ ಇರೋದು ? ಪರಿಹಾರ ಕೊಡಿಸುವವರು ಯಾರು? ಇದಕ್ಕೇನಾ ನೀವು ಇರೋದು ಎಂದು ಖಾರವಾಗಿ ಪ್ರಶ್ನಿಸಿದರು. ನೀವು ಪರಿಹಾರ ಕೊಡಲಿಲ್ಲ ಅಂತ ನನ್ನ ತನಕ ಬಂದಿದ್ದಾರೆ. ಜನರ ಸಮಸ್ಯೆಗಳ ಅರ್ಜಿಗಳು ಸಕಾರಾತ್ಮಕವಾಗಿ ವಿಲೇವಾರಿ ಆಗಿಲ್ಲ, ಗುಣಾತ್ಮಕವಾಗಿ ವಿಲೇವಾರಿ ಆಗಿಲ್ಲ ಅಂದರೆ ನಿಮ್ಮ ವಿರುದ್ಧ ಕ್ರಮ ಖಚಿತ ಎಂದು ಎಚ್ಚರಿಸಿದರು.
ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಸಮೇತ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಜನರನ್ನು ನೇರ ಭೇಟಿ ಮಾಡುತ್ತಿಲ್ಲ. ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಕಡೆಯೇ ಉಳಿಯಬೇಕು ಎನ್ನುವ ನನ್ನ ಸೂಚನೆ ಸರಿಯಾಗಿ ಪಾಲನೆ ಆಗುತ್ತಿಲ್ಲ. ಪಿಡಿಒಗಳು, ವಿಎಗಳು ಕೆಲಸ ಮಾಡುವ ಜಾಗದಲ್ಲೇ ಉಳಿಯಬೇಕು. ಈ ಬಗ್ಗೆ ಡಿಸಿ, ಸಿಇಒಗಳು ಗಮನ ಹರಿಸಬೇಕು ಎಂದರು.
ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ನೀಡಬೇಕು, ಕುರಿ-ಮೇಕೆಗಳ ಟೆಂಟ್ ಹಾಕಿರುವ ಸ್ಥಳಕ್ಕೇ ಹೋಗಿ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ನೀಡಬೇಕು. ಸಂಚಾರಿ ಕುರಿಗಾಹಿಗಳಿಗೆ ಬಂದೂಕು ಲೈಸೆನ್ಸ್ ಕೊಡುವುದು ಕಡ್ಡಾಯ. ಕುರಿ ಕಳ್ಳತನ ತಡೆಯಲು ಇದು ಅಗತ್ಯ ಎನ್ನುವ ಸ್ಪಷ್ಟ ಸೂಚನೆಗಳನ್ನು ನೀಡಿದರು.
ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತಿದೆ. ಇದನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಅನ್ನು ಕಡ್ಡಾಯವಾಗಿ ನೀಡಬೇಕು. ಪ್ರತೀ ಎರಡು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ನಡೆಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















