ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಉದಾಸಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರಕ್ತ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ (81) ಕಳೆದ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದರು.
ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಅವರು 2013 ಮತ್ತು 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.
ನಾಳೆ ಹಾವೇರಿಯ ಹಾನಗಲ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಉದಾಸಿ ಪುತ್ರ ಶಿವಕುಮಾರ್ ಉದಾಸಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಂತಾಪ:
ಹಿರಿಯ ಶಾಸಕ ಸಿ.ಎಂ.ಉದಾಸಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿಯಾಗಿದ್ದರು. ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಭಗವಂತ ಅವರ ಕುಟುಂಬದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post