ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜ್ಯದಲ್ಲಿ ವಿವಿಧ ಇಲಾಖೆಗಳಿಂದ ಒಟ್ಟು 393 ರೈತ ಉತ್ಪಾದಕರ ಸಂಸ್ಥೆಗಳಿದ್ದು, ಸರ್ಕಾರದಿಂದ ರಚಿಸಲಾಗಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ಆರ್ಥಿಕ ಮತ್ತು ಸಾಂಸ್ಥಿಕ ನೆರವು ನೀಡಿ ಅವುಗಳ ಅಭಿವೃಧ್ಧಿ ಮತ್ತು ಬಲವರ್ಧನೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮೇಲ್ಮನೆ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಎಂ.ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಲಾಯನಯನ ಅಭಿವೃದ್ಧಿ ಇಲಾಖೆಯಿಂದ 130, ಜಲಾಯನಯನ ಅಭಿವೃದ್ಧಿ ಕೇಂದ್ರ ಪುರಸ್ಕೃತ ಯೋಜನೆ ವತಿಯಿಂದ 100, ಕೃಷಿ ಇಲಾಖೆಯಿಂದ 24, ತೋಟಗಾರಿಕೆ 100, ರೇಷ್ಮೆ 13 ಹಾಗೂ ಪಶುಸಂಗೋಪನೆ ಇಲಾಖೆಯಿಂದ 26 ಎಫ್.ಪಿ.ಓ ಸೇರಿದಂತೆ ರಾಜ್ಯದಲ್ಲಿ ಒಟ್ಟು 393 ರೈತ ಉತ್ಪಾದಕರ ಸಂಸ್ಥೆಗಳನ್ನು ತೆರೆಯಲಾಗಿದೆ.ಆದರೆ ವಿವಿಧ ಇಲಾಖೆಗಳ ಪ್ರಾಯೋಜಿತ ಎಫ್.ಪಿ.ಓಗಳನ್ನು ಆರಂಭದಲ್ಲಿ ಮುಚ್ಚುವ ಹಂತ ತಲುಪಿರುವುದು ಯಾವುದೂ ಸರ್ಕಾರಕ್ಕೆ ಗಮನಕ್ಕೆ ಬಂದಿಲ್ಲ. ಸರ್ಕಾರದಿಂದ ರಚಿಸಲಾಗಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ಆರ್ಥಿಕ ಮತ್ತು ಸಾಂಸ್ಥಿಕ ನೆರವು ನೀಡಲಾಗುತ್ತಿದ್ದು, ಅವುಗಳ ಅಭಿವೃಧ್ದಿ ಮತ್ತು ಬಲವರ್ಧನೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ ಅಭಿಯಾನದಡಿಯಲ್ಲಿ ಬರುವ ಪ್ರಧಾನಮಂತ್ರಿಗಳ ಕಿರು ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆ ಯಡಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ 2020-21ನೇ ಸಾಲಿನಲ್ಲಿ 32.46 ಕೋ ರೂ ಅನುದಾನ ಒದಗಿಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಪರಂಪರಾಗತ್ ಕೃಷಿ ವಿಕಾಸ ಯೋಜನೆ(ಪಿಕೆವಿವೈ)ಯಡಿ 11 ಸಾವಯವ ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲು ಕ್ರಮವಹಿಸಲಾಗುತಿದೆ ಎಂದರು.
ತೋಟಗಾರಿಕೆ ಇಲಾಖೆಯಿಂದ ಪಿಕೆವಿವೈಯಡಿ ಎಫ್.ಪಿ.ಓಗಳನ್ನು ರಚಿಸಲು ಅನುಕೂಲವಾಗುವಂತೆ “ಫಾರ್ಮೇಷನ್ ಎಂಡ್ ಪ್ರಮೋಷನ್ ಆಫ್ 10,000 ಎಫ್.ಪಿ.ಓಸ್” ಯೋಜನೆಯಡಿ 11 ಎಫ್.ಪಿ.ಓಗಳನ್ನು ನಿಗದಿಪಡಿಸಲಾಗಿದ್ದು, ಸಣ್ಣ ರೈತರ ಕೃಷಿ ವ್ಯವಹಾರ ಒಕ್ಕೂಟ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ, ನಬಾರ್ಡ್ ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ಸಂಸ್ಥೆಗಳು ಅನುಷ್ಠಾನಗೊಳಿಸುತ್ತಿವೆ ಎಂದು ಬಿ.ಸಿ.ಪಾಟೀಲ್ ಸದನಕ್ಕೆ ವಿವರಿಸಿದರು.
