ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಮ್ಮ ಅವಧಿಯಲ್ಲಿ ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ದುರ್ಬಳಕೆ ಮಾಡಿದ್ದರೆ ನಮ್ಮನ್ನು ಬಂಧಿಸಲಿ. ನಮ್ಮ ಅವಧಿಯಲ್ಲಿ ಯಾವ ಅಧಿಕಾರಿ, ಮಂತ್ರಿಗಳು ಅದಕ್ಕೆ ಅವಕಾಶ ನೀಡಿದ್ದರೋ ನನಗೆ ಗೊತ್ತಿಲ್ಲ. ಇದು ಗಂಭೀರ ಅಪರಾಧವಾಗಿದೆ. ಚುನಾವಣಾ ಆಯೋಗವು ಈ ವಿಚಾರವನ್ನು ಡಿವಿಸಿಗೆ (ವಿಭಾಗೀಯ ಅಧಿಕಾರಿ) ನೀಡಿದ್ದು, ಇದು ಡಿವಿಸಿಯಿಂದ ತನಿಖೆಯಾಗುವ ವಿಚಾರವಲ್ಲ. ನಾಳೆ ನಾವು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲು ಸಮಯ ಕೇಳಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ D K Shivakumar ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಆದೇಶವನ್ನು ಗೌರವ್ ಗುಪ್ತಾ ಅವರು ಏಕಾಏಕಿ ಹಿಂಪಡೆದಿದ್ದಾರೆ. ಆದರೆ ಈಗಾಗಲೇ ಈ ಸಂಸ್ಥೆಯ ಸುಮಾರು 7-8 ಸಾವಿರ ಸಿಬ್ಬಂದಿ ಮನೆ, ಮನೆಗೆ ಹೋಗಿ ಮತದಾರರ ಮಾಹಿತಿ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಕೆಲವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳುತ್ತಿರುವ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದೆ. ಈ ಸಂಸ್ಥೆಯ ಕಾರ್ಯವ್ಯಾಪ್ತಿ ಏನಿದೆ ಎಂದು ನಮ್ಮ ಬಳಿ ಮಾಹಿತಿ ಇದೆ. ಈ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿದ್ದವರಿಂದಲೇ ಮಾಹಿತಿ ಕಲೆ ಹಾಕಿದ್ದೇನೆ. ಅವರು ಜನ ಪ್ರತಿನಿಧಿಗಳ ಬಳಿ ಹೋಗಿ ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಪ್ರತಿ ವಾರ್ಡ್ ನಲ್ಲಿ ಕಾರ್ಪೊರೇಟರ್ ಬಳಿ 1 ಕೋಟಿ ಹಣ ಕೇಳಿದ ಬಗ್ಗೆ ಹಲವರು ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ನಾವು ಕೂಡ ನಮ್ಮದೇ ಆದ ತನಿಖೆ ಮಾಡಿದ್ದೇವೆ.

ನಾವು ಪೊಲೀಸ್ ಕಮಿಷನರ್ ಅವರಿಗೆ ಕೊಟ್ಟಿರುವ ದೂರಿನ ಮಾಹಿತಿಯನ್ನು ಇ ಮೇಲ್ ಮೂಲಕ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇವೆ. ನಾಳೆ ಮಧ್ಯಾಹ್ನ ಚುನಾವಣಾ ಆಯೋಗದ ಅಧಿಕಾರಿಗಳನ್ನು ನಾನು, ಸಿದ್ದರಾಮಯ್ಯ ಹಾಗೂ ಇತರ ನಾಯಕರು ಭೇಟಿ ಮಾಡಲಿದ್ದೇವೆ ಎಂದರು.


ಅನಧಿಕೃತವಾಗಿ ಮಾಹಿತಿ ಕಲೆಹಾಕುವುದು ಅಪರಾಧವಾಗಿರುವಾಗ ಮಾತದಾರರ ಮಾಹಿತಿ ಕಲೆ ಹಾಕಿರುವುದು ಎಷ್ಟು ಸರಿ ಎಂಬ ಪ್ರಶ್ನೆಗೆ, ‘ಸೋಷಿಯಲ್ ಇಂಪಾಕ್ಟ್ ಅಧ್ಯಯನಕ್ಕಾಗಿ ಅವರಿಗೆ ಅನುಮತಿ ನೀಡಲಾಗಿತ್ತು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಸೋಷಿಯಲ್ ಇಂಪಾಕ್ಟ್ ಅಧ್ಯಯನಕ್ಕೆ ಅನುಮತಿ ನೀಡಿದ್ದೇ ಆಗಿದ್ದರೆ, ಕೋವಿಡ್ ಸಮಯದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಮನೆ, ಮನೆಗೆ ಕಳುಹಿಸಿದ್ದು ಏಕೆ? ಅದು ಸೋಷಿಯಲ್ ಇಂಪಾಕ್ಟ್ ಅಲ್ಲವೇ’ ಎಂದು ಕೇಳಿದರು.

