ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಸಾರ ರಚನೆಯಾಗುವ ನೂತನ ಪಠ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಾಧನೆಗಳು, ಯೋಜನೆಗಳ ವಿಚಾರಗಳನ್ನು ಸೇರ್ಪಡೆಗೊಳಿಸಲು ಇಸ್ರೋದಿಂದ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ನಗರದ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಇಸ್ರೋ ಅಂತರಿಕ್ಷ ಭವನದಲ್ಲಿ ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ಹಾಗೂ ಹಿರಿಯ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಸಚಿವ ನಾಗೇಶ್ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಧಾರಿತ ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಮನೋಭಾವ ಮೂಡಿಸುವುದರ ಮೇಲೆ ಭಾರತದ ಭವಿಷ್ಯವಿದೆ. ಶಾಲಾ ಶಿಕ್ಷಣದಲ್ಲಿ ಸರಳವಾಗಿ ಅರ್ಥವಾಗುವಂತೆ ವಿಜ್ಞಾನ, ಗಣಿತವನ್ನು ಪಾಠ ಮಾಡಬೇಕು. ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮತ್ತು ಕುತೂಹಲ ಮೂಡಿಸುವ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ ಎಂದು ಡಾ. ಕೆ. ಶಿವನ್ ಹಲವು ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ. ಹೀಗಾಗಿ, ಡಾ.ಕೆ ಶಿವನ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು. ರಾಜ್ಯದಲ್ಲಿ ಎನ್ಇಪಿ ಜಾರಿಗೆ ಅಗತ್ಯವಾದ ಎಲ್ಲ ರೀತಿಯ ಸಲಹೆ, ಸೂಚನೆ, ಮಾರ್ಗದರ್ಶನವನ್ನು ನೀಡಿ ಸಹಕಾರ ನೀಡುವ ಭರವಸೆಯನ್ನು ಕೆ. ಶಿವನ್ ನೀಡಿದ್ದಾರೆ. ಅದಕ್ಕಾಗಿ ಇಸ್ರೋದಿಂದ ಸಮಿತಿಯೊಂದನ್ನು ರಚಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶಗಳು, ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಅಪಾರ ಪ್ರತಿಭೆ ಇದೆ. ಉತ್ತಮ ವೇದಿಕೆ, ಅವಕಾಶಗಳು, ಜ್ಞಾನಾರ್ಜನೆಗೆ ಬೇಕಾದ ಸೌಕರ್ಯಗಳನ್ನು ಒದಗಿಸಬೇಕು. ವಿಷಯಗಳನ್ನು ಸರಳವಾಗಿ ಅರ್ಥೈಸಬೇಕು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸರಳವಾಗಿ ಅರ್ಥವಾಗುವಂತೆ ಪಾಠ ಮಾಡಬೇಕು. ಅದಕ್ಕೆ ತಕ್ಕಂತೆ ಪಠ್ಯಗಳನ್ನು ಸಿದ್ದಪಡಿಸಲು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಟಾಸ್ಕ್‌ಫೋರ್ಸ್ ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವ ನಾಗೇಶ್ ಹೇಳಿದರು.
ಕೌಶಲ್ಯದ ಶಿಕ್ಷಣ ಇಂದಿನ ಅಗತ್ಯವಾಗಿದೆ. ವಿಜ್ಞಾನ, ಬಾಹ್ಯಾಕಾಶದ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಎನ್ಇಪಿ ಜಾರಿ ಕುರಿತು ರಾಜ್ಯ ಸರಕಾರಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವು, ಸಲಹೆಗಳನ್ನು ನೀಡುತ್ತೇವೆ ಎಂದು ಸಚಿವರೊಂದಿಗೆ ಮಾತುಕತೆ ವೇಳೆ ಇಸ್ರೋ ಅಧ್ಯಕ್ಷ ಕೆ ಶಿವನ್ ತಿಳಿಸಿದರು.
ಸ್ಪೇಸ್ ಆನ್ ವೀಲ್ಸ್ ರಾಜ್ಯದ ಇತರ ಭಾಗಗಳಿಗೆ:
ಇಸ್ರೋದ ಸಾಧನೆಗಳು, ಭವಿಷ್ಯದ ಯೋಜನೆಗಳು, ಸೌರಮಂಡಲ, ಬಾಹ್ಯಾಕಾಶದ ಕುರಿತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿ, ಆಸಕ್ತಿ ಮೂಡಿಸಲು ಇಸ್ರೋ ಆರಂಭಿಸಿರುವ ಸ್ಪೇಸ್ ಆನ್ ವೀಲ್ಸ್ ವಾಹನ ಬೆಂಗಳೂರು ನಗರ ಮತ್ತು ಸುತ್ತ ಮುತ್ತಲಿನ ಭಾಗಗಳಲ್ಲಿ ಮಾತ್ರ ಸಂಚರಿಸುತ್ತಿತ್ತು ಮುಂದಿನ ದಿನಗಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮಾಂತರ ಭಾಗಗಳ ಶಾಲೆಗಳಿಗೂ ತೆರಳಲಿದೆ ಎಂದು ಇಸ್ರೋ ಅಧಿಕಾರಿಗಳು ಮಾಹಿತಿ ನೀಡಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post