ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಸತತವಾಗಿ ಮಳೆಯಾಗುತ್ತಿದ್ದು, ಮುಂಗಾರು ಮತ್ತೆ ಚುರುಕುಗೊಂಡಿದೆ. ಜೂನ್ 28ರಿಂದ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಿದ್ದು, ಜೂನ್ 28 ರಿಂದ ಜುಲೈ 1ರ ತನಕ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಪ್ಪ, ಎನ್. ಆರ್. ಪುರ, ಕೊಡಗು, ಮಡಿಕೇರಿ, ನಾಪೊಕ್ಲು, ತಲಕಾವೇರಿ, ಮೈಸೂರು ನಗರದಲ್ಲಿ ಮಳೆಯಾಗಿದೆ. ಜೂನ್ 29ರಿಂದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾದರೆ, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳಲ್ಲಿ ಶನಿವಾರದಿಂದಲೇ ಮಳೆ ಆರಂಭವಾಗಿದೆ. ಬೆಂಗಳೂರಿನಲ್ಲಿ ಶನಿವಾರ ಮೋಡ ಕವಿದ ವಾತಾವರಣವಿತ್ತು, ಸಂಜೆಯ ವೇಳೆಗೆ ಕೆಲವು ಬಡಾವಣೆಗಳಲ್ಲಿ ಮಳೆಯಾಗಿದೆ.
ಕಾಪು ತಾಲೂಕು ಮೂಳೂರಿನಲ್ಲಿ ಮನೆ ಚಾವಣಿ ಕುಸಿದು ಮಹಿಳೆ ಗಾಯಗೊಂಡಿದ್ದಾರೆ. ಹಾಸನ ಜಿಲ್ಲೆಯ ದ್ಯಾವೇನಹಳ್ಳಿ ಬಳಿ ಹೇಮಾವತಿ ನಾಲೆಯ ಪಂಪ್ ಹೌಸ್ ಸಮೀಪ 80 ಅಡಿ ಎತ್ತರದಿಂದ ನಾಲೆಗೆ ಮಣ್ಣು ಕುಸಿದು ಬಿದ್ದಿದೆ.
ಸೇಡಂ, ಚಿತ್ತಾಪುರ, ಕಾಳಗಿ, ಯಡ್ರಾಮಿ, ಸುರಪುರ, ಕುಷ್ಟಗಿ ಮತ್ತು ಬೀದರ್‌ನಲ್ಲಿಯೂ ಮಳೆಯಾಗಿದೆ. ಗೋಕರ್ಣದಲ್ಲಿ 5, ಕಾರವಾರದಲ್ಲಿ 4, ಶಿರಸಿಯಲ್ಲಿ 3, ಕುಂದಾಪುರ ಮತ್ತು ಪುತ್ತೂರಿನಲ್ಲಿ 2 ಸೆಂ. ಮೀ. ಮಳೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