ಕಾಂಗ್ರೆಸಿಗರಿಗೆ ಕೆಲಸ ಇಲ್ಲದೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮಾಧ್ಯಮವೊಂದು ಈ ವಿಚಾರವಾಗಿ ವರದಿ ಪ್ರಕಟಿಸಿದ ತಕ್ಷಣವೇ ಬಿಬಿಎಂಪಿ ಆಯುಕ್ತರು ಈ ಅನುಮತಿ ರದ್ದು ಮಾಡುತ್ತಾರೆ. ಆದರೆ ಬಿಬಿಎಂಪಿಯಿಂದ ಈ ಸಂಸ್ಥೆ ವಿರುದ್ಧ ಯಾಕೆ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ? ಸಾವಿರಾರು ಜನಕ್ಕೆ ಬಿಎಲ್ಒ ಎಂದು ನಕಲಿ ಗುರುತಿನ ಚೀಟಿ ನೀಡಿದ ರಿಟರ್ನಿಂಗ್ ಆಫೀಸರ್ ಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಎಲ್ಲರನ್ನು ಬಂಧಿಸಬೇಕು. ಯಾಕೆ ಈ ಕ್ರಮ ಕೈಗೊಂಡಿಲ್ಲ’ ಎಂದು ತಿಳಿಸಿದರು.
ಇವಿಎಂ ಅಕ್ರಮಕ್ಕೂ ಇದಕ್ಕೂ ಸಂಬಂಧವಿದೆಯಾ ಎಂಬ ಪ್ರಶ್ನೆಗೆ, ‘ಈ ಸಂಸ್ಥೆಯವರೇ ನಾವು ಇವಿಎಂ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಅವರು ಇದಕ್ಕಾಗಿ ಪರವಾನಿಗೆ ತೆಗೆದುಕೊಂಡಿದ್ದಾರಾ?’ ಎಂದು ತಿಳಿಸಿದರು.

ಇವಿಎಂ ಹ್ಯಾಕ್ ಮಾಡುವವರು ಇದನ್ನು ಮಾಡದೇ ಇರುತ್ತಾರಾ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, ‘ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿ ಅಥವಾ ಬಿಡಲಿ. ನಾನು ಜವಾಬ್ದಾರಿಯುತ ಪಕ್ಷದ ಅಧ್ಯಕ್ಷನಾಗಿ, ಜವಾಬ್ದಾರಿಯುತ ಮತದಾರನಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಮುಂದಿನ 24 ಗಂಟೆಗಳ ಒಳಗಾಗಿ ಅಂದರೆ ನಾಳೆ ಮಧ್ಯಾಹ್ನ 12 ಗಂಟೆ ಒಳಗೆ ಈ ನಕಲಿ ಬಿಎಲ್ಒ ಗುರುತಿನ ಚೀಟಿ ವಿತರಣೆ ಮಾಡಿದವರು, ಮತದಾರರ ಮಾಹಿತಿ ಕಲೆಹಾಕಿ ಅಕ್ರಮ ಎಸಗಿರುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗವೇ ಇದರಲ್ಲಿ ಭಾಗಿಯಗಿದೆ. ಈ ವಿಚಾರವನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ದೆಹಲಿ ಚುನಾವಣಾ ಆಯೋಗದವರೆಗೂ ತೆಗೆದುಕೊಂಡು ಹೋಗುತ್ತೇವೆ. ರಾಜ್ಯ ಚುನಾವಣಾ ಆಯೋಗ ಈ ವಿಚಾರದ ತನಿಖೆಯನ್ನು ಡಿವಿಸಿಗೆ ನೀಡಿದ್ದಾರೆ. ಈ ಡಿವಿಸಿಯನ್ನು ಮುಖ್ಯಮಂತ್ರಿಗಳು ನೇಮಿಸಿದ್ದಾರೆ. ನಾವು ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡುತ್ತಿರುವಾಗ ಅವರ ಕೈಕೆಳಗಿನ ಅದಿಕಾರಿಗಳು ತನಿಖೆ ಮಾಡಲು ಸಾಧ್ಯವೇ? ಈ ಪ್ರಕರಣ ವಿಚಾರದಲ್ಲಿ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡುತ್ತೇವೆ. ಆಕ್ಸಿಜನ್ ದುರಂತ ಪ್ರಕರಣದಲ್ಲಿ ನ್ಯಾಯಾಲಯ ಹೇಗೆ ಜವಾಬ್ದಾರಿ ತೆಗೆದುಕೊಂಡು ರಾಜ್ಯದ ಮಾನ ಕಾಪಾಡಿತೋ ಅದೇ ರೀತಿ ಈ ವಿಚಾರದಲ್ಲೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಅವರ ನೇತೃತ್ವದಲ್ಲಿ ಎಲ್ಲ ಮತದಾರರಿಗೆ ತಮ್ಮ ಹಕ್ಕು ಸಿಗುವಂತೆ ಮಾಡಬೇಕು. ಇಂತಹ ನೀಚ ಹಾಗೂ ಭ್ರಷ್ಟ ಸರ್ಕಾರ ಹಾಗೂ ಅಧಿಕಾರಿಗಳ ಬಂಧವಾಗಬೇಕು’ ಎಂದು ಆಗ್ರಹಿಸಿದರು.
ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬೇರೆ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ದೊಡ್ಡ ಪಟ್ಟಿ ಇದೆ. ಇದನ್ನು ನಾನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಅವರು ಪಕ್ಷವನ್ನು ಸೇರುವ ದಿನ ಅವರ ಹೆಸರು ನಿಮಗೆ ತಿಳಿಯುತ್ತದೆ’ ಎಂದು ಸ್ಪಷ್ಟಪಡಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post