ರೈತರ ಕೃಷಿ ಆದಾಯ ದ್ವಿಗುಣಕ್ಕೆ ವಿವಿಧ ಕಾರ್ಯಕ್ರಮಗಳ ಜಾರಿ:
ರಾಜ್ಯದಲ್ಲಿ ರೈತರ ಕೃಷಿ ಆದಾಯ ದ್ವಿಗುಣಗೊಳಿಸಲು ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿಯ ವಿಸ್ತರಣೆ ಹಾಗೂ ಜನಪ್ರಿಯತೆ ಕಾರ್ಯಕ್ರಮ ಮತ್ತು ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿ ವಿಸ್ತರಣೆಯ ಬಲವರ್ಧನೆ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಮೇಲ್ಮನೆಯಲ್ಲಿ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ವಿಸ್ತರಣೆಯ ಬಲವರ್ಧನೆ ಕಾರ್ಯಕ್ರಮಗಳಡಿಯಲ್ಲಿ ದೊರೆಯುವ ಸಹಾಯಧನ, ಆರ್ಥಿಕ ನೆರವು ಮತ್ತು ಇತರೆ ಸೌಲಭ್ಯಗಳು ಕೇಂದ್ರ ಹಾಗೂ ರಾಜ್ಯದ 60:40 ಪಾಲು ಇದ್ದು, 2022 ನೇ ಸಾಲಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಯಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಮಟ್ಟದಲ್ಲಿ ಸೂಕ್ತ ಕಾರ್ಯತಂತ್ರ ಮತ್ತು ಸೂಕ್ತ ಶಿಫಾರಸ್ಸುಗಳನ್ನು ನೀಡಲು ಅಂತರ ಮಂತ್ರಾಲಯಗಳ ಸಮಿತಿ ರಚಿಸಲಾಗಿದೆ. ಆದಾಯ ದ್ವಿಗುಣಗೊಳಿಸುವ ಬಗ್ಗೆ ಪರಾಮರ್ಶೆಗಾಗಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಿಭಾಗಿಯ ನಿರ್ದೇಶಕರು, ಎಸ್.ಎಲ್.ಬಿ.ಸಿ ಕನ್ವೀನರ್ ಬ್ಯಾಂಕ್, ನಬಾರ್ಡ್ ಮತ್ತು ಎಲ್ಲಾ ಕೃಷಿ, ತೋಟಗಾರಿಕಾ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಸಂಶೋಧನಾ ನಿರ್ದೇಶಕರನ್ನು ಸದಸ್ಯರನ್ನಾಗಿಸಲಾಗಿದೆ ಎಂದು ವಿವರಿಸಿದರು.
ರೈತ ಸಂಪರ್ಕ ಕೇಂದ್ರಗಳನ್ನು ಕ್ರಿಯಾಶೀಲ ಕೇಂದ್ರಗಳಾಗಿ ಬಲಪಡಿಸಲು ಹಾಗೂ ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಪ್ರತಿತಿಂಗಳ ಮೊದಲನೇ ಹಾಗೂ ಮೂರನೇ ವಾರದಲ್ಲಿ ರೈತರೊಂದಿಗೆ ತಳಮಟ್ಟದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಸಭೆ ನಡೆಸುತ್ತಿದ್ದು, ಕಾರ್ಯತಂತ್ರಗಳನ್ನು ಸಿದ್ಧಪಡಿಸಲು ಮತ್ತು ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಸಮಗ್ರ ಕೃಷಿ ಪದ್ಧತಿಯ ವಿಸ್ತರಣೆ ಹಾಗೂ ಜನಪ್ರಿಯತೆ ಕಾರ್ಯಕ್ರಮಗಳನ್ನು ಅಳವಡಿಸಲು ಆರ್.ಕೆ.ವಿ.ಐ ಯೋಜನೆಯಡಿ 72.34 ಕೋ.ರೂ ಅನುದಾನವನ್ನು ಒದಗಿಸಿ 2 ವರ್ಷಗಳಲ್ಲಿ ರಾಜ್ಯದ ಎಲ್ಲಾ ಗ್ರಾ.ಪಂಗಳಲ್ಲಿ ಸಮಗ್ರ ಕೃಷಿ ಪದ್ಧತಿ ಮಾದರಿ ಸ್ಥಾಪನೆಗೆ ಹೆಜ್ಜೆಯಿಟ್ಟಿರುವುದಾಗಿ ಕೃಷಿ ಸಚಿವರು ಮೇಲ್ಮನೆಗೆ ಮಾಹಿತಿ ನೀಡಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post